
ಮುಂಬಯಿ, 18 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಖ್ಯಾತ ನಟ ಸಲ್ಮಾನ್ ಖಾನ್ ಅವರ ತಂದೆ, ಹಿರಿಯ ಚಿತ್ರಕಥೆಗಾರ ಸಲೀಂ ಖಾನ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. 90 ವರ್ಷದ ಅವರ ಆರೋಗ್ಯ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಅವರು ತೀವ್ರ ನಿಗಾ ಘಟಕದಲ್ಲಿ ನಿಕಟ ವೀಕ್ಷಣೆಯಲ್ಲಿದ್ದಾರೆ.
ಆಸ್ಪತ್ರೆ ಮೂಲಗಳ ಪ್ರಕಾರ, ರಕ್ತದೊತ್ತಡದಲ್ಲಿ ಹಠಾತ್ ಏರಿಕೆಯಿಂದ ಅವರ ಮೆದುಳಿನ ಬಲಭಾಗದಲ್ಲಿ ಆಂತರಿಕ ರಕ್ತಸ್ರಾವ ಸಂಭವಿಸಿದೆ. ತಜ್ಞ ವೈದ್ಯರ ತಂಡವು ಸತತ ಚಿಕಿತ್ಸೆ ನೀಡುತ್ತಿದೆ ಎಂದು ಆರೋಗ್ಯ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.
ಚಿಕಿತ್ಸಾ ತಂಡದಲ್ಲಿ ನರವಿಜ್ಞಾನಿ ಡಾ. ವಿನಯ್ ಚವಾಣ್, ಹೃದ್ರೋಗ ತಜ್ಞ ಡಾ. ಅಜಿತ್ ಮೆನನ್, ನರಶಸ್ತ್ರಚಿಕಿತ್ಸಕ ಡಾ. ನಿತಿನ್ ಡಾಂಗೆ ಹಾಗೂ ಡಾ. ಬಿನಿತ್ ಅಹ್ಲುವಾಲಿಯಾ ಸೇರಿದಂತೆ ತಜ್ಞರು ಭಾಗಿಯಾಗಿದ್ದಾರೆ ಎಂದು ಡಾ. ಜಲೀಲ್ ಪಾರ್ಕರ್ ಮಾಹಿತಿ ನೀಡಿದ್ದಾರೆ.
ಇಂದು ಅವರಿಗೆ ಶಸ್ತ್ರಚಿಕಿತ್ಸೆ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ನಡುವೆ ಸಲ್ಮಾನ್ ಖಾನ್ ಸೇರಿದಂತೆ ಖಾನ್ ಕುಟುಂಬದ ಸದಸ್ಯರು ಆಸ್ಪತ್ರೆಯಲ್ಲಿ ಉಪಸ್ಥಿತರಿದ್ದು, ಅವರ ಆರೋಗ್ಯದ ಬಗ್ಗೆ ಆಪ್ತರು ಮತ್ತು ಬಂಧುಗಳು ವಿಚಾರಿಸುತ್ತಿದ್ದಾರೆ.
ಸಲೀಂ ಖಾನ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂಬ ಹಾರೈಕೆಗಳು ಎಲ್ಲೆಡೆಯಿಂದ ವ್ಯಕ್ತವಾಗುತ್ತಿವೆ. ಆದರೆ ಖಾನ್ ಕುಟುಂಬದಿಂದ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa