
ಬೆಂಗಳೂರು, 17 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಭಾರತೀಯ ಜನತಾ ಪಕ್ಷದ ಪರವಾಗಿ ದಾಖಲಿಸಿದ್ದ ಖಾಸಗಿ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.
ಪ್ರಕರಣ ರದ್ದುಗೊಳಿಸುವಂತೆ ರಾಹುಲ್ ಗಾಂಧಿ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರು, “ಅರ್ಜಿಯನ್ನು ಅನುಮತಿಸಲಾಗಿದೆ. ವಿಚಾರಣೆಯನ್ನು ಮುಂದುವರಿಸಲು ಅವಕಾಶ ನೀಡುವುದು ಕಾನೂನು ಪ್ರಕ್ರಿಯೆಯ ದುರುಪಯೋಗಕ್ಕೆ ಕಾರಣವಾಗುತ್ತದೆ. ಅರ್ಜಿದಾರರಿಗೆ ಸಂಬಂಧಿಸಿದಂತೆ ವಿಚಾರಣೆಯನ್ನು ರದ್ದುಗೊಳಿಸಲಾಗಿದೆ” ಎಂದು ತೀರ್ಪು ನೀಡಿದ್ದಾರೆ.
2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ್ದ ಜಾಹೀರಾತುಗಳು ಮತ್ತು ಪ್ರಚಾರ ಘೋಷಣೆಗಳ ಹಿನ್ನೆಲೆ ಈ ಪ್ರಕರಣ ದಾಖಲಾಗಿತ್ತು. ಆ ಜಾಹೀರಾತುಗಳಲ್ಲಿ ಆಗಿನ ರಾಜ್ಯ ಸರ್ಕಾರವಾಗಿದ್ದ ಬಿಜೆಪಿಯ ಮೇಲೆ ಸಾರ್ವಜನಿಕ ಕಾಮಗಾರಿಗಳ ಗುತ್ತಿಗೆಗಳಲ್ಲಿ ಶೇಕಡಾ 40ರಷ್ಟು ಕಮಿಷನ್/ಲಂಚ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.
ಈ ಸಂಬಂಧ ಬಿಜೆಪಿ ನಾಯಕ ಕೇಶವ ಪ್ರಸಾದ್ ಅವರು ರಾಹುಲ್ ಗಾಂಧಿ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಖಾಸಗಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಕಾಂಗ್ರೆಸ್ ನಾಯಕರು ಸುಳ್ಳು ಜಾಹೀರಾತುಗಳ ಮೂಲಕ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರ ಮಾನಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಇದೇ ಪ್ರಕರಣದಲ್ಲಿ, ಜೂನ್ 1, 2024ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ನಂತರ ಜೂನ್ 7, 2024ರಂದು ರಾಹುಲ್ ಗಾಂಧಿಗೂ ಜಾಮೀನು ನೀಡಲಾಗಿತ್ತು.
ಈಗ ಹೈಕೋರ್ಟ್ ನೀಡಿರುವ ತೀರ್ಪಿನಿಂದ ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ವಿಚಾರಣೆಗೆ ಅಂತ್ಯ ಬಿದ್ದಂತಾಗಿದೆ
ಹಿಂದೂಸ್ತಾನ್ ಸಮಾಚಾರ್ / Rakesh Mahadevappa