
ಬೆಂಗಳೂರು, 07 ನವೆಂಬರ್ (ಹಿ.ಸ.):
ಫಲಾನುಭವಿಗಳ ಆಯ್ಕೆಗೆ ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಮಾನದಂಡವಾಗಿಸುವ ವಿಚಾರದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದ್ವಂದ್ವ ನಿಲುವು ಅನುಸರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹೇಳಿಕೆ ನೀಡಿರುವ ಅವರು, ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಇಲಾಖೆ ಸಚಿವ ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್) ಅವರು ಫಲಾನುಭವಿಗಳ ಆಯ್ಕೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಪರಿಗಣಿಸುವ ಚಿಂತನೆ ಇದೆ ಎಂದು ಮಾತ್ರ ಹೇಳಿದ್ದಾರೆ. ಈ ಕುರಿತು ಇನ್ನೂ ಯಾವುದೇ ಆದೇಶ ಹೊರಡಿಸಿಲ್ಲ. ಆದರೆ, ಅದಕ್ಕೂ ಮುನ್ನವೇ ರಾಹುಲ್ ಗಾಂಧಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಇದೇ ರೀತಿಯ ಚಿಂತನೆ ಮತ್ತು ಯೋಜನೆಯನ್ನು ಕರ್ನಾಟಕದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಸೇರಿದಂತೆ ಇತರ ಸೌಲಭ್ಯಗಳನ್ನು ಪಡೆಯಲು ಮತದಾರರ ಪಟ್ಟಿಯಲ್ಲಿ ಹೆಸರು ಇರಬೇಕು ಎಂಬ ಮಾತನ್ನು ಅವರು ಹೇಳಿದ್ದಾರೆ ಎಂದು ಬೊಮ್ಮಾಯಿ ಉಲ್ಲೇಖಿಸಿದ್ದಾರೆ.
ತಮ್ಮದೇ ಪಕ್ಷದ ಸರ್ಕಾರ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಇಂತಹ ಯೋಜನೆ ಜಾರಿಗೆ ತರುವ ಚಿಂತನೆ ವ್ಯಕ್ತವಾಗಿರುವುದನ್ನು ನಿರ್ಲಕ್ಷಿಸಿ, ಕೇಂದ್ರ ಸರ್ಕಾರದ ವಿರುದ್ಧ ಮಾತ್ರ ರಾಹುಲ್ ಗಾಂಧಿ ಟೀಕೆ ಮಾಡುತ್ತಿರುವುದು ವಿಪರ್ಯಾಸ ಎಂದು ಅವರು ಆಕ್ಷೇಪಿಸಿದ್ದಾರೆ.
ತಮ್ಮ ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ವಿಚಾರವನ್ನೇ ಕೇಂದ್ರ ಸರ್ಕಾರದಿಂದ ನಿರೀಕ್ಷಿಸುವ ರಾಹುಲ್ ಗಾಂಧಿ, ಎಲ್ಲ ವಿಷಯಗಳಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇಂತಹ ದ್ವಂದ್ವ ನಿಲುವು ಅತ್ಯಂತ ಖಂಡನೀಯ ಎಂದು ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.