
ನವದೆಹಲಿ, 25 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಗಾಂಧಿ ಕುಟುಂಬವು ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಂಡಿದೆ ಎಂದು ಕೇಂದ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಪಿಯೂಷ್ ಗೋಯಲ್ ಆರೋಪಿಸಿದ್ದಾರೆ.
ಬುಧವಾರ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರವೃತ್ತಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಕಾಲದಿಂದಲೇ ಆರಂಭವಾಗಿದೆ ಎಂದು ಹೇಳಿದರು.
ಗಾಂಧಿ ಕುಟುಂಬವು ರಾಜಿ ರಾಜಕೀಯದ ಪ್ರತಿನಿಧಿಯಾಗಿದೆ ಎಂದು ಹೇಳಿದ ಗೋಯಲ್, ಕಾಂಗ್ರೆಸ್ ಪಕ್ಷದ ಇತಿಹಾಸ ಮತ್ತು ವರ್ತಮಾನ ಎರಡೂ ರಾಷ್ಟ್ರೀಯ ಹಿತಾಸಕ್ತಿಗಳ ವಿಚಾರದಲ್ಲಿ ರಾಜಿ ಮಾಡಿಕೊಂಡ ಉದಾಹರಣೆಗಳಿಂದ ತುಂಬಿವೆ ಎಂದು ಆರೋಪಿಸಿದರು. ಲೋಕಸಭೆಯ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು, “ನಕಾರಾತ್ಮಕ ರಾಜಕೀಯದ ಪೋಸ್ಟರ್ ಬಾಯ್” ಎಂದು ಕರೆದರು. ವಿದೇಶಿ ಶಕ್ತಿಗಳ ಪ್ರಭಾವದಿಂದ ರಾಹುಲ್ ಗಾಂಧಿ ದೇಶದ ಹಿತಾಸಕ್ತಿಗೆ ವಿರುದ್ಧ ಹೇಳಿಕೆಗಳನ್ನು ನೀಡುತ್ತಾರೆ ಮತ್ತು ಭಾರತದ ಘನತೆಗೆ ಧಕ್ಕೆಯುಂಟುಮಾಡುತ್ತಾರೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿಗೆ ರಾಷ್ಟ್ರವಿರೋಧಿ ಶಕ್ತಿಗಳೊಂದಿಗೆ ಸಂಪರ್ಕವಿದೆ ಎಂದು ಹೇಳಿದ ಗೋಯಲ್, ಲಡಾಖ್ನ ಸೂಕ್ಷ್ಮ ಗಡಿ ಪ್ರದೇಶಗಳಿಗೆ ಭೇಟಿ ನೀಡಿರುವುದನ್ನೂ ಉಲ್ಲೇಖಿಸಿದರು. ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂದು ಆರೋಪಿಸಲ್ಪಟ್ಟ ಶಕೀರ್ ಮಿರಾಲಿಯಂತಹ ವಿದೇಶಿಯರೊಂದಿಗೆ ಸಂಬಂಧ ಬೆಳೆಸಿದ್ದಾರೆ ಎಂದು ಅವರು ಹೇಳಿದರು. “ರಾಹುಲ್ ಗಾಂಧಿ ಯಾವ ಮಟ್ಟದ ಅಗ್ಗದ ರಾಜಕೀಯದಲ್ಲಿ ತೊಡಗಿದ್ದಾರೆಂಬುದು ದೇಶಕ್ಕೆ ತಿಳಿದಿದೆ” ಎಂದು ಗೋಯಲ್ ವಾಗ್ದಾಳಿ ನಡೆಸಿದರು.
ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಆಡಳಿತಾವಧಿಯಲ್ಲಿಯೂ ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾದ ಅನೇಕ ನಿರ್ಧಾರಗಳು ತೆಗೆದುಕೊಳ್ಳಲಾಗಿದೆ ಎಂದು ಗೋಯಲ್ ಆರೋಪಿಸಿದರು. 1971ರ ಶಿಮ್ಲಾ ಒಪ್ಪಂದವನ್ನು ಉಲ್ಲೇಖಿಸಿದ ಅವರು, 93,000 ಪಾಕಿಸ್ತಾನಿ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು; ಆದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹಿಂದಕ್ಕೆ ಪಡೆಯಲಾಗಲಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ರೂಪುಗೊಳ್ಳುತ್ತಿರುವ ‘ನವ ಭಾರತ’ದ ಬಗ್ಗೆ ಕಾಂಗ್ರೆಸ್ ನಾಯಕತ್ವ ಅಸಮಾಧಾನಗೊಂಡಿದೆ. ಅದಕ್ಕಾಗಿ ಅದು ನಿರಂತರವಾಗಿ ನಕಾರಾತ್ಮಕ ರಾಜಕೀಯದಲ್ಲಿ ತೊಡಗಿದೆ ಎಂದು ಗೋಯಲ್ ಹೇಳಿದರು. “ದೇಶದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ; ಅವರು ಕಾಲಕಾಲಕ್ಕೆ ತಮ್ಮ ತೀರ್ಪನ್ನು ನೀಡುತ್ತಿದ್ದಾರೆ” ಎಂದು ಅವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa