ಗೃಹ ಲಕ್ಷ್ಮಿ ಹಣದಿಂದ ದೇವಾಲಯ ನಿರ್ಮಾಣಕ್ಕೆ ದೇಣಿಗೆ
ಗದಗ, 01 ಮಾರ್ಚ್ (ಹಿ.ಸ.): ಆ್ಯಂಕರ್:ಕರ್ನಾಟಕ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಮಹತ್ವಾಕಾಂಕ್ಷಿ ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಸ್ವಯಂಪ್ರೇರಣೆಯಿಂದ ದೇವಾಲಯ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡುವ ಮೂಲಕ ಗದಗ ತಾಲ್ಲೂಕಿನ ತಿಮ್ಮಾಪೂರ ಗ್ರಾಮದ ಮಹಿಳೆಯರು ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಕ
ಫೋಟೋ


ಗದಗ, 01 ಮಾರ್ಚ್ (ಹಿ.ಸ.):

ಆ್ಯಂಕರ್:ಕರ್ನಾಟಕ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಮಹತ್ವಾಕಾಂಕ್ಷಿ ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಸ್ವಯಂಪ್ರೇರಣೆಯಿಂದ ದೇವಾಲಯ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡುವ ಮೂಲಕ ಗದಗ ತಾಲ್ಲೂಕಿನ ತಿಮ್ಮಾಪೂರ ಗ್ರಾಮದ ಮಹಿಳೆಯರು ರಾಜ್ಯಕ್ಕೆ ಮಾದರಿಯಾಗಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದ ಗೃಹ ಲಕ್ಷ್ಮಿ ಯೋಜನೆಯಡಿ ತಿಮ್ಮಾಪೂರ ಗ್ರಾಮದಲ್ಲಿ ಒಟ್ಟು 850 ಮಹಿಳೆಯರು ಫಲಾನುಭವಿಗಳಾಗಿದ್ದಾರೆ. ಈ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿರುವ ತಲಾ 2000 ರೂ. ಗೃಹ ಲಕ್ಷ್ಮಿ ಹಣವನ್ನು ಗ್ರಾಮದ ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನದ ಕಟ್ಟಡ ನಿರ್ಮಾಣ ಕಾಮಗಾರಿಗೆ ದೇಣಿಗೆಯಾಗಿ ನೀಡುತ್ತಿದ್ದಾರೆ.

850 ಮಹಿಳೆಯರು ತಲಾ 2000 ರೂ. ನೀಡಿದರೆ ಒಟ್ಟು ಸುಮಾರು 16 ಲಕ್ಷ ರೂ. ಸಂಗ್ರಹವಾಗುವ ನಿರೀಕ್ಷೆ ಇದ್ದು, ಈಗಾಗಲೇ ನಾಲ್ಕು ದಿನಗಳಲ್ಲಿ 2 ಲಕ್ಷ 50 ಸಾವಿರ ರೂ. ಹಣ ಜಮಾವಣೆಗೊಂಡಿದೆ. ಮಹಿಳೆಯರು ತಮ್ಮ ವೈಯಕ್ತಿಕ ಅಗತ್ಯಗಳಿಗೆ ಬಳಸಬಹುದಾದ ಸರ್ಕಾರಿ ನೆರವಿನ ಹಣವನ್ನು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ಕೆ ಮೀಸಲಿಟ್ಟಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನವು ಪ್ರಾಚೀನ ಕಾಲದ ದೇವಾಲಯಗಳ ಶೈಲಿಯಲ್ಲಿ ರೂಪುಗೊಳ್ಳುತ್ತಿದ್ದು, ಈ ಕಟ್ಟಡ ಕಾಮಗಾರಿಗೆ ಸುಮಾರು 1 ಕೋಟಿ ರೂ. ವೆಚ್ಚವಾಗುವ ಅಂದಾಜಿದೆ. ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಈ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸರ್ಕಾರದ ಯೋಜನೆ ಸಮಾಜಮುಖಿಯಾಗಿ ಬಳಕೆಯಾಗುತ್ತಿರುವುದಕ್ಕೆ ತಿಮ್ಮಾಪೂರ ಗ್ರಾಮ ಜೀವಂತ ಉದಾಹರಣೆಯಾಗಿದೆ.

ಈ ಮೂಲಕ ರಾಜ್ಯದಲ್ಲೇ ಮೊದಲ ಬಾರಿಗೆ ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಸಮೂಹವಾಗಿ ದೇಣಿಗೆಯಾಗಿ ನೀಡಿ ತಿಮ್ಮಾಪೂರ ಗ್ರಾಮದ ಮಹಿಳೆಯರು ವಿಶೇಷ ದಾಖಲೆ ಬರೆದಿದ್ದಾರೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande