
ಇಸ್ಲಾಮಾಬಾದ್ (ಪಾಕಿಸ್ತಾನ), 08 ನವೆಂಬರ್ (ಹಿ.ಸ.):
ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ ಅವರ ಪತ್ನಿ ಬುಷ್ರಾ ಬೀಬಿ ಅವರು ತಮ್ಮ ಕಣ್ಣಿನ ದೃಷ್ಟಿ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ತಜ್ಞ ವೈದ್ಯರಿಂದ ತಕ್ಷಣವೇ ತಪಾಸಣೆ ಮತ್ತು ಚಿಕಿತ್ಸೆ ಪಡೆಯಲು ಅನುಮತಿ ಕೋರಿ ಇಸ್ಲಾಮಾಬಾದ್ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ರಾವಲ್ಪಿಂಡಿಯ ಅಡಿಯಾಲಾ ಕಾರಾಗೃಹದಲ್ಲಿ ಪತಿ ಇಮ್ರಾನ್ ಖಾನ್ ಅವರೊಂದಿಗೆ ಬಂಧನದಲ್ಲಿರುವ ಬುಷ್ರಾ ಬೀಬಿ, ತಮ್ಮ ಸ್ವಂತ ವೆಚ್ಚದಲ್ಲಿ ತಮಗೆ ಇಷ್ಟವಾದ ತಜ್ಞ ವೈದ್ಯರಿಂದ ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸೆ ಪಡೆಯಲು ಅವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.
190 ದಶಲಕ್ಷ ಪೌಂಡ್ಗಳ ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ತಮಗೆ ವಿಧಿಸಿರುವ ಶಿಕ್ಷೆಗೆ ಸಂಬಂಧಿಸಿದ ಬಾಕಿ ಮೇಲ್ಮನವಿಗಳ ವಿಚಾರವಾಗಿ ಸಲ್ಲಿಸಿರುವ ಹೆಚ್ಚುವರಿ ಅರ್ಜಿಯಲ್ಲಿ ಅವರು ಈ ಮನವಿ ಮಾಡಿದ್ದಾರೆ ಎಂದು 'ದಿ ನ್ಯೂಸ್' ವರದಿ ಮಾಡಿದೆ.
ಅಡಿಯಾಲಾ ಕಾರಾಗೃಹದ ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ತಜ್ಞ ನೇತ್ರ ವೈದ್ಯರಿಂದ ತಕ್ಷಣ ತಪಾಸಣೆ ನಡೆಸಲು ಮತ್ತು ಅಗತ್ಯವಿದ್ದರೆ ಕಾರಾಗೃಹದ ಹೊರಗಿನ ವಿಶೇಷ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲು ಅನುಮತಿ ನೀಡಬೇಕೆಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ, ತಮ್ಮ ಸಂಪೂರ್ಣ ವೈದ್ಯಕೀಯ ದಾಖಲೆಗಳು ಹಾಗೂ ಕಾಯಿಲೆ ಮತ್ತು ಚಿಕಿತ್ಸೆಯ ವಿವರಗಳನ್ನು ಒಳಗೊಂಡ ನೂತನ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕಾರಾಗೃಹದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆಯೂ ಮನವಿ ಮಾಡಿದ್ದಾರೆ.
ಬುಷ್ರಾ ಬೀಬಿ ಮತ್ತು ಇಮ್ರಾನ್ ಖಾನ್ ಅವರನ್ನು ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಹೊಣೆಗಾರಿಕೆ ನ್ಯಾಯಾಲಯ ದೋಷಿಗಳೆಂದು ಘೋಷಿಸಿ ಶಿಕ್ಷೆ ವಿಧಿಸಿದೆ. 2025ರ ಜನವರಿಯಲ್ಲಿ ನ್ಯಾಯಾಧೀಶ ನಾಸಿರ್ ಜಾವೇದ್ ರಾಣಾ ಅವರು ಇಮ್ರಾನ್ ಖಾನ್ ಅವರಿಗೆ 14 ವರ್ಷ ಹಾಗೂ ಬುಷ್ರಾ ಬೀಬಿ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರು. ಇಮ್ರಾನ್ ಖಾನ್ ಅವರಿಗೆ 10 ಲಕ್ಷ ರೂಪಾಯಿ ಮತ್ತು ಬುಷ್ರಾ ಬೀಬಿ ಅವರಿಗೆ ಐದು ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿತ್ತು.
ಇಮ್ರಾನ್ ಖಾನ್ ಮತ್ತು ಬುಷ್ರಾ ಬೀಬಿ ಅವರ ಪರ ವಕೀಲ ಬ್ಯಾರಿಸ್ಟರ್ ಸಲ್ಮಾನ್ ಸಫ್ದರ್ ಅವರು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದು, ನವೆಂಬರ್ 2ರಂದು ಅಡಿಯಾಲಾ ಕಾರಾಗೃಹದಲ್ಲಿ ದಂಪತಿಯನ್ನು ಭೇಟಿಯಾದ ಸಂದರ್ಭದ ವಿವರಗಳನ್ನು ನೀಡಿದ್ದಾರೆ.
ಭೇಟಿಯ ವೇಳೆ ಬುಷ್ರಾ ಬೀಬಿ ಗಾಢ ಬಣ್ಣದ ಕನ್ನಡಕ ಧರಿಸಿದ್ದರು. ವಕೀಲರು ಮತ್ತು ಇಮ್ರಾನ್ ಖಾನ್ ಅವರ ಮನವಿಯ ಮೇರೆಗೆ ಕನ್ನಡಕ ತೆಗೆದಾಗ ಅವರು ತೀವ್ರ ತೊಂದರೆ ಅನುಭವಿಸುತ್ತಿರುವುದು ಕಂಡುಬಂದಿತ್ತು ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಬುಷ್ರಾ ಅವರಿಗೆ ಸೂರ್ಯನ ಬೆಳಕು ಹಾಗೂ ಕೃತಕ ಬೆಳಕನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಕ್ಷಣಾತ್ಮಕ ಕನ್ನಡಕವಿಲ್ಲದೆ ಕಣ್ಣು ತೆರೆಯಲೂ ಸಾಧ್ಯವಾಗುತ್ತಿಲ್ಲ ಎಂದು ವಕೀಲರು ತಿಳಿಸಿದ್ದಾರೆ. ಪತ್ನಿಯ ಕಣ್ಣಿನ ದೃಷ್ಟಿ ಹದಗೆಡುತ್ತಿರುವ ಬಗ್ಗೆ ಇಮ್ರಾನ್ ಖಾನ್ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.
ತಪಾಸಣೆ ನಡೆಸಿದ ವೈದ್ಯರು ತಮಗೆ ಕಣ್ಣಿನ ಪೊರೆ ಇರುವುದಾಗಿ ತಿಳಿಸಿದ್ದಾರೆ. ನವೆಂಬರ್ 15ರ ಸುಮಾರಿಗೆ ಮತ್ತೊಂದು ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸುವಂತೆ ಸಲಹೆ ನೀಡಿದ್ದಾರೆ ಎಂದು ಬುಷ್ರಾ ಬೀಬಿ ವಕೀಲರಿಗೆ ಮಾಹಿತಿ ನೀಡಿದ್ದಾರೆ.
ಕಾರಾಗೃಹದಲ್ಲಿನ ಸ್ವಚ್ಛತೆಯ ಕೊರತೆ ಹಾಗೂ ತಮಗೆ ದೊರೆಯುತ್ತಿರುವ ಚಿಕಿತ್ಸೆಯ ಬಗ್ಗೆಯೂ ಬುಷ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಅವರ ಕಣ್ಣಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗಿದ್ದು, ರಾವಲ್ಪಿಂಡಿಯ ಅಲ್-ಶಿಫಾ ಟ್ರಸ್ಟ್ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗಿತ್ತು. ಈ ಕುರಿತು ಆಗಸ್ಟ್ನಲ್ಲಿ ಉಚ್ಚತಮ ನ್ಯಾಯಾಲಯಕ್ಕೆ ಸಲ್ಲಿಸಲಾದ ವೈದ್ಯಕೀಯ ವರದಿಯಲ್ಲಿಯೂ ವಿವರಗಳಿವೆ.
ಬುಷ್ರಾ ಬೀಬಿ ಅವರ ಕಣ್ಣಿನ ದೃಷ್ಟಿ ಮತ್ತಷ್ಟು ಹದಗೆಡುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ತಜ್ಞ ವೈದ್ಯರಿಂದ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆ ಕೊಡಿಸಲು ಅವಕಾಶ ಕಲ್ಪಿಸಬೇಕು ಎಂಬುದು ಅರ್ಜಿಯ ಪ್ರಮುಖ ಮನವಿಯಾಗಿದೆ. ಕಾರಾಗೃಹದ ಅಧಿಕಾರಿಗಳು ಅವರ ಸಂಪೂರ್ಣ ವೈದ್ಯಕೀಯ ದಾಖಲೆ ಹಾಗೂ ಹೊಸ ವೈದ್ಯಕೀಯ ವರದಿಯನ್ನು ಸಲ್ಲಿಸುವಂತೆ ನಿರ್ದೇಶನ ನೀಡಬೇಕೆಂದೂ ಇಸ್ಲಾಮಾಬಾದ್ ಉಚ್ಚ ನ್ಯಾಯಾಲಯವನ್ನು ಕೋರಲಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.