
ಬೆಂಗಳೂರು, 28 ಫೆಬ್ರವರಿ (ಹಿ.ಸ.):
ಆ್ಯಂಕರ್:ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ರಾಜ್ಯವನ್ನು “ದಿವಾಳಿ ರಾಜ್ಯವಾಗಿಸಲು ಮುಂದಾಗಿದೆ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಭ್ರಷ್ಟಾಚಾರ, ಸಿಎಂ ಕುರ್ಚಿ ಕಾಳಗ ಹಾಗೂ ಅನುದಾನ ಕೊರತೆ ಸೇರಿದಂತೆ ಹಲವು ಸಮಸ್ಯೆಗಳ ನಡುವೆ ಸಾವಿರ ದಿನಗಳನ್ನು ಕಳೆಯಲಾಗಿದೆ ಎಂದು ಟೀಕಿಸಿದರು. ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಔಷಧಿಗಳನ್ನು ಖರೀದಿಸಿಲ್ಲ. ಸ್ಥಳೀಯ ವೈದ್ಯಾಧಿಕಾರಿಗಳು ಔಷಧಿ ಖರೀದಿಸಬಾರದು, ಸರ್ಕಾರದಿಂದಲೇ ಖರೀದಿ ಆಗುವವರೆಗೆ ಕಾಯಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ಆರೋಪಿಸಿದರು. ಮಾರ್ಚ್ 13ರಿಂದ ಸರ್ಕಾರಿ ವೈದ್ಯರು ಪ್ರತಿಭಟನೆಗೆ ಮುಂದಾಗುತ್ತಿರುವುದರಿಂದ ರೋಗಿಗಳು ಸಂಕಷ್ಟಕ್ಕೀಡಾಗಲಿದ್ದಾರೆ. ಇದಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇರ ಕಾರಣ ಎಂದು ಹೇಳಿದರು.
ಆರೋಗ್ಯ ಇಲಾಖೆಯ ಬಜೆಟ್ನಲ್ಲಿ ಶೇ.40ರಷ್ಟು ಕಡಿತವಾಗಿದೆ. ಗ್ಯಾರಂಟಿ ಯೋಜನೆಗಳ ಹೊರೆ ಹೆಚ್ಚಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಒಪ್ಪಿಕೊಂಡಿದ್ದಾರೆ ಎಂದು ಅಶೋಕ್ ಹೇಳಿದರು. ಇ-ಖಾತಾ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, 30 ಸಾವಿರ ರೂ.ವರೆಗೆ ಲಂಚ ಕೇಳಲಾಗುತ್ತಿದೆ ಎಂದು ದೂರಿದರು. ಅಬಕಾರಿ ಇಲಾಖೆಯಲ್ಲಿ ಮದ್ಯದಂಗಡಿ ಆರಂಭಿಸಲು ಕೋಟ್ಯಂತರ ರೂ. ಲಂಚ ಪಡೆಯಲಾಗುತ್ತಿದೆ. ಮಹಾತ್ಮ ಗಾಂಧಿ ಅವರ ಆದರ್ಶಗಳನ್ನು ಹೇಳಿಕೊಳ್ಳುವ ಕಾಂಗ್ರೆಸ್ ನಾಯಕರು ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡಲು ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಐದು ರಾಜ್ಯಗಳ ಚುನಾವಣೆಗೆ ಹಣ ಸಂಗ್ರಹಿಸಲು ಸಚಿವರಿಂದಲೇ ಹಣ ಕೇಳಲಾಗುತ್ತಿದೆ. ಕರ್ನಾಟಕವನ್ನು ಕಾಂಗ್ರೆಸ್ ಹೈಕಮಾಂಡ್ ಎಟಿಎಂ ಮಾಡಿಕೊಂಡಿದೆ ಎಂದು ಟೀಕಿಸಿದರು. ಅಂಗನವಾಡಿ ಕಾರ್ಯಕರ್ತರು, ಗುತ್ತಿಗೆದಾರರು, ಸಾರಿಗೆ ನೌಕರರು ಸೇರಿದಂತೆ ವಿವಿಧ ವರ್ಗಗಳು ಪ್ರತಿಭಟನೆ ನಡೆಸುತ್ತಿವೆ. ಅಂಗನವಾಡಿ ಮಕ್ಕಳಿಗೆ ತರಕಾರಿ ಖರೀದಿಗೆ ಕೇವಲ 50 ಪೈಸೆ ನೀಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರೂವರೆ ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಐದು ವರ್ಷಗಳ ಅಂತ್ಯಕ್ಕೆ ಸಾಲ 6 ಲಕ್ಷ ಕೋಟಿ ರೂ. ತಲುಪಲಿದೆ ಎಂದು ಅಶೋಕ್ ಆರೋಪಿಸಿದರು. ಪ್ರತಿ ವ್ಯಕ್ತಿಯ ಮೇಲೂ ಸಾಲದ ಹೊರೆ ಹೆಚ್ಚಾಗುತ್ತಿದೆ. ಮಾರ್ಗಸೂಚಿ ದರವನ್ನು ನಾಲ್ಕು ಪಟ್ಟು ಏರಿಸಲಾಗಿದೆ. ಕಸದ ಮೇಲಿನ ತೆರಿಗೆ ಮೂರು ಪಟ್ಟು ಹೆಚ್ಚಾಗಿದೆ ಎಂದು ಟೀಕಿಸಿದರು.
ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ತಪ್ಪುಗಳನ್ನು ಎತ್ತಿಹಿಡಿಯಲಾಗುವುದು. ಬಿಜೆಪಿ–ಜೆಡಿಎಸ್ ಜಂಟಿಯಾಗಿ ಹೋರಾಟ ನಡೆಸಲಿದೆ. ಒಳಮೀಸಲಾತಿ ವಿಚಾರದಲ್ಲಿ ಸರ್ಕಾರ ಕೋರ್ಟ್ ಆದೇಶ ಪಾಲಿಸಬೇಕು ಎಂದು ಹೇಳಿದರು.
ಕೊಡಗು ಹಾಗೂ ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹಿಂದೂ ಸಂಘಟನೆಗಳ ಕಾರ್ಯಕ್ರಮಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಸರ್ಕಾರವೇ ಇಂತಹ ಘಟನೆಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಆರೋಪಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa