






ಬಳ್ಳಾರಿ, 07 ನವೆಂಬರ್ (ಹಿ.ಸ.)
ಅಧಿಕಾರಿಗಳು ಕಚೇರಿಗಳಿಗೆ ಬರುವ ಜನರೊಂದಿಗೆ ತಾಳ್ಮೆಯಿಂದ ವರ್ತಿಸಿ, ತಾಯಿ ಹೃದಯದಿಂದ ಸ್ಪಂದಿಸಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ (ಕಾವೇರಿ ಹ್ಯಾಂಡ್ ಲ್ಯೂಮ್ಸ್) ಅಧ್ಯಕ್ಷರೂ ಆದ ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಅವರು ಹೇಳಿದರು.
ರಾಜ್ಯ ಸರ್ಕಾರದ ನಿರ್ದೇಶನದಂತೆ, ‘ಬಾಗಿಲಿಗೆ ಬಂತು ಸರ್ಕಾರ- ಸೇವೆಗೆ ಇರಲಿ ಸಹಕಾರ’ ಎಂಬ ಆಶಯದಡಿ ಜಿಲ್ಲಾಡಳಿತ, ತಾಲೂಕು ಆಡಳಿತ ಕುರುಗೋಡು ಇವರ ಸಂಯುಕ್ತಾಶ್ರಯದಲ್ಲಿ ಸೋಮಸಮುದ್ರ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಹಮ್ಮಿಕೊಂಡಿರುವ ‘ಪ್ರಜಾಸೇವೆ’ ಜನಸ್ಪಂದನ ಕಾರ್ಯಕ್ರಮವು ಶ್ಲಾಘನೀಯವಾಗಿದೆ ಎಂದರು.
ಕಚೇರಿಗಳು, ಆಸ್ಪತ್ರೆಗಳು ಮತ್ತು ಗ್ರಾಮ ಪಂಚಾಯಿತಿಗಳಿಗೆ ಬರುವ ಸಾರ್ವಜನಿಕರನ್ನು ಗೌರವದಿಂದ ಬರಮಾಡಿಕೊಂಡು ಅವರ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬೇಕು. ಸಣ್ಣಪುಟ್ಟ ಕೆಲಸಗಳಿಗಾಗಿ ತಿಂಗಳುಗಟ್ಟಲೆ ಅಲೆದಾಡಿಸಬಾರದು. ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಬೇಕು ಎಂದು ಮನವಿ ಮಾಡಿದರು.
ತಾಲೂಕು ಪಂಚಾಯಿತಿ ಅಧಿಕಾರಿಗಳು ಗ್ರಾಮಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ದೊಡ್ಡ ಯೋಜನೆಗಳ ಬಗ್ಗೆ ಚಿಂತಿಸದೆ, ಮೊದಲು ಚರಂಡಿ ಬ್ಲಾಕ್ ಆಗಿ ನೀರು ರಸ್ತೆಗೆ ಬರುವುದನ್ನು ತಡೆಗಟ್ಟಬೇಕು. ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡದಂತೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಹಾಗೂ ಬೀದಿ ದೀಪಗಳ ದುರಸ್ತಿ ಮುಂತಾದ ಮೂಲಭೂತ ಕೆಲಸಗಳನ್ನು ತಕ್ಷಣವೇ ಕೈಗೆತ್ತಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಕಂಡುಬ0ದಲ್ಲಿ ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗದೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು. ಕೃಷಿ ಕೆಲಸಗಳಿಗೆ ಮಕ್ಕಳನ್ನು ತೊಡಗಿಸದೆ, ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಪೋಷಕರಲ್ಲಿ ಜಾಗೃತಿ ಮೂಡಿಸಲು ತಿಳಿಸಿದರು.
ಕುರುಗೋಡು ಭಾಗದ ಜನರಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಸುಮಾರು 100 ಎಕರೆ ಜಾಗದಲ್ಲಿ ಮಲ್ಲಪ್ಪ ಕೆರೆ ಅಭಿವೃದ್ಧಿ ಕಾಮಗಾರಿ ಹಾಗೂ ಕೆಎಂಇಆರ್ಸಿ ಅಡಿಯಲ್ಲಿ ಸುಮಾರು 70 ರಿಂದ 80 ಕೋಟಿ ವೆಚ್ಚದ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ಅಲ್ಲದೆ, ತಾಲೂಕಿನ 156 ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ವಿವಿಧ ಗ್ರಾಮಗಳ ಕುಡಿಯುವ ನೀರಿನ ಕೆರೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ ಎಂದು ವಿವರಿಸಿದರು.
ಈ ಬಾರಿಯ ತೀವ್ರ ಬರಗಾಲದ ನಡುವೆಯೂ ರೈತರ ಬೆಳೆಗಳಿಗೆ ಕಾಲುವೆ ಮೂಲಕ ನೀರು ಒದಗಿಸಲು ಸರ್ಕಾರ ಬದ್ಧವಾಗಿದೆ. ನವೆಂಬರ್ 20ರ ನಂತರವೂ ನೀರು ಹರಿಸಲು ಮುಖ್ಯಮಂತ್ರಿಗಳೊ0ದಿಗೆ ಚರ್ಚಿಸಲಾಗಿದೆ. ಸರ್ಕಾರದ ಗೃಹಲಕ್ಷಿ, ಉಚಿತ ವಿದ್ಯುತ್ ಹಾಗೂ ಉಚಿತ ಬಸ್ ಪ್ರಯಾಣದಂತಹ ಯೋಜನೆಗಳು ಬಡ ಜನರ ಜೀವನಕ್ಕೆ ಆಸರೆಯಾಗಿವೆ ಎಂದರು.
ಅಧಿಕಾರಿಗಳು ಮತ್ತು ಸಾರ್ವಜನಿಕರು ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದ ಶಾಸಕರು, ಸಾರ್ವಜನಿಕರು ನೀಡಿದ ಪ್ರತಿಯೊಂದು ಅಹವಾಲನ್ನು ದಾಖಲಿಸಿಕೊಂಡು ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.
ಜಿಲ್ಲೆಯಲ್ಲಿ ಇದುವರೆಗೆ ಆಯೋಜಿಸಲಾದ ಪ್ರಜಾಸೇವಾ ಆಂದೋಲನ ಸಭೆಗಳಲ್ಲಿ ಸಾರ್ವಜನಿಕರಿಂದ ಒಟ್ಟು 3,281 ಅರ್ಜಿಗಳು ಸ್ವೀಕೃತವಾಗಿವೆ. ಇವುಗಳಲ್ಲಿ ಕಾಲಮಿತಿಯೊಳಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು 3,085 ಅರ್ಜಿಗಳನ್ನು ಯಶಸ್ವಿಯಾಗಿ ವಿಲೇವಾರಿ ಮಾಡಲಾಗಿದೆ. ಪ್ರಸ್ತುತ ಕೇವಲ 196 ಅರ್ಜಿಗಳು ಮಾತ್ರ ವಿವಿಧ ಹಂತಗಳ ಪರಿಶೀಲನೆಯಲ್ಲಿದ್ದು, ಬಾಕಿ ಉಳಿದಿವೆ. ಈ ಅರ್ಜಿಗಳನ್ನು ಕೂಡ ತ್ವರಿತವಾಗಿ ಪರಿಶೀಲಿಸಿ, ಶೀಘ್ರದಲ್ಲೇ ಸೂಕ್ತ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗಣ್ಯರನ್ನು ಸ್ವಾಗತಿಸಿದರು.
*ಸಾರ್ವಜನಿಕರ ಅಹವಾಲು ಸ್ವೀಕಾರಕ್ಕೆ ಪ್ರತ್ಯೇಕ ಮಳಿಗೆಗಳ ವ್ಯವಸ್ಥೆ:*
ನಾಗರಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ‘ಪ್ರಜಾಸೇವೆ ಆಂದೋಲನ' ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ತ್ವರಿತವಾಗಿ ಆಲಿಸಿ ಸ್ವೀಕರಿಸಲು ವಿವಿಧ ಇಲಾಖಾವಾರು ಮಳಿಗೆಗಳನ್ನು ತೆರೆಯಲಾಗಿತ್ತು. ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ತಮ್ಮ ಸಮಸ್ಯೆಗಳ ಅರ್ಜಿಯನ್ನು ಸಲ್ಲಿಸುವ ಮೂಲಕ ಅಭೂತಪೂರ್ವ ಸ್ಪಂದನೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಆವರಣದಲ್ಲಿ ಜನಸಾಮಾನ್ಯರಿಗೆ ಯಾವುದೇ ಗೊಂದಲವಿಲ್ಲದೆ ಸುಲಭವಾಗಿ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಕಂದಾಯ, ಪೌರಾಡಳಿತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ, ಸಮಾಜ ಕಲ್ಯಾಣ ಹಾಗೂ ಪೊಲೀಸ್ ಇಲಾಖೆಗಳಿಗೆ ಪ್ರತ್ಯೇಕ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ವಸತಿ, ಕುಡಿಯುವ ನೀರು, ರಸ್ತೆ ದುರಸ್ತಿ, ವಿದ್ಯುತ್ ದೀಪ, ಒಳಚರಂಡಿ, ಪಿಂಚಣಿ, ಸಮುದಾಯ ಭವನ, ಬಸ್ ಸೌಲಭ್ಯ ಹಾಗೂ ಬೋರ್ವೆಲ್ ಸೌಲಭ್ಯ ಕುರಿತ ಸಮಸ್ಯೆಗಳಿಗೆ ದೂರುಗಳು ದಾಖಲಾದವು.
ಅದರಂತೆ ವಿಶೇಷ ಚೇತನರೊಬ್ಬರು, ತ್ರಿಚಕ್ರ ವಾಹನ ನೀಡಬೇಕು ಎಂದು ಪ್ರಸ್ತಾಪಿದರು. ಶಾಸಕರು ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ಸಿಎಸ್ಆರ್ ಅನುದಾನದಡಿ ವಿತರಣೆಗೆ ಕ್ರಮವಹಿಸಬೇಕು ಎಂದು ಸ್ಥಳದಲ್ಲೇ ಮನವಿ ಮಾಡಿದರು.
ಸಲ್ಲಿಕೆಯಾದ ಪ್ರತಿಯೊಂದು ಅರ್ಜಿಗೂ ಅಧಿಕಾರಿಗಳು ಗಣಕೀಕೃತ ಸ್ವೀಕೃತಿ ರಸೀದಿ ನೀಡಿದ್ದು, ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಲು ಟ್ರ್ಯಾಕಿಂಗ್ ಸಂಖ್ಯೆಯನ್ನು ಒದಗಿಸಲಾಯಿತು. ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು, ಸಣ್ಣಪುಟ್ಟ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಿದರು. ತನಿಖೆ ಅಥವಾ ದಾಖಲೆಗಳ ಪರಿಶೀಲನೆ ಅಗತ್ಯವಿರುವ ಅರ್ಜಿಗಳಿಗೆ ಕಾಲಮಿತಿ ನಿಗದಿಪಡಿಸಿ, ನಿಗದಿತ ದಿನದೊಳಗೆ ಅರ್ಜಿದಾರರಿಗೆ ಮಾಹಿತಿ ತಲುಪಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ, ಕುರುಗೋಡು ಪುರಸಭೆಯ ಅಧ್ಯಕ್ಷ ಮಂಜುನಾಥ್, ಕುರುಗೋಡು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಸವನಗೌಡ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಬಳ್ಳಾರಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್ ಬಸವರಾಜ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿ- ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್