
ಬೆಂಗಳೂರು, 07 ನವೆಂಬರ್ (ಹಿ.ಸ.):
ಕಾಂಗ್ರೆಸ್ ಪಕ್ಷದ್ದು ಪ್ರಜಾಪ್ರಭುತ್ವದ ಆಡಳಿತವಲ್ಲ, ಬದಲಾಗಿ ಬೆದರಿಕೆ ಮತ್ತು ದಬ್ಬಾಳಿಕೆಯ ರಾಜಕಾರಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಆರೋಪಿಸಿದ್ದಾರೆ.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಅವರನ್ನು ಚಾಕು, ಚೂರಿಗಳ ಮೂಲಕ ಬೆದರಿಸುವ ಪ್ರಯತ್ನ ಕಾಂಗ್ರೆಸ್ ಪಕ್ಷದ ರಾಜಕೀಯ ಸಂಸ್ಕೃತಿಯನ್ನು ಮತ್ತೊಮ್ಮೆ ಬಯಲು ಮಾಡಿದೆ ಎಂದು ಅವರು ಟೀಕಿಸಿದ್ದಾರೆ.
ವಿರೋಧ ಪಕ್ಷದ ನಾಯಕರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದ ಕಾಂಗ್ರೆಸ್, ಬೆದರಿಕೆ ಮತ್ತು ದಬ್ಬಾಳಿಕೆಯ ಮಾರ್ಗವನ್ನು ಅನುಸರಿಸುತ್ತಿದೆಯೇ ಎಂದು ಪ್ರಶ್ನಿಸಿರುವ ಅವರು, ವಿರೋಧ ಪಕ್ಷದ ನಾಯಕರಿಗೆ ಬೆದರಿಕೆ ಹಾಕುವ ಮೂಲಕ ಪ್ರಜಾಪ್ರಭುತ್ವದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಂವಿಧಾನದ ಮೇಲೆ ನಂಬಿಕೆ ಹೊಂದಿರುವ ಯಾರೂ ಇಂತಹ ಗೂಂಡಾ ಸಂಸ್ಕೃತಿಯನ್ನು ಒಪ್ಪಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರದ ಬೆದರಿಕೆ ರಾಜಕಾರಣಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎನ್. ರವಿಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಸಂದೇಶದಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.