
ರಾಯ್ಪುರ, 23 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಛತ್ತಿಸಗಡದಲ್ಲಿ ಸಕ್ರಿಯವಾಗಿರುವ ನಕ್ಸಲೀಯರ ಬಲಂಗೀರ್-ಬರ್ಗಢ-ಮಹಾಸಮುಂಡ್ (ಬಿಬಿಎಂ) ವಿಭಾಗ ಶರಣಾಗಲು ಸಿದ್ಧವಾಗಿದ್ದು, ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ವಿಜಯ ಶರ್ಮಾ ಅವರಿಗೆ ಪತ್ರ ಬರೆದಿದೆ.
ಮಾರ್ಚ್ 3 ರೊಳಗೆ 15 ನಕ್ಸಲೀಯರು ತಮ್ಮ ಶಸ್ತ್ರಾಸ್ತ್ರಗಳೊಂದಿಗೆ ಶರಣಾಗುವುದಾಗಿ ಪತ್ರದಲ್ಲಿ ತಿಳಿಸಲಾಗಿದೆ. ಸಿಪಿಐ (ಮಾವೋವಾದಿ) ಪಶ್ಚಿಮ ಉಪ-ವಲಯ ಬ್ಯೂರೋ, ಒಡಿಶಾ ರಾಜ್ಯ ಸಮಿತಿಯ ಕಾರ್ಯದರ್ಶಿ ಹಾಗೂ ಬಿಬಿಎಂ ವಿಭಾಗೀಯ ಸಮಿತಿಯ ಕಾರ್ಯದರ್ಶಿ ವಿಕಾಸ್ ಈ ಪತ್ರ ಕಳುಹಿಸಿರುವುದಾಗಿ ಉಪಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಪತ್ರದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಮುಖ್ಯವಾಹಿನಿಗೆ ಮರಳಲು ಬಯಸುವುದಾಗಿ ಹೇಳಿರುವ ನಕ್ಸಲರು, ಸುರಕ್ಷತೆಯ ಭರವಸೆ ನೀಡುವಂತೆ ಗೃಹ ಸಚಿವರನ್ನು ಮನವಿ ಮಾಡಿದ್ದಾರೆ. ಭರವಸೆ ದೊರೆತ ಬಳಿಕ ಮಾರ್ಚ್ 2 ಮತ್ತು 3ರ ನಡುವೆ ಹೊರಬರುವುದಾಗಿ ತಿಳಿಸಿದ್ದಾರೆ.
ಪ್ರಸ್ತುತ ಒಡಿಶಾದಲ್ಲಿದ್ದರೂ, ಬಸ್ತಾರ್ ಮೂಲದ ಬಹುತೇಕ ಸದಸ್ಯರು ಛತ್ತೀಸ್ಗಢದಲ್ಲೇ ಶರಣಾಗಲು ಸಮ್ಮತಿಸಿದ್ದಾರೆ. ಡಿವಿಸಿ ಕೇಡರ್ನಿಂದ ಮೂವರು, ಎಸಿ ಕೇಡರ್ನಿಂದ ಐವರು ಮತ್ತು ಪಿಎಂ ಕೇಡರ್ನಿಂದ ಏಳು ಮಂದಿ ಸೇರಿ ಒಟ್ಟು 15 ಮಂದಿ ಶರಣಾಗಲು ಸಿದ್ಧರಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಮಧ್ಯೆ, ಶರಣಾಗುವ ಪ್ರಕ್ರಿಯೆ ಸುಗಮವಾಗಲು ಪೊಲೀಸ್ ಕೂಂಬಿಂಗ್ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಹಾಗೂ ಬಲಂಗೀರ್ ಮತ್ತು ಬರ್ಗಢ ಜಿಲ್ಲೆಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವಂತೆ ವಿನಂತಿಸಲಾಗಿದೆ. ಭದ್ರತಾ ಪಡೆಗಳ ಚಲನವಲನದಿಂದ ಗುಂಪು ವಿಭಜನೆಯಾಗುವ ಆತಂಕವಿದೆ ಎಂದು ನಕ್ಸಲರು ಹೇಳಿದ್ದಾರೆ.
ಬದಲಾಗುತ್ತಿರುವ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿಯಲ್ಲಿ ದೀರ್ಘಕಾಲೀನ ಸಶಸ್ತ್ರ ಹೋರಾಟ ಮುಂದುವರಿಸಲು ಯಾವುದೇ ಸಮರ್ಥನೆ ಇಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಭಾರತೀಯ ಸಂವಿಧಾನದ ಚೌಕಟ್ಟಿನೊಳಗೆ ಸಾರ್ವಜನಿಕ ಒಳಿತಿಗಾಗಿ ಕೆಲಸ ಮಾಡಲು ಮುಖ್ಯವಾಹಿನಿಗೆ ಮರಳುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa