ಟಿನ್ ಫ್ಯಾಕ್ಟರಿ ಜಂಕ್ಷನ್ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಕೃಷ್ಣ ಬೈರೇಗೌಡ ಸೂಚನೆ
ಬೆಂಗಳೂರು, 07 ನವೆಂಬರ್ (ಹಿ.ಸ.): ನಗರದ ಕೃಷ್ಣರಾಜಪುರಂನ ಟಿನ್ ಫ್ಯಾಕ್ಟರಿ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ನಿವಾರಣೆ ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ
ಕೃಷ್ಣ ಬೈರೇಗೌಡ


ಬೆಂಗಳೂರು, 07 ನವೆಂಬರ್ (ಹಿ.ಸ.):

ನಗರದ ಕೃಷ್ಣರಾಜಪುರಂನ ಟಿನ್ ಫ್ಯಾಕ್ಟರಿ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ನಿವಾರಣೆ ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಟಿನ್ ಫ್ಯಾಕ್ಟರಿ ಜಂಕ್ಷನ್‌ನ ಮರುಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಗ್ರ ಮಹಾಯೋಜನೆ ಸಿದ್ಧಪಡಿಸಬೇಕು. ಇದರಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಮೆಟ್ರೊ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇತರ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಮೆಟ್ರೊ ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ಇತರ ಸಾರ್ವಜನಿಕ ಸಾರಿಗೆ ಸೌಲಭ್ಯಗಳನ್ನು ಸಂಪರ್ಕಿಸುವ ಸುರಕ್ಷಿತ ಹಾಗೂ ನಿರಂತರ ಪಾದಚಾರಿ ಮಾರ್ಗಗಳನ್ನು ನಿರ್ಮಿಸುವುದು ಯೋಜನೆಯ ಪ್ರಮುಖ ಆದ್ಯತೆಯಾಗಿದೆ. ಬಸ್‌ಗಳ ನಿಲುಗಡೆಗೆ ಸೂಕ್ತ ಸ್ಥಳಾವಕಾಶ, ಸುಸಜ್ಜಿತ ಬಸ್ ನಿಲ್ದಾಣಗಳು ಹಾಗೂ ಮೆಟ್ರೊ, ಬಸ್, ಆಟೊ ಮತ್ತು ಟ್ಯಾಕ್ಸಿ ಸೇವೆಗಳ ನಡುವೆ ಸುಗಮ ಸಂಪರ್ಕ ಕಲ್ಪಿಸುವುದಕ್ಕೂ ಒತ್ತು ನೀಡಲಾಗಿದೆ.

ಜಂಕ್ಷನ್‌ನ ಸಂಚಾರ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಮರುವಿನ್ಯಾಸಗೊಳಿಸುವುದು, ರಸ್ತೆ ಅಗಲೀಕರಣ, ತಿರುವುಗಳ ಸುಧಾರಣೆ ಹಾಗೂ ಮುಕ್ತ ಎಡತಿರುವು ವ್ಯವಸ್ಥೆ ಕಲ್ಪಿಸುವ ಮೂಲಕ ವಾಹನ ಸಂಚಾರ ಸುಗಮಗೊಳಿಸಲು ಉದ್ದೇಶಿಸಲಾಗಿದೆ.

ಮೆಟ್ರೊ ಕಾಮಗಾರಿಯಿಂದ ಹಾನಿಗೊಳಗಾಗಿರುವ ರಸ್ತೆಗಳನ್ನು ತ್ವರಿತವಾಗಿ ಪುನರ್‌ನಿರ್ಮಿಸಬೇಕು. ಸಂಪರ್ಕ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಒಂದು ವಾರದೊಳಗೆ ಮುಚ್ಚಬೇಕು ಎಂದು ಸಚಿವರು ಸೂಚಿಸಿದ್ದಾರೆ. ಮಳೆ ನೀರು ನಿಲ್ಲುವ ಸಮಸ್ಯೆ, ರಸ್ತೆ ಮಟ್ಟದಲ್ಲಿನ ವ್ಯತ್ಯಾಸ, ಹಾಳಾಗಿರುವ ರಸ್ತೆ ಭಾಗಗಳು ಸೇರಿದಂತೆ ನಾಗರಿಕರು ಎದುರಿಸುತ್ತಿರುವ ಮೂಲಸೌಕರ್ಯ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.

ರಸ್ತೆಗಳು, ಪಾದಚಾರಿ ಮಾರ್ಗಗಳು, ಸಂಚಾರ ನಿರ್ವಹಣೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಸೌಂದರ್ಯೀಕರಣವನ್ನು ಒಳಗೊಂಡ ಸಮಗ್ರ ನಗರಾಭಿವೃದ್ಧಿ ಯೋಜನೆ ರೂಪಿಸುವಂತೆ ಸೂಚಿಸಲಾಗಿದೆ.

ವಾರ್ಡ್ ಒನ್ ಅಭಿಯಾನದ ಎರಡನೇ ಹಂತ

ಇದೇ ವೇಳೆ ಬೆಂಗಳೂರಿನಲ್ಲಿ ಆರಂಭಿಸಿರುವ ವಾರ್ಡ್ ಒನ್ ಅಭಿಯಾನ ಎರಡನೇ ಹಂತಕ್ಕೆ ಪ್ರವೇಶಿಸಿದ್ದು, ಸುಮಾರು 40 ವಾರ್ಡ್‌ಗಳಲ್ಲಿ ಅಭಿವೃದ್ಧಿ ಮತ್ತು ನಾಗರಿಕ ಸೌಲಭ್ಯಗಳ ಸುಧಾರಣಾ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಮೊದಲ ಹಂತದಲ್ಲಿ 43 ವಾರ್ಡ್‌ಗಳನ್ನು ಒಳಗೊಂಡಿದ್ದು, ಗುರುತಿಸಲಾದ ಕಾಮಗಾರಿಗಳಲ್ಲಿ ಸುಮಾರು ಶೇ.90ರಷ್ಟು ಪೂರ್ಣಗೊಂಡಿವೆ ಎಂದು ತಿಳಿಸಲಾಗಿದೆ.

ಈ ಅಭಿಯಾನದಡಿ ರಸ್ತೆ ಗುಂಡಿಗಳ ದುರಸ್ತಿ, ಹಾಳಾಗಿರುವ ರಸ್ತೆಗಳನ್ನು ಸರಿಪಡಿಸುವುದು, ಪಾದಚಾರಿ ಮಾರ್ಗಗಳ ದುರಸ್ತಿ, ಒತ್ತುವರಿ ತೆರವು, ಬೀದಿ ದೀಪಗಳ ಸಮಸ್ಯೆ ಪರಿಹಾರ, ಕಸ ಮತ್ತು ಕಟ್ಟಡ ನಿರ್ಮಾಣ ತ್ಯಾಜ್ಯ ತೆರವು, ಚರಂಡಿಗಳ ಹೂಳು ತೆಗೆಯುವುದು ಹಾಗೂ ಅಪಘಾತ ಸಂಭವಿಸುವ ಜಂಕ್ಷನ್‌ಗಳ ಸುಧಾರಣೆಗೆ ಆದ್ಯತೆ ನೀಡಲಾಗಿದೆ.

ಕಾಮಗಾರಿಗಳನ್ನು ತರಾತುರಿಯಲ್ಲಿ ಪೂರ್ಣಗೊಳಿಸುವುದಕ್ಕಿಂತ ಗುಣಮಟ್ಟದ ಹಾಗೂ ಶಾಶ್ವತ ಪರಿಹಾರ ಒದಗಿಸುವುದು ಮುಖ್ಯ ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಗತ್ಯವಿದ್ದರೆ ಕಾಮಗಾರಿಗಳ ಸಮರ್ಪಕ ಅನುಷ್ಠಾನಕ್ಕಾಗಿ ಅಭಿಯಾನವನ್ನು ಡಿಸೆಂಬರ್ ತಿಂಗಳವರೆಗೂ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande