ಇಸ್ರೇಲ್ನಲ್ಲಿ ಸರ್ಕಾರ ರಚನೆಗೆ ಗಾದಿ ಐಸೆನ್ಕೋಟ್ಗೆ ಅಧಿಕೃತ ಆಹ್ವಾನ: ಆರು ವಾರಗಳ ಕಾಲಾವಕಾಶ ನೀಡಿದ ಅಧ್ಯಕ್ಷ ಹರ್ಜೋಗ್
ಜೆರುಸಲೆಮ್ (ಇಸ್ರೇಲ್), 09 ನವೆಂಬರ್ (ಹಿ.ಸ): ಇಸ್ರೇಲ್‌ನಲ್ಲಿ ನೂತನ ಸರ್ಕಾರ ರಚಿಸುವಂತೆ ವಿರೋಧ ಪಕ್ಷ ಯಶಾರ್‌ನ ನಾಯಕ ಹಾಗೂ ಮಾಜಿ ಸೇನಾ ಮುಖ್ಯಸ್ಥ ಗಾದಿ ಐಸೆನ್‌ಕೋಟ್ ಅವರಿಗೆ ಅಧ್ಯಕ್ಷ ಇಸಾಕ್ ಹರ್ಜೋಗ್ ಅಧಿಕೃತ ಆಹ್ವಾನ ನೀಡಿದ್ದಾರೆ. ನವೆಂಬರ್ 8ರಂದು ಅಧ್ಯಕ್ಷರ ನಿವಾಸದಲ್ಲಿ ನಡೆದ ಸಮಾರಂಭದಲ್ಲ
यरुशलम में आठ नवंबर को राष्ट्रपति इसाक हर्जोग (दाएं) ने यशार पार्टी के नेता गादी आइसेनकोट को अगली सरकार बनाने निमंत्रण दिया।  फोटो - द टाइम्स ऑफ इजराइल


ಜೆರುಸಲೆಮ್ (ಇಸ್ರೇಲ್), 09 ನವೆಂಬರ್ (ಹಿ.ಸ):

ಇಸ್ರೇಲ್‌ನಲ್ಲಿ ನೂತನ ಸರ್ಕಾರ ರಚಿಸುವಂತೆ ವಿರೋಧ ಪಕ್ಷ ಯಶಾರ್‌ನ ನಾಯಕ ಹಾಗೂ ಮಾಜಿ ಸೇನಾ ಮುಖ್ಯಸ್ಥ ಗಾದಿ ಐಸೆನ್‌ಕೋಟ್ ಅವರಿಗೆ ಅಧ್ಯಕ್ಷ ಇಸಾಕ್ ಹರ್ಜೋಗ್ ಅಧಿಕೃತ ಆಹ್ವಾನ ನೀಡಿದ್ದಾರೆ. ನವೆಂಬರ್ 8ರಂದು ಅಧ್ಯಕ್ಷರ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಸರ್ಕಾರ ರಚನೆಯ ಜನಾದೇಶವನ್ನು ಹಸ್ತಾಂತರಿಸಲಾಗಿದ್ದು, ಇದಕ್ಕಾಗಿ ಐಸೆನ್‌ಕೋಟ್ ಅವರಿಗೆ ಆರು ವಾರಗಳ ಕಾಲಾವಕಾಶ ನೀಡಲಾಗಿದೆ.

120 ಸದಸ್ಯ ಬಲದ ಇಸ್ರೇಲ್ ಸಂಸತ್ ನೆಸೆಟ್‌ನಲ್ಲಿ ಐಸೆನ್‌ಕೋಟ್ ಅವರಿಗೆ 67 ಸದಸ್ಯರ ಬೆಂಬಲ ದೊರೆತಿದೆ. ಈ ಹಿನ್ನೆಲೆಯಲ್ಲಿ ನೂತನ ಸರ್ಕಾರ ರಚಿಸುವ ಜವಾಬ್ದಾರಿ ಅವರಿಗೆ ವಹಿಸಲಾಗಿದೆ ಎಂದು ವರದಿಯಾಗಿದೆ.

ದೇಶದ ಪ್ರಸ್ತುತ ರಾಜಕೀಯ ಮತ್ತು ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾವು 'ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸರ್ಕಾರ' ರಚಿಸಲು ಪ್ರಯತ್ನಿಸುವುದಾಗಿ ಐಸೆನ್‌ಕೋಟ್ ತಿಳಿಸಿದ್ದಾರೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ದೇಶದಲ್ಲಿ ಹೊಸ ರಾಜಕೀಯ ಯುಗಕ್ಕೆ ನಾಂದಿ ಹಾಡುವುದು ತಮ್ಮ ಗುರಿ ಎಂದು ಅವರು ಹೇಳಿದ್ದಾರೆ.

ಇಸ್ರೇಲ್ ಹಲವು ಸವಾಲುಗಳನ್ನು ಎದುರಿಸುತ್ತಿದೆ. ವಿವಿಧ ರಂಗಗಳಲ್ಲಿ ಸಂಘರ್ಷಗಳು ಮುಂದುವರಿದಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ವಿಶ್ವಾಸಾರ್ಹತೆ ಕುಸಿಯುತ್ತಿದೆ. ಪ್ರಜಾಪ್ರಭುತ್ವವೂ ಅತ್ಯಂತ ಸೂಕ್ಷ್ಮ ಹಂತದಲ್ಲಿದೆ. ಇದೇ ಪರಿಸ್ಥಿತಿ ಮುಂದುವರಿದರೆ ದೇಶವು ಕತ್ತಲೆಯ ಯುಗಕ್ಕೆ ಪ್ರವೇಶಿಸುವ ಅಪಾಯವಿದೆ. ಹೀಗಾಗಿ ದೇಶದ ಹಿತಾಸಕ್ತಿ ಮತ್ತು ಭದ್ರತೆಗೆ ಆದ್ಯತೆ ನೀಡುವ ಹೊಸ ನಾಯಕತ್ವದ ಅಗತ್ಯವಿದೆ ಎಂದು ಐಸೆನ್‌ಕೋಟ್ ಪ್ರತಿಪಾದಿಸಿದ್ದಾರೆ.

ಆದರೆ ಸರ್ಕಾರ ರಚನೆಯ ಹಾದಿ ಸುಗಮವಾಗಿಲ್ಲ. ಐಸೆನ್‌ಕೋಟ್ ಅವರನ್ನು ಬೆಂಬಲಿಸಿರುವವರಲ್ಲಿ 48 ಸದಸ್ಯರ ಯಹೂದಿ ನೇತೃತ್ವದ ಬಣ ಮತ್ತು 19 ಸದಸ್ಯರ ಅರಬ್ ನೇತೃತ್ವದ ಬಣ ಸೇರಿವೆ. ಅರಬ್ ಪಕ್ಷಗಳು ಅವರ ಸರ್ಕಾರಕ್ಕೆ ಬೆಂಬಲ ನೀಡಲು ಅಥವಾ ವಿಶ್ವಾಸಮತದ ಸಂದರ್ಭದಲ್ಲಿ ವಿರೋಧವಾಗಿ ಮತ ಚಲಾಯಿಸದಿರಲು ಒಪ್ಪಿಕೊಂಡಿವೆ. ಆದರೆ ಅರಬ್ ಪಕ್ಷಗಳ ಬೆಂಬಲದೊಂದಿಗೆ ರಚನೆಯಾಗುವ ಸರ್ಕಾರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಯಹೂದಿ ಬಣದ ಕೆಲವು ಸದಸ್ಯರು ಸ್ಪಷ್ಟಪಡಿಸಿದ್ದಾರೆ.

ಈ ಬೆಳವಣಿಗೆಯಿಂದಾಗಿ ಐಸೆನ್‌ಕೋಟ್ ಅಲ್ಪಮತದ ಸರ್ಕಾರ ರಚಿಸಲಿದ್ದಾರೆಯೇ ಅಥವಾ ನೆತನ್ಯಾಹು ಅವರ ದೀರ್ಘಕಾಲದ ಮಿತ್ರಪಕ್ಷಗಳಾದ ಅತಿ ಸಂಪ್ರದಾಯವಾದಿ ಯಹೂದಿ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲಿದ್ದಾರೆಯೇ ಎಂಬ ಚರ್ಚೆ ಆರಂಭವಾಗಿದೆ.

ಮೈತ್ರಿ ಮಾತುಕತೆಗಳ ಕುರಿತು ತಮ್ಮ ನಿಲುವನ್ನು ಬಹಿರಂಗಪಡಿಸದ ಐಸೆನ್‌ಕೋಟ್, ತಮ್ಮ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವ ಯಾವುದೇ ಪಕ್ಷಕ್ಕೂ ಮೈತ್ರಿಕೂಟದಲ್ಲಿ ಅವಕಾಶವಿದೆ ಎಂದು ಹೇಳಿದ್ದಾರೆ. ನೆತನ್ಯಾಹು ಅವರ ಲಿಕುಡ್ ಪಕ್ಷದ ಸದಸ್ಯರು ಹಾಗೂ ಬಲಪಂಥೀಯ ರಿಲಿಜಿಯಸ್ ಝಯಾನಿಸಂ ಪಕ್ಷದವರಿಗೂ ಅವರು ಆಹ್ವಾನ ನೀಡಿದ್ದಾರೆ. ಮರುಚುನಾವಣೆಯ ಸಾಧ್ಯತೆಯನ್ನು ತಳ್ಳಿಹಾಕಿರುವ ಅವರು, ದೇಶಕ್ಕೆ ಪದೇಪದೆ ಚುನಾವಣೆ ನಡೆಸುವಷ್ಟು ಸಮಯವಿಲ್ಲ ಎಂದು ಹೇಳಿದ್ದಾರೆ.

ವಿಭಜಿತ ಸಂಸತ್ತಿನ ವಾಸ್ತವವನ್ನು ಒಪ್ಪಿಕೊಂಡಿರುವ ಐಸೆನ್‌ಕೋಟ್, ದೇಶದ ಸ್ಥಾಪನೆಯ ನಂತರದ ಅತ್ಯಂತ ಸಂಕೀರ್ಣ ರಾಜಕೀಯ ಪರಿಸ್ಥಿತಿಯನ್ನು ಇಸ್ರೇಲ್ ಎದುರಿಸುತ್ತಿದೆ. ಎಲ್ಲ ಚುನಾವಣಾ ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ. ಹೀಗಾಗಿ ಎಲ್ಲರೂ ಕೆಲವು ರಾಜಿಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಇಸಾಕ್ ಹರ್ಜೋಗ್, ಇಸ್ರೇಲ್‌ಗೆ ಪ್ರಸ್ತುತ ಸವಾಲುಗಳನ್ನು ಎದುರಿಸಲು ಸಮರ್ಥವಾದ ಮತ್ತು ಸ್ಥಿರವಾದ ಸರ್ಕಾರದ ಅಗತ್ಯವಿದೆ ಎಂದು ಹೇಳಿದ್ದಾರೆ. ಐಸೆನ್‌ಕೋಟ್ ಮತ್ತು ನೆತನ್ಯಾಹು ಇಬ್ಬರೂ ಒಳಗೊಂಡ ಬಲಿಷ್ಠ ಸರ್ಕಾರ ರಚನೆಯ ಸಾಧ್ಯತೆಯನ್ನೂ ಅವರು ಪ್ರಸ್ತಾಪಿಸಿದ್ದಾರೆ.

ಆದರೆ ನೆತನ್ಯಾಹು ನೇತೃತ್ವದ ಸರ್ಕಾರದಲ್ಲಿ ತಾವು ಕೆಲಸ ಮಾಡುವುದಿಲ್ಲ ಎಂದು ಐಸೆನ್‌ಕೋಟ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಐಸೆನ್‌ಕೋಟ್‌ಗೆ ಪ್ರಧಾನಿ ಸ್ಥಾನ ಬಿಟ್ಟುಕೊಡುವ ಯಾವುದೇ ಸೂಚನೆಯನ್ನು ನೆತನ್ಯಾಹು ನೀಡಿಲ್ಲ.

ಸರ್ಕಾರ ರಚನೆಗೆ ಯಾರಿಗೆ ಹೆಚ್ಚಿನ ಅವಕಾಶವಿದೆ ಎಂಬ ಕುರಿತು ನಡೆದ ಚರ್ಚೆಯಲ್ಲಿ ಸಂಸತ್ತಿನ ಬಹುತೇಕ ಸದಸ್ಯರು ಐಸೆನ್‌ಕೋಟ್ ಅವರಿಗೆ ಸ್ಪಷ್ಟ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಅಧ್ಯಕ್ಷ ಹರ್ಜೋಗ್ ತಿಳಿಸಿದ್ದಾರೆ. ಇದೇ ವೇಳೆ 27 ಸ್ಥಾನಗಳನ್ನು ಹೊಂದಿರುವ ಲಿಕುಡ್ ಪಕ್ಷವೇ ಇನ್ನೂ ಸಂಸತ್ತಿನ ಅತಿದೊಡ್ಡ ಪಕ್ಷವಾಗಿದೆ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.

ಅರಬ್ ಪಕ್ಷಗಳ ರಾಜಕೀಯ ಮಾನ್ಯತೆಯನ್ನು ಪ್ರಶ್ನಿಸುವವರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಹರ್ಜೋಗ್, ಇಸ್ರೇಲ್‌ನ ಪ್ರತಿಯೊಬ್ಬ ನಾಗರಿಕನ ಧ್ವನಿಗೂ ಸಮಾನ ಮಹತ್ವವಿದೆ. ಅವರ ರಾಜಕೀಯ ನಿಲುವು, ಜೀವನಶೈಲಿ ಅಥವಾ ಧರ್ಮ ಯಾವುದೇ ಆಗಿರಲಿ, ಎಲ್ಲರಿಗೂ ಸಮಾನ ಗೌರವ ದೊರೆಯಬೇಕು ಎಂದು ಹೇಳಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande