ಮಹಾರಾಷ್ಟ್ರದಲ್ಲಿ ಟನ್ ಕಬ್ಬಿಗೆ ₹4,200, ಕರ್ನಾಟಕದಲ್ಲಿ ₹3,600 ಮಾತ್ರ: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ ವಾಗ್ದಾಳಿ
ಬೆಂಗಳೂರು, 07 ನವೆಂಬರ್ (ಹಿ.ಸ.): ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹4,200 ದರ ನೀಡುತ್ತಿದ್ದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬೆಳಗಾವಿ ರೈತರಿಗೆ ಕೇವಲ ₹3,600 ನೀಡುತ್ತಿದೆ. ನೆರೆಯ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದ ರೈತರಿಗೆ ಪ್ರತಿ ಟನ್‌ಗೆ ₹600 ಕಡಿಮೆ ಬೆ
ಅಶೋಕ್ ಸಂಗ್ರಹ ಚಿತ್ರ


ಬೆಂಗಳೂರು, 07 ನವೆಂಬರ್ (ಹಿ.ಸ.):

ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹4,200 ದರ ನೀಡುತ್ತಿದ್ದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬೆಳಗಾವಿ ರೈತರಿಗೆ ಕೇವಲ ₹3,600 ನೀಡುತ್ತಿದೆ. ನೆರೆಯ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದ ರೈತರಿಗೆ ಪ್ರತಿ ಟನ್‌ಗೆ ₹600 ಕಡಿಮೆ ಬೆಲೆ ಸಿಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದು, ಮಹಾರಾಷ್ಟ್ರದ ಬಿಜೆಪಿ ಸರ್ಕಾರಕ್ಕೆ ಕಬ್ಬು ಬೆಳೆಗಾರರಿಗೆ ಉತ್ತಮ ಬೆಲೆ ನೀಡಲು ಸಾಧ್ಯವಾಗಿರುವಾಗ ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ ಎಂದು ಕೇಳಿದ್ದಾರೆ.

ಒಂದೇ ರೀತಿಯ ಬೆಳೆಗೆ ಮತ್ತು ಒಂದೇ ರೀತಿಯ ಶ್ರಮಕ್ಕೆ ನೆರೆಯ ರಾಜ್ಯದಲ್ಲಿ ಉತ್ತಮ ಬೆಲೆ ಸಿಗುತ್ತಿರುವಾಗ ಕರ್ನಾಟಕದ ರೈತರಿಗೆ ಮಾತ್ರ ಅನ್ಯಾಯವಾಗುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ರೈತರ ಹಿತ ಕಾಯಬೇಕಾದ ಸರ್ಕಾರ ಸಕ್ಕರೆ ಕಾರ್ಖಾನೆಗಳ ಮಾಲೀಕರ ಒತ್ತಡಕ್ಕೆ ಮಣಿದಿದೆಯೇ? ಗಂಟೆಗಟ್ಟಲೆ ಸಭೆ ನಡೆಸಿದರೂ ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ದೊರೆಯದಿದ್ದರೆ ಮಾತುಕತೆಗಳು ಕೇವಲ ಪ್ರಚಾರದ ತಂತ್ರವಾಗಿವೆಯೇ? ನ್ಯಾಯಯುತ ಬೆಲೆಗಾಗಿ ರೈತರು ಬೀದಿಗಿಳಿದು ಹೋರಾಟ ನಡೆಸುವ ಪರಿಸ್ಥಿತಿಗೆ ಸರ್ಕಾರವೇ ಹೊಣೆ ಎಂದು ಅಶೋಕ ಟೀಕಿಸಿದ್ದಾರೆ.

ಅಧಿಕಾರ ಉಳಿಸಿಕೊಳ್ಳುವ ರಾಜಕೀಯದಲ್ಲಿ ತೋರುವ ಆಸಕ್ತಿಯನ್ನು ರೈತರ ಹಿತ ಕಾಯುವುದರಲ್ಲಿಯೂ ತೋರಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.

ಕರ್ನಾಟಕದ ಕಬ್ಬು ಬೆಳೆಗಾರರಿಗೆ ಮಹಾರಾಷ್ಟ್ರದ ಮಾದರಿಯಲ್ಲಿ ಪ್ರತಿ ಟನ್‌ಗೆ ಕನಿಷ್ಠ ₹4,200 ದರ ಖಚಿತಪಡಿಸಬೇಕು. ಬೆಳಗಾವಿ ಸೇರಿದಂತೆ ರಾಜ್ಯದ ಎಲ್ಲ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರೆಯುವಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮಹಾರಾಷ್ಟ್ರದ ಬಿಜೆಪಿ ಸರ್ಕಾರದ ಮಾದರಿಯನ್ನು ಅನುಸರಿಸಿ ರೈತರ ಬೆವರಿಗೆ ತಕ್ಕ ಬೆಲೆ ನೀಡಬೇಕು. ಇಲ್ಲದಿದ್ದರೆ ರೈತರ ಆಕ್ರೋಶಕ್ಕೆ ಕಾಂಗ್ರೆಸ್ ಸರ್ಕಾರ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಆರ್. ಅಶೋಕ ಎಚ್ಚರಿಕೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande