
ನವದೆಹಲಿ, 22 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ಮೀರತ್ಗೆ ಭೇಟಿ ನೀಡಿ, ಸುಮಾರು ₹12,930 ಕೋಟಿ ಮೌಲ್ಯದ ಮಹತ್ವದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಲೋಕಾರ್ಪಣೆ ಮಾಡಲಿದ್ದಾರೆ.
ಈ ವೇಳೆ ದೇಶದ ಮೊದಲ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ ಯಾದ ದೆಹಲಿ–ಮೀರತ್ ನಮೋ ಭಾರತ್ ಕಾರಿಡಾರ್ ಅನ್ನು ರಾಷ್ಟ್ರಕ್ಕೆ ಅರ್ಪಿಸುವುದರೊಂದಿಗೆ ಮೀರತ್ ಮೆಟ್ರೋ ಸೇವೆಗೂ ಚಾಲನೆ ನೀಡಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
ಪಿಎಂಒ ಮಾಹಿತಿಯಂತೆ, ಪ್ರಧಾನಿ ಮೋದಿ ಮಧ್ಯಾಹ್ನ 12.30ರ ಸುಮಾರಿಗೆ ಶತಾಬ್ದಿ ನಗರ ನಮೋ ಭಾರತ್ ನಿಲ್ದಾಣದಿಂದ ನಮೋ ಭಾರತ್ ರೈಲು ಹಾಗೂ ಮೀರತ್ ಮೆಟ್ರೋಗೆ ಹಸಿರು ನಿಶಾನೆ ತೋರಲಿದ್ದಾರೆ. ಬಳಿಕ ಅವರು ಮೆಟ್ರೋ ಮೂಲಕ ಮೀರತ್ ಸೌತ್ ನಿಲ್ದಾಣದವರೆಗೆ ಪ್ರಯಾಣಿಸಲಿದ್ದು, ಮಧ್ಯಾಹ್ನ 1 ಗಂಟೆಗೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ–ಶಿಲಾನ್ಯಾಸ ನೆರವೇರಿಸಿ, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
82 ಕಿಲೋಮೀಟರ್ ಉದ್ದದ ದೆಹಲಿ–ಮೀರತ್ ನಮೋ ಭಾರತ್ ಕಾರಿಡಾರ್ ಅನ್ನು ಇಂದು ಸಂಪೂರ್ಣವಾಗಿ ರಾಷ್ಟ್ರಕ್ಕೆ ಅರ್ಪಿಸಲಾಗುತ್ತಿದೆ. ಇದರೊಳಗೆ ಸರಾಯ್ ಕಾಲೇ ಖಾನ್–ನ್ಯೂ ಅಶೋಕ್ ನಗರ (5 ಕಿಮೀ) ಮತ್ತು ಮೀರತ್ ಸೌತ್–ಮೋದಿಪುರಂ (21 ಕಿಮೀ) ಎಂಬ ಉಳಿದ ವಿಭಾಗಗಳೂ ಸೇರಿವೆ. ಗಂಟೆಗೆ 180 ಕಿಮೀ ವಿನ್ಯಾಸ ವೇಗ ಹೊಂದಿರುವ ನಮೋ ಭಾರತ್, ದೇಶದ ಮೊದಲ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯಾಗಿದ್ದು, ದೆಹಲಿಯಿಂದ ಸಾಹಿಬಾಬಾದ್, ಗಾಜಿಯಾಬಾದ್, ಮೋದಿನಗರ ಹಾಗೂ ಮೀರತ್ವರೆಗೆ ವೇಗದ ಸಂಪರ್ಕ ಒದಗಿಸುತ್ತದೆ.
ಸರಾಯ್ ಕಾಲೇ ಖಾನ್ ನಿಲ್ದಾಣವನ್ನು ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣ, ದೆಹಲಿ ಮೆಟ್ರೋ ಪಿಂಕ್ ಲೈನ್, ವೀರ್ ಹಕಿಕತ್ ರಾಯ್ ಐಎಸ್ಬಿಟಿ ಮತ್ತು ರಿಂಗ್ ರಸ್ತೆಗೆ ಸಂಪರ್ಕಿಸುವ ಪ್ರಮುಖ ಮಲ್ಟಿ-ಮೋಡಲ್ ಹಬ್ ಆಗಿ ಅಭಿವೃದ್ಧಿಪಡಿಸಲಾಗಿದೆ. ಇದೇ ವೇಳೆ ಶತಾಬ್ದಿ ನಗರ, ಬೇಗಂಪುಲ್ ಮತ್ತು ಮೋದಿಪುರಂ ನಿಲ್ದಾಣಗಳಿಗೂ ಉದ್ಘಾಟನೆ ನಡೆಯಲಿದೆ.
ಇದಲ್ಲದೆ, ಮೀರತ್ ಸೌತ್–ಮೋದಿಪುರಂ ನಡುವಿನ ಮೀರತ್ ಮೆಟ್ರೋ ಸೇವೆಗೂ ಇಂದು ಚಾಲನೆ ದೊರೆಯಲಿದೆ. ನಮೋ ಭಾರತ್ ಎಕ್ಸ್ಪ್ರೆಸ್ವೇಯಂತೆಯೇ ಅದೇ ಮೂಲಸೌಕರ್ಯದಲ್ಲಿ ಕಾರ್ಯನಿರ್ವಹಿಸುವ ಈ ಮೆಟ್ರೋ ವ್ಯವಸ್ಥೆ, ಗಂಟೆಗೆ 120 ಕಿಮೀ ಗರಿಷ್ಠ ಕಾರ್ಯಾಚರಣಾ ವೇಗ ಹೊಂದಿದ್ದು, ನಿಗದಿತ ನಿಲ್ದಾಣಗಳೊಂದಿಗೆ ಸುಮಾರು 30 ನಿಮಿಷಗಳಲ್ಲಿ ಪೂರ್ಣ ಮಾರ್ಗವನ್ನು ಆವರಿಸುವ ಸಾಮರ್ಥ್ಯ ಹೊಂದಿದೆ. ನಮೋ ಭಾರತ್ ಮತ್ತು ಮೀರತ್ ಮೆಟ್ರೋಗಳ ಸಂಯೋಜಿತ ಕಾರ್ಯಾಚರಣೆ ನಗರ–ಪ್ರಾದೇಶಿಕ ಸಾರಿಗೆಯಲ್ಲಿ ಹೊಸ ಮಾನದಂಡ ಸ್ಥಾಪಿಸುವುದರೊಂದಿಗೆ, ರಸ್ತೆ ಸಂಚಾರ ದಟ್ಟಣೆ ಕಡಿಮೆ ಮಾಡಿ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಗಣನೀಯವಾಗಿ ತಗ್ಗಿಸಲು ಸಹಕಾರಿಯಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa