ಚಾಕು-ಚೂರಿ ಆರ್ಡರ್ ಮಾಡಿ ಛಲವಾದಿ ನಾರಾಯಣಸ್ವಾಮಿಗೆ ಬೆದರಿಕೆ ಆರೋಪ; ನಿವಾಸದ ಬಳಿ ಹೈಡ್ರಾಮಾ
ಛಲವಾದಿ ನಾರಾಯಣಸ್ವಾಮಿ ಅವರ ಸರ್ಕಾರಿ ನಿವಾಸಕ್ಕೆ ಚಾಕು-ಚೂರಿಗಳಿದ್ದ ಕವರ್ಗಳನ್ನು ತಲುಪಿಸಲು ಯತ್ನಿಸಿದ ಆರೋಪ ಕೇಳಿಬಂದಿದೆ. ಡೆಲಿವರಿ ಬಾಯ್ಸ್ಗಳೊಂದಿಗೆ ಎನ್ಎಸ್ಯುಐ ಕಾರ್ಯಕರ್ತರು ಆಗಮಿಸಿದ್ದರಿಂದ ಕೆಲಕಾಲ ಗೊಂದಲ ಉಂಟಾಗಿದ್ದು, ಘಟನೆಗೆ ಸರ್ಕಾರವೇ ಹೊಣೆ ಎಂದು ಛಲವಾದಿ ಆರೋಪಿಸಿದ್ದಾರೆ.
knife-order-threat-allegation-chalavadi-narayanaswamy-residence-nsui


ಬೆಂಗಳೂರು, 07 ನವೆಂಬರ್ (ಹಿ.ಸ.):

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಸರ್ಕಾರಿ ನಿವಾಸಕ್ಕೆ ಚಾಕು ಮತ್ತು ಚೂರಿಗಳನ್ನು ಆನ್ಲೈನ್ ಮೂಲಕ ಆರ್ಡರ್ ಮಾಡಿ ಕಳುಹಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಡೆಲಿವರಿ ಸಿಬ್ಬಂದಿ ಜೊತೆ ಎನ್.ಎಸ್.ಯು.ಐ ಕಾರ್ಯಕರ್ತರು ಕೂಡ ಆಗಮಿಸಿದ್ದು, ನಿವಾಸದ ಬಳಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್ ಬಳಿಯಿರುವ ಛಲವಾದಿ ನಾರಾಯಣಸ್ವಾಮಿ ಅವರ ಸರ್ಕಾರಿ ನಿವಾಸಕ್ಕೆ ನಾಲ್ಕು ಬೈಕ್ಗಳಲ್ಲಿ ಬಂದ ಡೆಲಿವರಿ ಬಾಯ್ಸ್ಗಳು ಚಾಕು-ಚೂರಿಗಳಿದ್ದ ಪೋಸ್ಟ್ ಕವರ್ಗಳನ್ನು ತಲುಪಿಸಲು ಮುಂದಾಗಿದ್ದಾರೆ.

ಈ ವೇಳೆ ನಿವಾಸದ ಭದ್ರತಾ ಪೊಲೀಸರು ಅವರನ್ನು ತಡೆದು ವಿಚಾರಣೆ ನಡೆಸಿದ್ದಾರೆ. ಡೆಲಿವರಿ ಬಾಯ್ಸ್ಗಳೊಂದಿಗೆ ಬಂದಿದ್ದ ಇಬ್ಬರು ಎನ್.ಎಸ್.ಯು.ಐ ಕಾರ್ಯಕರ್ತರು ಕವರ್ಗಳನ್ನು ಛಲವಾದಿ ನಾರಾಯಣಸ್ವಾಮಿ ಅವರಿಗೆ ನೀಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಆದರೆ, ಡೆಲಿವರಿ ಬಾಯ್ಸ್ಗಳು ಕವರ್ಗಳನ್ನು ನೀಡದೆ ವಾಪಸ್ ತೆರಳಲು ಮುಂದಾಗಿದ್ದಾರೆ. ಈ ವೇಳೆ ಎನ್.ಎಸ್.ಯು.ಐ ಕಾರ್ಯಕರ್ತರು ಹಿಂದಿರುಗಿ ಹೋಗಿ ಕವರ್ಗಳನ್ನು ತಲುಪಿಸುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ತಿಳಿಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಡೆಲಿವರಿ ಬಾಯ್ಸ್ಗಳನ್ನು ವಿಚಾರಣೆ ನಡೆಸಿದ್ದಾರೆ. ಬಳಿಕ ಅವರನ್ನು ಅಲ್ಲಿಂದ ಕಳುಹಿಸಿದ್ದು, ಸ್ಥಳದಲ್ಲಿದ್ದ ಇಬ್ಬರುಎನ್.ಎಸ್.ಯು.ಐ ಕಾರ್ಯಕರ್ತರೂ ಅಲ್ಲಿಂದ ತೆರಳಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಛಲವಾದಿ ನಾರಾಯಣಸ್ವಾಮಿ, ದುಡ್ಡು ಕೊಟ್ಟಾದರೂ ಚಾಕು-ಚೂರಿಗಳನ್ನು ಕಳುಹಿಸಿದ್ದರೆ ತರಕಾರಿ ಕತ್ತರಿಸಲು ಇಟ್ಟುಕೊಳ್ಳುತ್ತಿದ್ದೆ ಎಂದು ವ್ಯಂಗ್ಯವಾಡಿದ್ದಾರೆ. ನಿಮ್ಮ ಚಾಕು-ಚೂರಿಗಳಿಗೆ ನಾನು ಹೆದರುವುದಿಲ್ಲ. ನನ್ನದು ನಕಲಿ ದಲಿತ ರಕ್ತವಲ್ಲ, ಅಂಬೇಡ್ಕರ್ ರಕ್ತ ಎಂದು ಹೇಳಿದ್ದಾರೆ.

ಇನ್ನು, ಹಣ ಪಾವತಿಸದೆ ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿ ಆರ್ಡರ್ ಬುಕ್ ಮಾಡಲಾಗಿದೆ. ಆನ್ಲೈನ್ ಡೆಲಿವರಿ ಬಾಯ್ಸ್ಗಳೊಂದಿಗೆಎನ್.ಎಸ್.ಯು.ಐ ಹುಡುಗರು ಬಂದಿದ್ದಾರೆ.

ವಿನಯ್ ಕುಮಾರ್ ಎನ್ ಎಂಬ ಹೆಸರಿನಲ್ಲಿ ಆರ್ಡರ್ ಮಾಡಲಾಗಿದೆ. ಈ ಹಿಂದೆ ತಮ್ಮ ಆಪ್ತ ಸಹಾಯಕ ಮಲ್ಲಪ್ಪ ಅವರ ಹೆಸರಿಗೂ ಆರ್ಡರ್ ಮಾಡಿ ಕಳುಹಿಸಲಾಗಿತ್ತು ಎಂದು ಆರೋಪಿಸಿದ್ದಾರೆ.

ಸುಮಾರು 20 ಮೊಬೈಲ್ ಸಂಖ್ಯೆಗಳ ಮೂಲಕ ಕರೆಗಳು ಮತ್ತು ಸಂದೇಶಗಳು ಬಂದಿವೆ. ವಿನಯ್ ಎಂಬ ಹೆಸರಿನ ಜೊತೆಗೆ ಚಂದ್ರ ಎಂಬ ಹೆಸರಿನ ವ್ಯಕ್ತಿಯಿಂದಲೂ ಸಂದೇಶ ಬಂದಿದೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಈ ಘಟನೆಗೆ ರಾಜ್ಯ ಸರ್ಕಾರವೇ ಹೊಣೆ. ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಕೆಪಿಸಿಸಿ ಅಧ್ಯಕ್ಷರೇ ಇದಕ್ಕೆ ಹೊಣೆ ಎಂದು ಆರೋಪಿಸಿರುವ ಅವರು, ಚಾಕು-ಚೂರಿಗಳನ್ನು ಕಳುಹಿಸಿರುವ ವಿಚಾರವಾಗಿ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.

ಅಲ್ಲದೆ, ರಾಜಕೀಯದಲ್ಲಿ ಚಾಕು-ಚೂರಿಗಳ ಮೂಲಕ ಬೆದರಿಸುವ ಪ್ರಯತ್ನ ಮಾಡಬಾರದು. ಜನರೇ ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande