
ಮೈಸೂರು, 07 ನವೆಂಬರ್ (ಹಿ.ಸ.):
ಕೆ.ಆರ್. ನಗರದಲ್ಲಿ ಇಂದು ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲ್ಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಸಭೆಯನ್ನು ಸಚಿವ ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.
ಸರ್ಕಾರದ ಸೇವೆಗಳು ಜನಸಾಮಾನ್ಯರಿಗೆ ಸುಲಭವಾಗಿ, ಪಾರದರ್ಶಕವಾಗಿ ಮತ್ತು ಸಕಾಲದಲ್ಲಿ ತಲುಪಬೇಕು ಎಂಬ ಉದ್ದೇಶದಿಂದ ಪ್ರಜಾಸೇವೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ಕಚೇರಿಗಳಿಗೆ ಜನರು ಅಲೆದಾಡುವ ಬದಲು, ಸರ್ಕಾರವೇ ಜನರ ಮನೆಬಾಗಿಲಿಗೆ ತೆರಳಿ ಸೇವೆ ಒದಗಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದ ಮೊದಲ 100 ದಿನಗಳಲ್ಲಿ ಭೂಮಿ ಇಲ್ಲದವರಿಗೆ ಭೂಮಿ ಒದಗಿಸುವ ಭೂ ಗ್ಯಾರಂಟಿ, ಸರ್ಕಾರಿ ಸೇವೆಗಳನ್ನು ಸುಲಭವಾಗಿ ಪಡೆಯಲು ಅಂತರ್ಜಾಲ ತಾಣಗಳ ಮೂಲಕ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ಸೌಲಭ್ಯ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುವುದರ ಜತೆಗೆ, ಪ್ರತಿಯೊಬ್ಬ ನಾಗರಿಕನ ಸಮಸ್ಯೆಗೂ ಆಡಳಿತ ವ್ಯವಸ್ಥೆ ಸ್ಪಂದಿಸಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಜನರ ಅಹವಾಲುಗಳಿಗೆ ಸ್ಪಂದಿಸಿ, ಅವರ ಬದುಕಿನಲ್ಲಿ ಬದಲಾವಣೆ ತರುವಲ್ಲಿ ಇಂತಹ ಜನಸಂಪರ್ಕ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸಲಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಇ-ಖಾತಾ ಪ್ರತಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಅಂಕಿ-ಅಂಶಗಳ ನೋಟ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಕೆ.ಆರ್. ನಗರ ಶಾಸಕ ಡಿ. ರವಿಶಂಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಐಶ್ವರ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.