
ಗುವಾಹಟಿ, 21 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಅಸ್ಸಾಂ ರಾಜಧಾನಿ ಗುವಾಹಟಿಯ ಸರುಸಜೈನಲ್ಲಿರುವ ಅರ್ಜುನ್ ಭೋಗೇಶ್ವರ ಬರುವಾ ಕ್ರೀಡಾ ಸಂಕೀರ್ಣದಲ್ಲಿ ನಡೆದ ಸಿಆರ್ಪಿಎಫ್ ನ 87ನೇ ಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪಡೆಯ ಶೌರ್ಯ, ತ್ಯಾಗ ಮತ್ತು ಸೇವೆಯನ್ನು ಕೊಂಡಾಡಿದರು.
ಸಿಆರ್ಪಿಎಫ್ ವತಿಯಿಂದ
ಆಯೋಜಿಸಲಾದ ಭವ್ಯ ಪರೇಡ್ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿದ ಅಮಿತ್ ಶಾ, ವಿವಿಧ ಕಾರ್ಯಾಚರಣೆಗಳಲ್ಲಿ ಬಳಕೆಯಾಗುವ ಅತ್ಯಾಧುನಿಕ ಸಶಸ್ತ್ರ ವಾಹನಗಳ ಪ್ರದರ್ಶನ ಹಾಗೂ ಬ್ಯಾಂಡ್ ವಾದ್ಯಮೇಳ ವೀಕ್ಷಿಸಿದರು. ಸಮಾರಂಭದಲ್ಲಿ ಮಾತನಾಡಿದ ಅವರು, “86 ವರ್ಷಗಳಿಂದ ದೇಶದ ಆಂತರಿಕ ಭದ್ರತೆಯನ್ನು ಬಲಪಡಿಸುತ್ತಿದ್ದು, 2,270 ಯೋಧರು ಸರ್ವೋಚ್ಚ ತ್ಯಾಗ ಮಾಡಿದ್ದಾರೆ. ಅವರ ಶೌರ್ಯದಿಂದ ದೇಶದ ಏಕತೆ ಮತ್ತು ಭದ್ರತೆ ಅಚಲವಾಗಿದೆ,” ಎಂದು ಹೇಳಿದರು.
ದೇಶದಲ್ಲಿ ಜಮ್ಮು-ಕಾಶ್ಮೀರ, ಮಾವೋವಾದಿ ಪೀಡಿತ ಪ್ರದೇಶಗಳು ಹಾಗೂ ಈಶಾನ್ಯ ಭಾಗಗಳಲ್ಲಿ ಭದ್ರತಾ ಸವಾಲುಗಳನ್ನು ಎದುರಿಸುವಲ್ಲಿ
ಸಿಆರ್ಪಿಎಫ್ ಮಹತ್ತರ ಪಾತ್ರ ವಹಿಸಿದೆ ಎಂದು ಅವರು ಉಲ್ಲೇಖಿಸಿದರು. ಜಮ್ಮು-ಕಾಶ್ಮೀರದಲ್ಲಿ 540 ಯೋಧರು ತ್ಯಾಗ ಮಾಡಿರುವುದನ್ನು ಸ್ಮರಿಸಿದ ಶಾ, ಅಸ್ಸಾಂನಲ್ಲಿ 79 ಯೋಧರು ಪ್ರಾಣಾರ್ಪಣೆ ಮಾಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ಸಿಆರ್ಪಿಎಫ್
ಮಹಾನಿರ್ದೇಶಕ ಜಿ. ಪಿ. ಸಿಂಗ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa