
ನವದೆಹಲಿ, 19 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಬಿಲ್ ಗೇಟ್ಸ್ ಅವರು ನವದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ತಮ್ಮ ನಿಗದಿತ ಮುಖ್ಯ ಭಾಷಣವನ್ನು ನೀಡುವುದಿಲ್ಲ ಎಂದು ಬಿಲ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ಸ್ಪಷ್ಟಪಡಿಸಿದೆ.
ಪ್ರತಿಷ್ಠಾನದ ಪ್ರಕಟಣೆಯ ಪ್ರಕಾರ, ಶೃಂಗಸಭೆಯ ಆದ್ಯತೆಗಳು ಮತ್ತು ಅದರ ನಿರ್ದಿಷ್ಟ ಅಗತ್ಯಗಳ ಮೇಲೆ ಕೇಂದ್ರೀಕರಿಸಲು “ಹೆಚ್ಚಿನ ಚರ್ಚೆಯ ನಂತರ” ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾರತದಲ್ಲಿನ ತನ್ನ ಕಾರ್ಯಚಟುವಟಿಕೆಗಳಿಗೆ ಪ್ರತಿಷ್ಠಾನ ಬದ್ಧವಾಗಿದೆ ಎಂಬುದನ್ನು ಅದು ಪುನರುಚ್ಚರಿಸಿದೆ.
ಇದರ ಬದಲಾಗಿ, ಪ್ರತಿಷ್ಠಾನದ ಆಫ್ರಿಕಾ ಮತ್ತು ಭಾರತ ಕಚೇರಿಗಳ ಮುಖ್ಯಸ್ಥ ಅಂಕುರ ವೋರಾ ಶೃಂಗಸಭೆಯಲ್ಲಿ ಪ್ರತಿನಿಧಿಸಲಿದ್ದು, ಅವರು ಇಂದು ತಮ್ಮ ಭಾಷಣವನ್ನು ಮಾಡಲಿದ್ದಾರೆ ಎಂದು ತಿಳಿಸಲಾಗಿದೆ.
ಇತ್ತೀಚೆಗೆ ಬಿಡುಗಡೆಯಾದ ದಾಖಲೆಗಳಲ್ಲಿ ಅಮೇರಿಕನ್ ಅಪರಾಧಿ ಜೆಫ್ರಿ ಎಪ್ಸ್ಟೀನ್ ಸಂಬಂಧಿತ ವಿಚಾರಗಳಲ್ಲಿ ಬಿಲ್ ಗೇಟ್ಸ್ ಅವರ ಹೆಸರು ಉಲ್ಲೇಖವಾಗಿರುವ ಹಿನ್ನೆಲೆ, ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಅಂದಾಜುಗಳು ಕೇಳಿ ಬರುತ್ತಿವೆ. ಎಪ್ಸ್ಟೀನ್ ವಿರುದ್ಧ ಗಂಭೀರ ಲೈಂಗಿಕ ಅಪರಾಧಗಳು ಹಾಗೂ ಅಪ್ರಾಪ್ತ ವಯಸ್ಕರ ಕಳ್ಳಸಾಗಣೆ ಆರೋಪಗಳು ಕೇಳಿ ಬಂದಿವೆ.
ಆದರೆ, ಶೃಂಗ ಸಭೆಯಿಂದ ಹಿಂದೆ ಸರಿಯುವ ನಿರ್ಧಾರವು ಅದರ ಕಾರ್ಯಕ್ರಮದ ಕೇಂದ್ರೀಕರಣದ ದೃಷ್ಟಿಯಿಂದ ಮಾತ್ರ ತೆಗೆದುಕೊಳ್ಳಲಾಗಿದೆ ಎಂದು ಪ್ರತಿಷ್ಠಾನ ಸ್ಪಷ್ಟಪಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa