ರಾಜಸ್ಥಾನದ ರಾಸಾಯನಿಕ–ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ ; 7 ಕಾರ್ಮಿಕರ ಸಾವು
ಅಲ್ವಾರ್, 16 ಫೆಬ್ರವರಿ (ಹಿ.ಸ.) : ಆ್ಯಂಕರ್ : ರಾಜಸ್ಥಾನದ ಭಿವಾಡಿ ಸಮೀಪದ ಖುಷ್ಖೇಡ ಕರೋಲಿ ಪ್ರದೇಶದಲ್ಲಿರುವ ರಾಸಾಯನಿಕ ಹಾಗೂ ಪಟಾಕಿ ಕಾರ್ಖಾನೆಯಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಏಳು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಕಾರ್ಮಿಕ ಒಳಗೆ ಸಿಲುಕಿರುವ ಶಂಕೆ ವ್ಯಕ್
Fire


ಅಲ್ವಾರ್, 16 ಫೆಬ್ರವರಿ (ಹಿ.ಸ.) :

ಆ್ಯಂಕರ್ : ರಾಜಸ್ಥಾನದ ಭಿವಾಡಿ ಸಮೀಪದ ಖುಷ್ಖೇಡ ಕರೋಲಿ ಪ್ರದೇಶದಲ್ಲಿರುವ ರಾಸಾಯನಿಕ ಹಾಗೂ ಪಟಾಕಿ ಕಾರ್ಖಾನೆಯಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಏಳು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಕಾರ್ಮಿಕ ಒಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಬೆಳಿಗ್ಗೆ ಸುಮಾರು 9.30ರ ಸುಮಾರಿಗೆ ಭಾರೀ ಸ್ಫೋಟದ ಶಬ್ದ ಕೇಳಿಬಂದಿದ್ದು, ಕ್ಷಣಾರ್ಧದಲ್ಲೇ ಬೆಂಕಿ ಇಡೀ ಘಟಕವನ್ನು ಆವರಿಸಿತು. ಕಾರ್ಖಾನೆಯಲ್ಲಿ ಸಂಗ್ರಹಿಸಲಾಗಿದ್ದ ರಾಸಾಯನಿಕಗಳು ಮತ್ತು ಪಟಾಕಿ ಸಾಮಗ್ರಿಗಳಿಂದ ಜ್ವಾಲೆಗಳು ವೇಗವಾಗಿ ವ್ಯಾಪಿಸಿದವು. ಕಾರ್ಮಿಕರಿಗೆ ಪಾರಾಗಲು ಸಮಯವೇ ಸಿಗಲಿಲ್ಲ ಎಂದು ತಿಳಿದು ಬಂದಿದೆ.

ಘಟನೆಯ ನಂತರ ಭಿವಾಡಿ, ಖುಷ್ಖೇಡ, ತಿಜಾರ, ಧರುಹೆರಾ ಹಾಗೂ ರೇವಾರಿ ಸೇರಿದಂತೆ ವಿವಿಧ ಪ್ರದೇಶಗಳಿಂದ ಅಗ್ನಿಶಾಮಕ ದಳಗಳು ದೌಡಾಯಿಸಿ ಗಂಟೆಗಳ ಕಾಲ ಕಠಿಣ ಪರಿಶ್ರಮದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದವು.

ರಾಜಸ್ಥಾನ್ ರಾಜ್ಯ ಕೈಗಾರಿಕಾ ಅಭಿವೃದ್ಧಿ ಮತ್ತು ಹೂಡಿಕೆ ನಿಗಮ (RIICO) ಅಗ್ನಿಶಾಮಕ ಅಧಿಕಾರಿ ರಾಜು ಖಾನ್ ಮಾಹಿತಿ ನೀಡಿ, ಸ್ಥಳದಿಂದ ಏಳು ಶವಗಳನ್ನು ಹೊರತೆಗೆದಿರುವುದಾಗಿ ತಿಳಿಸಿದ್ದಾರೆ.

ಅನೇಕ ಶವಗಳು ತೀವ್ರವಾಗಿ ಸುಟ್ಟುಹೋಗಿರುವುದರಿಂದ ಗುರುತಿಸಲು ಡಿಎನ್‌ಎ ಪರೀಕ್ಷೆ ನಡೆಸಲಾಗುವುದು ಎಂದು ಆಡಳಿತ ಹೇಳಿದೆ.

ಘಟನೆಯ ತೀವ್ರತೆಯನ್ನು ಗಮನಿಸಿ ಭಜನ್‌ಲಾಲ್ ಶರ್ಮಾ ಅವರ ಸೂಚನೆಯ ಮೇರೆಗೆ ಅರಣ್ಯ ಮತ್ತು ಪರಿಸರ ಸಚಿವ ಸಂಜಯ್ ಶರ್ಮಾ ವಿಧಾನಸಭೆಯಿಂದಲೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಿರಿಯ ಜಿಲ್ಲಾ ಹಾಗೂ ಪೊಲೀಸ್ ಅಧಿಕಾರಿಗಳು ಕೂಡ ಪರಿಶೀಲನೆ ನಡೆಸಿದ್ದಾರೆ.

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ಖಾನೆಯಲ್ಲಿ ಸುರಕ್ಷತಾ ಮಾನದಂಡಗಳು ಪಾಲಿಸಲಾಯಿತೇ ಎಂಬುದರ ಕುರಿತು ತನಿಖೆ ಆರಂಭಗೊಂಡಿದ್ದು, ಅಪಘಾತದ ನಿಖರ ಕಾರಣ ಪತ್ತೆ ಹಚ್ಚಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande