ಸಚಿವ ಪ್ರಿಯಾಂಕ್ ಖರ್ಗೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ತಿರುಗೇಟು
ಬೆಂಗಳೂರು, 16 ಫೆಬ್ರವರಿ (ಹಿ.ಸ.) : ಆ್ಯಂಕರ್ : ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂಘದ ಆರ್ಥಿಕ ಮೂಲ, ತೆರಿಗೆ ಪಾವತಿ ಹಾಗೂ ನೋಂದಣಿ ಕುರಿತಾಗಿ ಮಾಡಿದ ಆರೋಪಗಳಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರತಿಕ್ರಿಯೆ ನೀಡಿದೆ. ಸರಸಂಘಚಾಲಕ ಮೋಹನ್ ಭಾಗವತ್ ಅವರು ಇತ್ತಿಚೆಗೆ ಬೆಂಗಳೂರಿನಲ್ಲಿ ಸಂಘ ಶತಾಬ್ದಿ ಕಾರ
Rss


ಬೆಂಗಳೂರು, 16 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂಘದ ಆರ್ಥಿಕ ಮೂಲ, ತೆರಿಗೆ ಪಾವತಿ ಹಾಗೂ ನೋಂದಣಿ ಕುರಿತಾಗಿ ಮಾಡಿದ ಆರೋಪಗಳಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರತಿಕ್ರಿಯೆ ನೀಡಿದೆ. ಸರಸಂಘಚಾಲಕ ಮೋಹನ್ ಭಾಗವತ್ ಅವರು ಇತ್ತಿಚೆಗೆ ಬೆಂಗಳೂರಿನಲ್ಲಿ ಸಂಘ ಶತಾಬ್ದಿ ಕಾರ್ಯಕ್ರಮದಲ್ಲಿ ನೀಡಿದ “ಸಂಘದ ಗುರುದಕ್ಷಿಣೆ ಡೊನೇಷನ್ ಅಲ್ಲ, ಡಿವೋಷನ್” ಎಂಬ ಹೇಳಿಕೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ತಿರುಗೇಟು ನೀಡಿದೆ.

ಕಳೆದ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೋಹನ್ ಭಾಗವತ್, “ಸಂಘ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ. ಹೊರಗಿನ ದೇಣಿಗೆ ಸ್ವೀಕರಿಸುವುದಿಲ್ಲ. ಸಂಘದ ಸದಸ್ಯರೇ ಸ್ವಯಂಪ್ರೇರಿತವಾಗಿ ಗುರುದಕ್ಷಿಣೆ ನೀಡುತ್ತಾರೆ. ಅದು ದೇಣಿಗೆ ಅಲ್ಲ, ಭಕ್ತಿ” ಎಂದು ಸ್ಪಷ್ಟಪಡಿಸಿದ್ದರು. ಸಂಘವು ಸಮಾಜ ಸಂಘಟನೆ ಹಾಗೂ ರಾಷ್ಟ್ರಸೇವೆಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ರಾಜಕಾರಣದಿಂದ ದೂರವಿದೆ ಎಂದು ಅವರು ಹೇಳಿದ್ದರು.

ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ:

ಬೆಂಗಳೂರಿನ ಗಾಂಧಿಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, “ಸಂಘದವರು ದೇಣಿಗೆ ತೆಗೆದುಕೊಳ್ಳುವುದಿಲ್ಲ ಎನ್ನುತ್ತಾರೆ. ಆದರೆ 2,500ಕ್ಕೂ ಹೆಚ್ಚು ಸಂಘಟನೆಗಳ ಜಾಲ ಹೊಂದಿರುವ ಈ ಸಂಘಟನೆಗೆ ಹಣ ಎಲ್ಲಿಂದ ಬರುತ್ತದೆ? ಅಮೆರಿಕಾ, ಇಂಗ್ಲೆಂಡ್ ಸೇರಿದಂತೆ ವಿದೇಶಗಳಿಂದ ಹಣ ಹರಿದು ಬರುತ್ತಿದೆ” ಎಂದು ಆರೋಪಿಸಿದ್ದರು.

“57 ವರ್ಷಗಳ ಕಾಲ ದೇಶದ ಧ್ವಜ ಹಾರಿಸದವರು ಈಗ ದೇಶಭಕ್ತಿ ಪಾಠ ಹೇಳುತ್ತಿದ್ದಾರೆ. ಸಂಘದ ಆರ್ಥಿಕ ಮೂಲ ಏನು? ಅದು ತೆರಿಗೆ ಪಾವತಿಸುತ್ತಿದೆಯೇ?” ಎಂದು ಪ್ರಶ್ನೆ ಎತ್ತಿದ್ದರು. ಸಂಘವನ್ನು ನೋಂದಣಿ ಮಾಡಿಸುವ ಅಗತ್ಯವಿದೆ ಎಂದು ಒತ್ತಾಯಿಸಿದ ಅವರು, “ಇವತ್ತಲ್ಲ, ನಾಳೆ ಆರ್‌ಎಸ್‌ಎಸ್ ನೋಂದಣಿ ಆಗಲೇಬೇಕು ನಾನು ಮಾಡಿಸುತ್ತೇನೆ” ಎಂದು ಹೇಳಿಕೆ ನೀಡಿದ್ದರು.

ಸಂಘದ ಪ್ರತಿಕ್ರಿಯೆ:

ಪ್ರಿಯಾಂಕ್ ಖರ್ಗೆ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಸಂಘ, ಭಾಗವತ್ ಅವರ ಹಿಂದಿನ ಭಾಷಣದ ವಿಡಿಯೋವನ್ನು ಹಂಚಿಕೊಂಡು, “ಗುರುದಕ್ಷಿಣೆ ಸ್ವಯಂಸೇವಕರಿಂದ ಸ್ವಯಂಪ್ರೇರಿತವಾಗಿ ನೀಡುವ ಕೊಡುಗೆ. ಸಂಘದ ಕಾರ್ಯ ಪಾರದರ್ಶಕವಾಗಿದೆ” ಎಂದು ಸ್ಪಷ್ಟಪಡಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande