
ಹುಬ್ಬಳ್ಳಿ, 23 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಹುಬ್ಬಳ್ಳಿಯ ರಾಜನಗರದಲ್ಲಿರುವ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಮೊಟ್ಟ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ ಪಂದ್ಯ ನಡೆಯಲಿದ್ದು, ಫೆಬ್ರವರಿ 24ರಿಂದ 28ರವರೆಗೆ ನಡೆಯುವ ಹಣಾಹಣಿಗೆ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿವೆ.
ಹತ್ತು ವರ್ಷಗಳಿಂದ ರಣಜಿ ಪ್ರಶಸ್ತಿ ಬರ ಎದುರಿಸುತ್ತಿರುವ ಕರ್ನಾಟಕ ತಂಡ ಈ ಬಾರಿ ಇತಿಹಾಸ ನಿರ್ಮಿಸಿರುವ ಜಮ್ಮು-ಕಾಶ್ಮೀರ ತಂಡವನ್ನು ಎದುರಿಸಲಿದೆ.
ಮೈದಾನದಲ್ಲಿ ಸಿದ್ಧತೆ, ನೀರುಣಿಸುವುದು, ಹೆವಿ ಹಾಗೂ ಲೈಟ್ ರೋಲರ್ ಬಳಕೆ, ಹುಲ್ಲು ಕತ್ತರಿಸುವುದು ಸೇರಿದಂತೆ ವಿವಿಧ ಕಾರ್ಯಗಳು ವೇಗ ಪಡೆದಿವೆ.
ಕೆಎಸ್ಸಿಎ ಆಡಳಿತ ಸಮಿತಿ ಸದಸ್ಯರು ಮೈದಾನಕ್ಕೆ ಭೇಟಿ ನೀಡಿ ಸೌಲಭ್ಯಗಳ ಪರಿಶೀಲನೆ ನಡೆಸಿದ್ದಾರೆ. ಬಿಸಿಸಿಐನ ಪಿಚ್ ಕ್ಯುರೇಟರ್ ಪ್ರಕಾಶ ಅದವ್ ಕೂಡ ಮೈದಾನ ಪರಿಶೀಲಿಸಿ ವರದಿ ನೀಡಿದ್ದಾರೆ.
ಕರ್ನಾಟಕ ಹಾಗೂ ಜಮ್ಮು-ಕಾಶ್ಮೀರ ತಂಡ ಈಗಾಗಲೇ ನಗರಕ್ಕೆ ಆಗಮಿಸಿ ಅಭ್ಯಾಸದಲ್ಲಿ ತೊಡಗಿವೆ. ಪಂದ್ಯ ವೀಕ್ಷಣೆಗೆ ಸುಮಾರು 5 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಕನ್ನಡಿಗರಾದ ಕೆ.ಎಲ್.ರಾಹುಲ್, ದೇವದತ್ತ ಪಡಿಕಲ್, ಮಯಾಂಕ್ ಅಗರವಾಲ್, ಕರುಣ್ ನಾಯರ್, ಸ್ಮರಣ್ ರವಿಚಂದ್ರನ್ ಸೇರಿದಂತೆ ಪ್ರಮುಖ ಆಟಗಾರರ ಪ್ರದರ್ಶನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಈ ಐತಿಹಾಸಿಕ ಫೈನಲ್ ಪಂದ್ಯ ಕ್ರಿಕೆಟ್ ಸಂಭ್ರಮಕ್ಕೆ ಹೊಸ ಚೈತನ್ಯ ತುಂಬಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa