
ಕಲಬುರಗಿ, 07 ನವೆಂಬರ್ (ಹಿ.ಸ.):
ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಕಲಬುರಗಿ ನಗರ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸಿಹಿ ಸುದ್ದಿ ನೀಡಿದೆ.
ಕಳ್ಳತನವಾಗಿದ್ದ ಹಾಗೂ ಕಳೆದುಹೋಗಿದ್ದ ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ಕೈಗೊಂಡಿದ್ದ 'ಆಪರೇಷನ್ ಭರವಸೆ' ಕಾರ್ಯಾಚರಣೆಯಲ್ಲಿ ಬರೋಬ್ಬರಿ 300 ಮೊಬೈಲ್ಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ.
ಕಲಬುರಗಿ ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮೊಬೈಲ್ ಫೋನ್ಗಳು ಕಳ್ಳತನವಾಗಿರುವ ಹಾಗೂ ಕಳೆದುಹೋಗಿರುವ ಕುರಿತು ದೂರುಗಳು ದಾಖಲಾಗಿದ್ದವು.
ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಸುಮಾರು 60 ಲಕ್ಷ ರೂಪಾಯಿ ಮೌಲ್ಯದ 300 ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಮೊಬೈಲ್ ಕಳೆದುಕೊಂಡಿದ್ದ ಸಾರ್ವಜನಿಕರು E-LOST ಹಾಗೂ CEIR ಪೋರ್ಟಲ್ಗಳ ಮೂಲಕ ದೂರು ದಾಖಲಿಸಿದ್ದರು. ಈ ದೂರುಗಳನ್ನು ಆಧರಿಸಿ ತಾಂತ್ರಿಕ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮೊಬೈಲ್ಗಳನ್ನು ಪತ್ತೆಹಚ್ಚಿದ್ದಾರೆ.
ಪತ್ತೆಯಾದ ಮೊಬೈಲ್ ಫೋನ್ಗಳನ್ನು ಅವುಗಳ ನೈಜ ಮಾಲೀಕರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮೊಬೈಲ್ ಕಳೆದುಕೊಂಡು ಆತಂಕದಲ್ಲಿದ್ದ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯ ಈ ಕಾರ್ಯಾಚರಣೆ ಸಂತಸ ತಂದಿದೆ.
ಕಳ್ಳತನ ಹಾಗೂ ಕಳೆದುಹೋದ ಮೊಬೈಲ್ಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಿದ ಕಲಬುರಗಿ ನಗರ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
--------------
ಹಿಂದೂಸ್ತಾನ್ ಸಮಾಚಾರ್ / BHARGAVI G R