


ಬಳ್ಳಾರಿ, 28 ಫೆಬ್ರವರಿ (ಹಿ.ಸ.)
ಆ್ಯಂಕರ್: ವಿಜ್ಞಾನ ಸಂಶೋಧನೆಯ ಹಾದಿ ಕಠಿಣವಾಗಿದೆ ಎಂದು ಕಿಷ್ಕಿಂದ ವಿಶ್ವವಿದ್ಯಾಲಯದ ಕುಲಸಚಿವ ಮತ್ತು ಸಹಕುಲಪತಿ ಆಗಿರುವ ಪ್ರೊ. ಯು. ಈರಣ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಿಷ್ಕಿಂದ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಸಂಶೋಧಕರು ಹೊಸದರ ಆವಿಷ್ಕಾರಕ್ಕೆ ಸಾಕಷ್ಟು ಪರಿಶ್ರಮ ಪಡಬೇಕು. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿ ಕ್ಷಣಕ್ಕೂ ಆಗುತ್ತಿರುವ ಸಂಶೋಧನೆಯ ವೇಗಕ್ಕೆ ವಿಜ್ಞಾನಿಗಳೂ ವೇಗವಾಗಿ ಹೊಂದಿಕೊಳ್ಳಬೇಕು. ಸಂಶೋಧನೆಗಳ ಜೊತೆಯಲ್ಲಿ ದೇಶದ ಆರ್ಥಿಕ ಪ್ರಗತಿಗೂ ನೆರವಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಇಸ್ರೋದ ವಿಜ್ಞಾನಿ ವೀರೇಶ್ ದೀಕ್ಷಿತ್ ಅವರು, ವಿಜ್ಞಾನದ ಅಧ್ಯಯನ ದಿನನಿತ್ಯದ ಕಾಯಕ ಆಗಬೇಕು.
ಇಸ್ರೋದ ಉಪಗ್ರಹಗಳ ವೈವಿಧ್ಯತೆ, ಚಂದ್ರಯಾನ, ಮಂಗಳಯಾನ, ಆದಿತ್ಯ ಎಲ್-1, ಗಗನಯಾನ ಹಾಗೂ ತಂತ್ರಜ್ಞಾನದ ಕುರಿತು ವಿವರಣೆಗಳನ್ನು ನೀಡಿದರು.
ಪ್ರೊ. ಸಿ.ವಿ. ರಾಮನ್, ಪ್ರೊ. ಯು.ಆರ್. ರಾವ್ ಅವರಂಥಹಾ ಮಹಾನ್ ವಿಜ್ಞಾನಿಗಳು ಯುವ ಸಂಶೋಧಕರಿಗೆ ಯಾವತ್ತಿಗೂ ಸ್ಫೂರ್ತಿ ಆಗುತ್ತಾರೆ. ಅವರ ಬದುಕು ಮತ್ತು ಸಾಧನೆ ಅನೇಕರಿಗೆ ಪ್ರೇರಣೆ ಆಗಲಿದೆ. ಯುವ ವಿಜ್ಞಾನಿಗಳು ತಪ್ಪದೇ ಸಾಧನೆ ಮಾಡಿರುವ ವಿಜ್ಞಾನಿಗಳ ಜೀವನ ಸಾಹಸಗಾಥೆಗಳನ್ನು ಓದಿ ತಿಳಿಯಬೇಕು ಎಂದರು.
ಕಿಷ್ಕಿಂದ ವಿಶ್ವವಿದ್ಯಾಲಯದ ವಿಜ್ಞಾನ ನಿಕಾಯದ ಡೀನ್ ಪ್ರೊ. ಕೆ.ಎಸ್.ಆರ್. ಶ್ರೀಧರ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ ಡೀನ್ ಅರುಣ್ ಮುಧೋಳ್, ಪ್ರೊ. ಎರಿಸ್ವಾಮಿ, ವೀರಣ್ಣ ಬೆಂತೂರ್, ನಿರಂಜನ್ ಅವರು ವೇದಿಕೆಯಲ್ಲಿದ್ದರು. ಸಂಶೋಧನೆ ಮತ್ತು ನಾವೀನ್ಯತೆಯ ಡೀನ್ ಪ್ರೊ. ಮಂಜುನಾಥ ಅವರು ಸ್ವಾಗತಿಸಿದರು. ಜಮುನಾರಾಣಿ ಕಾರ್ಯಕ್ರಮ ನಿರೂಪಿಸಿದರು.
ಕೀರ್ತಿ ಅವರು ವಂದಿಸಿದರು.
ಕಿಷ್ಕಿಂದ ವಿಶ್ವವಿದ್ಯಾಲಯದ 2025ನೇ ಸಾಲೀನ ಅತ್ಯುತ್ತಮ ಸಂಶೋಧಕ ಪ್ರಶಸ್ತಿಯನ್ನು ವಿಜ್ಞಾನ ನಿಕಾಯದ ಪ್ರೊ. ಮಂಜುನಾಥ ಎಸ್. ಮತ್ತು ಇಂಜಿನೀಯರಿಂಗ್ ಮತ್ತು ತ್ರಂತ್ರಜ್ಞಾನ ನಿಕಾಯದ ಡಾ. ಸಾಹೇಬಗೌಡ ಕರಡ್ಡಿ ಅವರಿಗೆ ಪ್ರದಾನ ಮಾಡಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್