ದಂಪತಿ ಕಲಹದಲ್ಲಿ ಮಗುವನ್ನು ಅಸ್ತ್ರವನ್ನಾಗಿಸಿಕೊಳ್ಳುವಂತಿಲ್ಲ: ಹೈಕೋರ್ಟ್
ಬೆಂಗಳೂರು, 07 ನವೆಂಬರ್ (ಹಿ.ಸ.): ಸುಳ್ಳು ಲೈಂಗಿಕ ದೌರ್ಜನ್ಯ ಆರೋಪದ ದಂಪತಿಗಳ ನಡುವಿನ ವೈಯಕ್ತಿಕ ಕಲಹದಲ್ಲಿ ಮುಗ್ಧ ಮಗುವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಬಾರದು. ಪೋಷಕರ ನಡುವಿನ ದ್ವೇಷ ಅಥವಾ ವೈಯಕ್ತಿಕ ಲೆಕ್ಕಾಚಾರಗಳನ್ನು ತೀರಿಸಿಕೊಳ್ಳಲು ಮಗುವಿನ ಬಾಲ್ಯವನ್ನು ಬಲಿಪಶುವನ್ನಾಗಿಸಬಾರದು ಎಂದು ಕರ್ನ
Karnataka-High-Court-says-child-cannot-be-used-as-weapon-in-marital-dispute


ಬೆಂಗಳೂರು, 07 ನವೆಂಬರ್ (ಹಿ.ಸ.):

ಸುಳ್ಳು ಲೈಂಗಿಕ ದೌರ್ಜನ್ಯ ಆರೋಪದ ದಂಪತಿಗಳ ನಡುವಿನ ವೈಯಕ್ತಿಕ ಕಲಹದಲ್ಲಿ ಮುಗ್ಧ ಮಗುವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಬಾರದು. ಪೋಷಕರ ನಡುವಿನ ದ್ವೇಷ ಅಥವಾ ವೈಯಕ್ತಿಕ ಲೆಕ್ಕಾಚಾರಗಳನ್ನು ತೀರಿಸಿಕೊಳ್ಳಲು ಮಗುವಿನ ಬಾಲ್ಯವನ್ನು ಬಲಿಪಶುವನ್ನಾಗಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂಬ ವಾದದ ಭರದಲ್ಲಿ ಮಗುವಿನ ರಕ್ಷಣೆಯ ಹಕ್ಕನ್ನು ಕಡೆಗಣಿಸಲು ಸಾಧ್ಯವಿಲ್ಲ. ಮಗುವಿನ ಹಿತಾಸಕ್ತಿ ಮತ್ತು ಸುರಕ್ಷತೆಯೇ ಎಲ್ಲಕ್ಕಿಂತ ಮುಖ್ಯ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.

ನಾಲ್ಕೂವರೆ ವರ್ಷದ ಮಗಳ ಮೇಲೆ ಮನೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಪತ್ನಿಯೊಬ್ಬರು ತಮ್ಮ ಪತಿ, ಅತ್ತೆ-ಮಾವ ಹಾಗೂ ನಾದಿನಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ಮಹತ್ವದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

2018ರಲ್ಲಿ ವಿವಾಹವಾಗಿದ್ದ ದಂಪತಿಗೆ 2022ರಲ್ಲಿ ಹೆಣ್ಣು ಮಗು ಜನಿಸಿತ್ತು. 2024ರಲ್ಲಿ ದಂಪತಿ ನಡುವೆ ವೈವಾಹಿಕ ಕಲಹ ಆರಂಭವಾಗಿತ್ತು. ಪತ್ನಿ ಮಗಳನ್ನು ಭೇಟಿಯಾಗಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಪತಿ, ಮಗಳನ್ನು ಭೇಟಿಯಾಗುವ ಹಕ್ಕು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, 2026ರ ಮೇ ತಿಂಗಳಲ್ಲಿ ಎರಡು ದಿನಗಳ ಕಾಲ ಮಗಳನ್ನು ಭೇಟಿಯಾಗಲು ಪತಿಗೆ ಅವಕಾಶ ಕಲ್ಪಿಸಿತ್ತು. ಅದರಂತೆ ಪತಿ ಮಗಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು.

ಆದರೆ, ಮಗಳನ್ನು ಮತ್ತೆ ತಾಯಿಯ ವಶಕ್ಕೆ ಒಪ್ಪಿಸಿದ ಬಳಿಕ ಮಗುವಿನ ಖಾಸಗಿ ಅಂಗಗಳ ಸುತ್ತ ಕೆಂಪಾಗಿದ್ದು, ತೊಂದರೆಯಾಗುತ್ತಿದೆ ಎಂದು ಮಗು ಹೇಳಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪತಿ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ವಿಚಾರಣೆ ವೇಳೆ ಮಗುವನ್ನು ಪರೀಕ್ಷಿಸಿದ್ದ ಇಬ್ಬರು ವೈದ್ಯರಿಂದ ಪ್ರಮಾಣಪತ್ರ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿತ್ತು. ವೈದ್ಯಕೀಯ ವರದಿಗಳ ಪ್ರಕಾರ, ಮಗುವಿನ ಖಾಸಗಿ ಅಂಗಗಳ ಸುತ್ತ ಕಂಡುಬಂದ ಕೆಂಪು ಬಣ್ಣ ಮತ್ತು ದೈಹಿಕ ಕಿರಿಕಿರಿಯು ಅಲರ್ಜಿ, ಉರಿಯೂತ, ಉಜ್ಜುವಿಕೆ ಅಥವಾ ಕೆರೆತದಿಂದಲೂ ಉಂಟಾಗುವ ಸಾಧ್ಯತೆಗಳಿವೆ. ಆದರೆ, ಈ ಲಕ್ಷಣಗಳಿಗೆ ಲೈಂಗಿಕ ದೌರ್ಜನ್ಯವೇ ನಿರ್ದಿಷ್ಟ ಕಾರಣ ಎಂದು ವೈದ್ಯರು ದೃಢಪಡಿಸಿಲ್ಲ.

ವೈದ್ಯಕೀಯ ಸಾಕ್ಷ್ಯದಲ್ಲಿ ನಿರ್ದಿಷ್ಟ ಕಾರಣ ದೃಢಪಟ್ಟಿಲ್ಲ:

ಆರೋಪಗಳಿಗೆ ವಸ್ತುನಿಷ್ಠ ಆಧಾರ ಒದಗಿಸಬೇಕಿದ್ದ ವೈದ್ಯಕೀಯ ಸಾಕ್ಷ್ಯವು ದೌರ್ಜನ್ಯ ನಡೆದಿರುವುದನ್ನು ಖಚಿತಪಡಿಸುವುದಿಲ್ಲ. ಇಬ್ಬರು ವೈದ್ಯರ ಪೈಕಿ ಯಾರೊಬ್ಬರೂ ಮಗುವಿನ ದೈಹಿಕ ಲಕ್ಷಣಗಳಿಗೆ ನಿರ್ದಿಷ್ಟ ಕಾರಣವನ್ನು ದೃಢಪಡಿಸಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.

ಅಲ್ಲದೆ, ಪತಿಯ ಕುಟುಂಬದ ಸದಸ್ಯರ ವಿರುದ್ಧ ಯಾವುದೇ ನಿರ್ದಿಷ್ಟ ಆರೋಪಗಳಿಲ್ಲದಿದ್ದರೂ ಅವರನ್ನು ಪ್ರಕರಣದಲ್ಲಿ ಸಿಲುಕಿಸಿರುವುದು ವೈವಾಹಿಕ ಕಲಹದಿಂದ ಉಂಟಾದ ವೈಯಕ್ತಿಕ ದ್ವೇಷವನ್ನು ತೀರಿಸಿಕೊಳ್ಳುವ ಪ್ರಯತ್ನದ ಲಕ್ಷಣಗಳನ್ನು ಹೊಂದಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಇಂತಹ ಸುಳ್ಳು ಆರೋಪಗಳು ವ್ಯಕ್ತಿಯ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವುದಲ್ಲದೆ, ಅವರ ಜೀವನದ ಮೇಲೆ ಅಳಿಸಲಾಗದ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.

ಪತ್ನಿ ವಿರುದ್ಧ ಕಾನೂನು ಕ್ರಮಕ್ಕೆ ಅವಕಾಶ:

ಇದೇ ವೇಳೆ, ಸುಳ್ಳು ದೂರು ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಪತ್ನಿಯ ವಿರುದ್ಧ ಪೋಕ್ಸೊ ಕಾಯ್ದೆಯ ಸೆಕ್ಷನ್ 22ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲು ಪತಿಗೆ ಹೈಕೋರ್ಟ್ ಅವಕಾಶ ನೀಡಿದೆ.

ವ್ಯಕ್ತಿಯನ್ನು ಅವಮಾನಿಸುವ, ಹಣ ವಸೂಲಿ ಮಾಡುವ, ಬೆದರಿಸುವ ಅಥವಾ ಮಾನಹಾನಿ ಮಾಡುವ ಉದ್ದೇಶದಿಂದ ಸುಳ್ಳು ದೂರು ಅಥವಾ ಸುಳ್ಳು ಮಾಹಿತಿ ನೀಡುವುದು ಕಾನೂನಿನಡಿ ಗಂಭೀರವಾಗಿ ಪರಿಗಣಿಸಬೇಕಾದ ಕೃತ್ಯವಾಗಿದೆ.

ಸೆಕ್ಷನ್ 22ರ ಅಡಿಯಲ್ಲಿ ಕ್ರಮ ಜರುಗಿಸಲು ಅಗತ್ಯವಾದ ಕಾನೂನು ಅಂಶಗಳು ಮತ್ತು ಷರತ್ತುಗಳು ಪೂರೈಸಿದಲ್ಲಿ, ಅರ್ಜಿದಾರರು ಸೂಕ್ತ ಕಾನೂನು ಕ್ರಮ ಆರಂಭಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande