
ಭೋಪಾಲ್, 17 ಫೆಬ್ರವರಿ (ಹಿ.ಸ.) :
ಆ್ಯಂಕರ್ : ದೇಶದಲ್ಲಿ 1975ರಲ್ಲಿ ಜಾರಿಗೊಂಡ ತುರ್ತು ಪರಿಸ್ಥಿತಿಗೆ 50 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಿಂದೂಸ್ತಾನ್ ಸಮಾಚಾರ್ ಸುದ್ದಿ ಸಂಸ್ಥೆ ಫೆಬ್ರವರಿ 19, 2026ರಂದು ಭೋಪಾಲ್‌ನಲ್ಲಿ “ತುರ್ತುಸ್ಥಿತಿ ಮತ್ತು ಯುವಜನತೆ” ವಿಷಯದಡಿ ರಾಷ್ಟ್ರೀಯ ಚಿಂತನಾ ಚರ್ಚೆಯನ್ನು ಆಯೋಜಿಸಿದೆ.
ರೈಸನ್ ರಸ್ತೆಯ ಸ್ಯಾಮ್ ಗ್ಲೋಬಲ್ ವಿಶ್ವವಿದ್ಯಾಲಯದ ಆವರಣದಲ್ಲಿ ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ತುರ್ತು ಪರಿಸ್ಥಿತಿಯ ಐತಿಹಾಸಿಕ ಹಿನ್ನೆಲೆ, ಅದರ ಸಾಮಾಜಿಕ-ರಾಜಕೀಯ ಪರಿಣಾಮಗಳು ಹಾಗೂ ಇಂದಿನ ಯುವಜನತೆಗೆ ಅದರ ಸಂದೇಶಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವುದು ಈ ಚರ್ಚೆಯ ಉದ್ದೇಶವಾಗಿದೆ. ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ನಾಗರಿಕ ಹಕ್ಕುಗಳ ಬಗ್ಗೆ ಅರಿವು ಬಲಪಡಿಸುವ ವೇದಿಕೆಯಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಐತಿಹಾಸಿಕ ಹಿನ್ನೆಲೆ
ಜೂನ್ 25, 1975ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಈ ಅವಧಿಯಲ್ಲಿ ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ, ಮಾಧ್ಯಮಗಳ ಸೆನ್ಸಾರ್ ಮತ್ತು ಹಲವು ಪ್ರತಿಪಕ್ಷದ ನಾಯಕರ ಬಂಧನ ನಡೆದವು. ಕೇಂದ್ರ ಸರ್ಕಾರ ಪ್ರತಿ ವರ್ಷ ಜೂನ್ 25 ಅನ್ನು “ಸಂವಿಧಾನ ಹತ್ಯೆ ದಿನ”ವಾಗಿ ಆಚರಿಸಲು ನಿರ್ಧರಿಸಿದೆ.
ಪ್ರಮುಖ ಅತಿಥಿಗಳು
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾಜಿ ಸರ್ಕಾರಿವಾಹ ಸುರೇಶ್ ಭಯ್ಯಾಜಿ ಜೋಶಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳಲಿದ್ದಾರೆ. ತುರ್ತು ಪರಿಸ್ಥಿತಿಯ ಅನುಭವಗಳು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ಕುರಿತು ಅವರು ಮಾತಾಡಲಿದ್ದಾರೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಮುಖ್ಯ ಅತಿಥಿಯಾಗಿದ್ದು, ಉಪ ಮುಖ್ಯಮಂತ್ರಿ ಡಾ. ರಾಜೇಂದ್ರ ಶುಕ್ಲಾ ಹಾಗೂ ಲೋಕತಂತ್ರ ಸೇನಾನಿ ಸಂಘದ ರಾಷ್ಟ್ರೀಯ ಅಧ್ಯಕ್ಷ ಕೈಲಾಶ್ ಸೋನಿ ವಿಶೇಷ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಹಿಂದೂಸ್ತಾನ್ ಸಮಾಚಾರ ಸುದ್ದಿ ಸಂಸ್ಥೆಯ ಅಧ್ಯಕ್ಷ ಅರವಿಂದ್ ಮರ್ದಿಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸರಣಿಯ ಭಾಗ
ಈ ವಿಷಯದಡಿ ಹಿಂದೂಸ್ತಾನ್ ಸಮಾಚಾರ್ ದೆಹಲಿ ಮತ್ತು ಗುಜರಾತ್‌ನಲ್ಲಿ ಈಗಾಗಲೇ ಚರ್ಚೆಗಳು ನಡೆಸಿದ್ದು, ಭೋಪಾಲ್ ಕಾರ್ಯಕ್ರಮವನ್ನು ಆ ಸರಣಿಯ ಪ್ರಮುಖ ಕೊಂಡಿಯಾಗಿ ಪರಿಗಣಿಸಲಾಗಿದೆ. ಶಿಕ್ಷಣ ತಜ್ಞರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸಲು ಹಾಗೂ ತುರ್ತು ಪರಿಸ್ಥಿತಿಯ ಪಾಠಗಳನ್ನು ಯುವಪೀಳಿಗೆಗೆ ತಲುಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸುವಂತೆ ಸಂಘಟಕರು ಕರೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa