ಶ್ವೇತಭವನದಲ್ಲಿ ಟ್ರಂಪ್ರಿಂದ ದೀಪಾವಳಿ ಆಚರಣೆ: ಹನುಮಾನ್ ಚಾಲೀಸಾ ಉಡುಗೊರೆ ನೀಡಿದ ಭಾರತೀಯ ಉದ್ಯಮಿ
ವಾಷಿಂಗ್ಟನ್, 07 ನವೆಂಬರ್ (ಹಿ.ಸ.): ಅಮೆರಿಕದ ಶ್ವೇತಭವನದಲ್ಲೂ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ವಿಶೇಷ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಮೂಲದ ಗಣ್ಯರೊಂದಿಗೆ ಓವಲ್ ಕಚೇರಿಯಲ್ಲಿ ದೀಪಾವಳಿ ಆಚರಿಸಿದರು. ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕವಾಗಿ ದ
व्हाइट हाउस में भारतीय हस्तियाें के साथ अमेरिकी राष्ट्रपति डोनाल्ड ट्रंप


भेंट की गई हनुमान चालीसा


ವಾಷಿಂಗ್ಟನ್, 07 ನವೆಂಬರ್ (ಹಿ.ಸ.):

ಅಮೆರಿಕದ ಶ್ವೇತಭವನದಲ್ಲೂ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ವಿಶೇಷ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಮೂಲದ ಗಣ್ಯರೊಂದಿಗೆ ಓವಲ್ ಕಚೇರಿಯಲ್ಲಿ ದೀಪಾವಳಿ ಆಚರಿಸಿದರು. ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕವಾಗಿ ದೀಪ ಬೆಳಗಿಸಲಾಯಿತು. ಇದೇ ವೇಳೆ ಭಾರತೀಯ ತಂತ್ರಜ್ಞಾನ ಉದ್ಯಮಿ ಹಾಗೂ ಜಿಒಕ್ಯೂಐಐ ಸಂಸ್ಥಾಪಕ ವಿಶಾಲ್ ಗೋಂಡಲ್ ಅವರು ಟ್ರಂಪ್ ಅವರಿಗೆ ಹನುಮಾನ್ ಚಾಲೀಸಾ ಪ್ರತಿಯನ್ನು ಉಡುಗೊರೆಯಾಗಿ ನೀಡಿದರು.

ಕಾರ್ಯಕ್ರಮದ ಚಿತ್ರಗಳು ಹಾಗೂ ತಮ್ಮ ಅನುಭವವನ್ನು ವಿಶಾಲ್ ಗೋಂಡಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೀಪಾವಳಿ ಆಚರಿಸಿದ್ದು ಗೌರವದ ಸಂಗತಿ ಎಂದು ಅವರು ಬಣ್ಣಿಸಿದ್ದಾರೆ. ಕೋಟ್ಯಂತರ ಜನರು ಧೈರ್ಯ, ಭಕ್ತಿ ಮತ್ತು ಶಕ್ತಿಯ ಪ್ರೇರಣೆಗಾಗಿ ಪಠಿಸುವ ಹನುಮಾನ್ ಚಾಲೀಸಾವನ್ನು ಅಧ್ಯಕ್ಷರಿಗೆ ಉಡುಗೊರೆಯಾಗಿ ನೀಡಿರುವುದಾಗಿ ತಿಳಿಸಿದ್ದಾರೆ.

ಓವಲ್ ಕಚೇರಿಯಲ್ಲಿ ದೀಪ ಬೆಳಗಿಸುವ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಸ್ನೇಹ ಸಂಬಂಧ ಮತ್ತಷ್ಟು ಬಲಗೊಳ್ಳಲಿ ಎಂದು ಪ್ರಾರ್ಥಿಸಿದ್ದಾಗಿ ಗೋಂಡಲ್ ಹೇಳಿದ್ದಾರೆ. ಅಲ್ಲದೆ, ಜಗತ್ತಿನಲ್ಲಿ ಶಾಂತಿ, ಸಮೃದ್ಧಿ, ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ನೆಲೆಸಲಿ ಎಂದು ಹಾರೈಸಿದ್ದಾರೆ.

ಭಾರತೀಯ ಸಂಪ್ರದಾಯದ ಜನಪ್ರಿಯ ಆಶೀರ್ವಚನವಾದ 'ಜುಗ್ ಜುಗ್ ಜಿಯೋ' ಎಂಬ ಮಾತನ್ನೂ ಅವರು ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ಇದರ ಅರ್ಥ ದೀರ್ಘಕಾಲ ಆರೋಗ್ಯಕರವಾಗಿ ಮತ್ತು ಸಂತೋಷದಿಂದ ಬದುಕು ಎಂಬುದಾಗಿದೆ. ದೀಪಾವಳಿ ಸಂದರ್ಭದಲ್ಲಿ ವಿಶ್ವದ ಎಲ್ಲ ಜನರಿಗೂ ಶಾಂತಿ ಮತ್ತು ನೆಮ್ಮದಿ ದೊರೆಯಲಿ ಎಂದು ಅವರು ಹಾರೈಸಿದ್ದಾರೆ.

ಶ್ವೇತಭವನದಲ್ಲಿ ನಡೆದ ಈ ದೀಪಾವಳಿ ಕಾರ್ಯಕ್ರಮದಲ್ಲಿ ಖ್ಯಾತ ಮಿಶೆಲಿನ್ ತಾರಾ ಬಾಣಸಿಗ ವಿಕಾಸ್ ಖನ್ನಾ, ಕೆನಡಾದ ಮಾಜಿ ಸಂಸದೆ ರೂಬಿ ಧಲ್ಲಾ ಸೇರಿದಂತೆ ಭಾರತೀಯ ಮೂಲದ ಹಲವು ಗಣ್ಯರು ಪಾಲ್ಗೊಂಡಿದ್ದರು. ಎಲ್ಲರೂ ಒಟ್ಟಾಗಿ ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಶ್ವೇತಭವನದ ಓವಲ್ ಕಚೇರಿಯಲ್ಲಿ ನಡೆದ ಈ ಆಚರಣೆಯು ಭಾರತ ಮತ್ತು ಅಮೆರಿಕ ನಡುವಿನ ಸಾಂಸ್ಕೃತಿಕ ಬಾಂಧವ್ಯದ ಪ್ರತೀಕವಾಗಿ ಗಮನ ಸೆಳೆಯಿತು. ಭಾರತೀಯ ಸಂಸ್ಕೃತಿ, ಸಂಪ್ರದಾಯ, ಧಾರ್ಮಿಕ ನಂಬಿಕೆ ಮತ್ತು ಸಾಂಸ್ಕೃತಿಕ ಪರಂಪರೆಗೆ ಈ ಕಾರ್ಯಕ್ರಮದಲ್ಲಿ ವಿಶೇಷ ಮನ್ನಣೆ ದೊರೆಯಿತು.

-------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande