
ಮಂಗಳೂರು, 01 ಮಾರ್ಚ್ (ಹಿ.ಸ.):
ಆ್ಯಂಕರ್:
ಪಶ್ಚಿಮ ಏಷ್ಯಾದಲ್ಲಿ ಉಂಟಾದ ಇಸ್ರೇಲ್–ಇರಾನ್ ಸಂಘರ್ಷದ ಪರಿಣಾಮವಾಗಿ ಇರಾನ್ ವಾಯುಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ನಿರ್ಬಂಧ ಜಾರಿಯಾದ ಹಿನ್ನೆಲೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಂದ ಗಲ್ಪ್ ರಾಷ್ಟ್ರಗಳಿಗೆ ತೆರಳುವ ಹಲವು ವಿಮಾನಗಳ ಸೇವೆ ತಾತ್ಕಾಲಿಕವಾಗಿ ರದ್ದುಗೊಂಡಿದೆ.
ಮುಖ್ಯವಾಗಿ ದುಬೈ, ಮಸ್ಕತ್, ಬಹರೇನ್ ಹಾಗೂ ಅಬುಧಾಬಿ ಮಾರ್ಗದ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗಲ್ಪ್ ರಾಷ್ಟ್ರಗಳಿಗೆ ತೆರಳುವ ಎಲ್ಲಾ ಏರ್ ಇಂಡಿಯಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಜೊತೆಗೆ ಇಂಡಿಗೋ ಸಂಸ್ಥೆಯ ಕೆಲವು ಸೇವೆಗಳೂ ರದ್ದಾಗಿವೆ.
ರದ್ದಾದ ವಿಮಾನಗಳ ವಿವರ:
ಬೆಳಿಗ್ಗೆ 9.25ರ ಮಂಗಳೂರು–ಮಸ್ಕತ್ (ಏರ್ ಇಂಡಿಯಾ ಎಕ್ಸ್‌ಪ್ರೆಸ್), ಮಧ್ಯಾಹ್ನ 1.20ರ ಮಂಗಳೂರು–ದುಬೈ (ಏರ್ ಇಂಡಿಯಾ ಎಕ್ಸ್‌ಪ್ರೆಸ್), ಸಂಜೆ 7.15ರ ಮಂಗಳೂರು–ದುಬೈ (ಇಂಡಿಗೊ), ರಾತ್ರಿ 8.15ರ ಮಂಗಳೂರು–ದುಬೈ (ಏರ್ ಇಂಡಿಯಾ ಎಕ್ಸ್‌ಪ್ರೆಸ್), ರಾತ್ರಿ 8.55ರ ಮಂಗಳೂರು–ಬಹರೇನ್ (ಏರ್ ಇಂಡಿಯಾ ಎಕ್ಸ್‌ಪ್ರೆಸ್) ಹಾಗೂ ರಾತ್ರಿ 9.05ರ ಮಂಗಳೂರು–ಅಬುಧಾಬಿ (ಇಂಡಿಗೊ) ವಿಮಾನಗಳ ಹಾರಾಟ ರದ್ದುಗೊಂಡಿದೆ.
ಇರಾನ್ ವಾಯುಪ್ರದೇಶ ಬಳಕೆಗೆ ನಿರ್ಬಂಧ ವಿಧಿಸಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೊದಲು ಸಂಬಂಧಿತ ವಿಮಾನ ಸಂಸ್ಥೆಗಳೊಂದಿಗೆ ಹಾರಾಟದ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ವಿಮಾನ ನಿಲ್ದಾಣ ಪ್ರಾಧಿಕಾರಿಗಳು ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa