ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರು ಚಿರತೆ ಮರಿಗಳ ಜನನ
ದಕ್ಷಿಣ ಆಫ್ರಿಕಾದ ‘ಗಾಮಿನಿ’ಗೆ ಮತ್ತೊಮ್ಮೆ ಸಂತಾನ ಭಾಗ್ಯ
Cheetah


ನವದೆಹಲಿ, 18 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರು ಚಿರತೆ ಮರಿಗಳು ಜನಿಸಿದ್ದು, ಇದರೊಂದಿಗೆ ಉದ್ಯಾನವನದಲ್ಲಿನ ಒಟ್ಟು ಚಿರತೆಗಳ ಸಂಖ್ಯೆ 38ಕ್ಕೆ ಏರಿದೆ.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅವರು ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಹಂಚಿಕೊಂಡು, ಮರಿಗಳಿಗೆ ಉತ್ತಮ ಆರೋಗ್ಯವನ್ನು ಹಾರೈಸಿದ್ದಾರೆ.

ದಕ್ಷಿಣ ಆಫ್ರಿಕಾದಿಂದ ತರಲಾದ ‘ಗಾಮಿನಿ’ ಎಂಬ ಚಿರತೆ ಎರಡನೇ ಬಾರಿಗೆ ಮೂರು ಮರಿಗಳಿಗೆ ಜನ್ಮ ನೀಡಿದೆ. ಭಾರತದಲ್ಲಿ ಚಿರತೆಗಳ ಮರುಪರಿಚಯದ ಪ್ರಯತ್ನದಲ್ಲಿ ಇದು ಒಂಬತ್ತನೇ ಯಶಸ್ವಿ ಸಾಧನೆ ಎಂದು ಸಚಿವರು ತಿಳಿಸಿದ್ದಾರೆ. ಈಗಾಗಲೇ 27 ಭಾರತೀಯ ಮೂಲದ ಮರಿಗಳು ಬದುಕುಳಿದಿದ್ದು, ಈ ಹೊಸ ಜನನದೊಂದಿಗೆ ದೇಶದ ಒಟ್ಟು ಚಿರತೆಗಳ ಸಂಖ್ಯೆ 38ಕ್ಕೆ ತಲುಪಿದೆ.

ಈ ಸಾಧನೆ ಪ್ರಾಜೆಕ್ಟ್ ಚೀತಾ ಅಡಿಯಲ್ಲಿ ನಡೆಯುತ್ತಿರುವ ಸಂರಕ್ಷಣಾ ಕಾರ್ಯಗಳ ಯಶಸ್ಸನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ. ಕ್ಷೇತ್ರ ಸಿಬ್ಬಂದಿ ಹಾಗೂ ಪಶುವೈದ್ಯಕೀಯ ತಂಡಗಳ ಶ್ರಮವನ್ನು ಸಚಿವರು ಶ್ಲಾಘಿಸಿದ್ದಾರೆ.

ಗಮನಾರ್ಹವಾಗಿ, 2022ರ ಸೆಪ್ಟೆಂಬರ್ 17ರಂದು ನರೇಂದ್ರ ಮೋದಿ ಅವರು ನಮೀಬಿಯಾದಿಂದ ತರಲಾದ ಎಂಟು ಚಿರತೆಗಳನ್ನು ಕುನೊ ಉದ್ಯಾನವನದಲ್ಲಿ ಬಿಡುಗಡೆ ಮಾಡುವ ಮೂಲಕ ‘ಪ್ರಾಜೆಕ್ಟ್ ಚೀತಾ’ಗೆ ಚಾಲನೆ ನೀಡಿದ್ದರು. ಇದು ವಿಶ್ವದ ಮೊದಲ ಅಂತರಖಂಡದ ದೊಡ್ಡ ಕಾಡು ಮಾಂಸಾಹಾರಿ ಪ್ರಾಣಿಗಳ ಸ್ಥಳಾಂತರ ಯೋಜನೆ ಎಂದು ಪರಿಗಣಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande