
ಬಂಡೀಪುರ, 07 ನವೆಂಬರ್ (ಹಿ.ಸ.):
ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ, ಮಾನವ–ವನ್ಯಜೀವಿ ಸಂಘರ್ಷ ತಡೆ ಹಾಗೂ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಯ ಕಲ್ಯಾಣ ಕಾರ್ಯಕ್ರಮಗಳ ಕುರಿತು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಮಗ್ರ ಪರಿಶೀಲನೆ ನಡೆಸಿದರು.
ಬಂಡೀಪುರಕ್ಕೆ ಭೇಟಿ ನೀಡಿದ ಸಚಿವರು, ಅರಣ್ಯ ಸಂರಕ್ಷಣೆ, ವನ್ಯಜೀವಿಗಳ ರಕ್ಷಣೆ, ಆಧುನಿಕ ತಂತ್ರಜ್ಞಾನದ ಬಳಕೆ ಮತ್ತು ಸಂಘರ್ಷ ನಿಯಂತ್ರಣ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ 155ಕ್ಕೂ ಅಧಿಕವಾಗಿದ್ದು, ಪ್ರತಿ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಜಿಂಕೆ, ಕಾಡೆಮ್ಮೆ ಹಾಗೂ ಕಡವೆ ಸೇರಿದಂತೆ ಹೇರಳವಾದ ಬೇಟೆ ಪ್ರಾಣಿಗಳಿರುವುದು ಆರೋಗ್ಯಕರ ಅರಣ್ಯ ಪರಿಸರ ವ್ಯವಸ್ಥೆಯ ಸಂಕೇತವಾಗಿದೆ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಬಂಡೀಪುರದಲ್ಲಿ ಸಿದ್ಧಪಡಿಸಲಾದ 'ಡ್ರೋನ್ ಪೈಲಟ್ ಕ್ಷೇತ್ರ ಕೈಪಿಡಿ'ಯನ್ನು ಸಚಿವರು ಬಿಡುಗಡೆ ಮಾಡಿದರು. ಪ್ರವಾಸಿಗರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ 'ಪರಿಸರ ಪ್ರವಾಸೋದ್ಯಮ ಗುಣಮಟ್ಟ ಖಾತರಿ ಮತ್ತು ಪ್ರವಾಸಿಗರ ಕುಂದುಕೊರತೆ ಪರಿಹಾರ ವೇದಿಕೆ'ಯನ್ನು ಉದ್ಘಾಟಿಸಿದರು. ಪರಿಸರ ಸಂರಕ್ಷಣೆಯ ಸಂಕೇತವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದರು.
ಅರಣ್ಯ ಸಂರಕ್ಷಣೆಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಮುಂಚೂಣಿ ಸಿಬ್ಬಂದಿಗೆ ಪಡಿತರ ಕಿಟ್ಗಳನ್ನು ವಿತರಿಸಲಾಯಿತು. ಕ್ಷೇತ್ರ ಕಾರ್ಯಚಟುವಟಿಕೆಗಳಿಗೆ ಹೊಸ ವಾಹನಗಳನ್ನು ಹಸ್ತಾಂತರಿಸಲಾಯಿತು. ಆನೆ ಕಾರ್ಯಪಡೆ ಮತ್ತು ಚಿರತೆ ಕಾರ್ಯಪಡೆಯ ಸಿಬ್ಬಂದಿಯನ್ನು ಭೇಟಿ ಮಾಡಿ ಸಾರ್ವಜನಿಕರ ಸುರಕ್ಷತೆಗಾಗಿ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು.
ವನ್ಯಜೀವಿಗಳ ಚಲನವಲನ ಪತ್ತೆ ಹಾಗೂ ಅರಣ್ಯ ರಕ್ಷಣೆಗೆ ಬಳಸುವ ಉಷ್ಣಸಂವೇದಿ ಮಾನವರಹಿತ ವಿಮಾನಗಳು, ಜಿಪಿಎಸ್ ರೇಡಿಯೊ ಕೊರಳಪಟ್ಟಿಗಳು, ವನ್ಯಜೀವಿ ಚಲನವಲನ ಪತ್ತೆ ವ್ಯವಸ್ಥೆ ಮತ್ತು ಗಸ್ತು ಉಪಕರಣಗಳ ಕಾರ್ಯವೈಖರಿಯನ್ನು ವೀಕ್ಷಿಸಿದರು. ಜಿಲ್ಲಾ ಸಂಘರ್ಷ ನಿಯಂತ್ರಣ ಕೇಂದ್ರ ಹಾಗೂ ಅರಣ್ಯ ಇಲಾಖೆಯ ಶ್ವಾನದಳದ ಕಾರ್ಯನಿರ್ವಹಣೆಯನ್ನೂ ಪರಿಶೀಲಿಸಿದರು.
ಮಾನವ–ವನ್ಯಜೀವಿ ಸಂಘರ್ಷ ತಡೆಗೆ ರೈಲು ಕಂಬಿಗಳ ತಡೆಬೇಲಿ, ಸೌರ ವಿದ್ಯುತ್ ಬೇಲಿ ಹಾಗೂ ಆನೆ ಕಂದಕಗಳ ಪರಿಣಾಮಕಾರಿ ನಿರ್ವಹಣೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಬಂಡೀಪುರ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ ಎಲ್ಲ ಅರಣ್ಯ ಒತ್ತುವರಿಗಳನ್ನು ಸಂಪೂರ್ಣ ತೆರವುಗೊಳಿಸಬೇಕು. ಕಳ್ಳಬೇಟೆ ತಡೆ ಶಿಬಿರಗಳ ದುರಸ್ತಿಯನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಮೂಲೇಹೊಳೆ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು, ಹೊರರಾಜ್ಯಗಳಿಂದ ಬರುವ ವೈದ್ಯಕೀಯ ತ್ಯಾಜ್ಯಗಳನ್ನು ಅಕ್ರಮವಾಗಿ ವಿಲೇವಾರಿ ಮಾಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ವನ್ಯಜೀವಿಗಳ ದಾಳಿಯಿಂದ ಬೆಳೆ ನಷ್ಟ ಅನುಭವಿಸುವ ರೈತರಿಗೆ ಸೂಕ್ತ ಪರಿಹಾರ ಒದಗಿಸುವುದರ ಜತೆಗೆ ಅವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.
ಅರಣ್ಯದಲ್ಲಿ ಸಫಾರಿ ನಡೆಸಿ ಪರಿಸರ ವ್ಯವಸ್ಥೆಯನ್ನು ಅವಲೋಕಿಸಿದ ಸಚಿವರು, ಲಂಟಾನಾ ಮತ್ತು ಸೆನ್ನಾ ಸ್ಪೆಕ್ಟಾಬಿಲಿಸ್ನಂತಹ ಆಕ್ರಮಣಕಾರಿ ಕಳೆಗಳನ್ನು ವೈಜ್ಞಾನಿಕವಾಗಿ ತೆರವುಗೊಳಿಸುವ ಕುರಿತು ಚರ್ಚಿಸಿದರು. ಮುಂಬರುವ ದಿನಗಳಲ್ಲಿ ಕಾಡ್ಗಿಚ್ಚು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಗಣೇಶ್ ಪ್ರಸಾದ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ರಾಜನ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ರವಿಶಂಕರ್ ಆರ್. ಮತ್ತು ಡಾ. ಎಂ. ಮಾಲತಿ ಪ್ರಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ನಂದೀಶ್ ಎಲ್. ಮತ್ತು ಡಾ. ಪ್ರಭು ಗೌಡ, ವಲಯ ಅರಣ್ಯಾಧಿಕಾರಿಗಳಾದ ಸತೀಶ್ ಮತ್ತು ಮೋಹನ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.