ಗೃಹಲಕ್ಷ್ಮಿ ಯೋಜನೆಯ ₹5,000 ಕೋಟಿ ಬಾಕಿ ಹಣದ ಲೆಕ್ಕ ಕೊಡಿ: ಆರ್. ಅಶೋಕ
ಬೆಂಗಳೂರು, 07 ನವೆಂಬರ್ (ಹಿ.ಸ.): ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪಾವತಿಸಬೇಕಿರುವ ಸುಮಾರು ₹5,000 ಕೋಟಿ ಬಾಕಿ ಹಣದ ಲೆಕ್ಕ ನೀಡುವಂತೆ ಪ್ರತಿಪಕ್ಷ ನಾಯಕ ಆರ್. ಅಶೋಕ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿಕೆ ನ
ಅಶೋಕ್ ಸಂಗ್ರಹ ಚಿತ್ರ


ಬೆಂಗಳೂರು, 07 ನವೆಂಬರ್ (ಹಿ.ಸ.):

ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪಾವತಿಸಬೇಕಿರುವ ಸುಮಾರು ₹5,000 ಕೋಟಿ ಬಾಕಿ ಹಣದ ಲೆಕ್ಕ ನೀಡುವಂತೆ ಪ್ರತಿಪಕ್ಷ ನಾಯಕ ಆರ್. ಅಶೋಕ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ರಾಜ್ಯದ ಬಡ ಮಹಿಳೆಯರಿಗೆ ಸೇರಬೇಕಾದ ಹಣದ ಲೆಕ್ಕ ನೀಡದೆ ಜಿಲ್ಲೆ ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ ಸಮಾವೇಶ ನಡೆಸಲು ಮುಂದಾಗಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಮಹಿಳೆಯರಿಗೆ ಹಣ ಪಾವತಿಸುವಲ್ಲಿ ವಿಳಂಬವಾಗುತ್ತಿದ್ದರೂ ಸಮಾವೇಶಗಳ ಪ್ರಚಾರಕ್ಕೆ ಭರ್ಜರಿ ಸಿದ್ಧತೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಿಸಿದ್ದಾರೆ.

ಮಹಾಲೇಖಪಾಲರ (ಸಿಎಜಿ) ಪರಿಶೀಲನೆಯಲ್ಲಿ ₹225 ಕೋಟಿಗೂ ಅಧಿಕ ಹಣಕಾಸಿನ ಅಕ್ರಮಗಳು ಮತ್ತು ಗಂಭೀರ ಲೋಪಗಳು ಬೆಳಕಿಗೆ ಬಂದಿವೆ ಎಂದು ಆರೋಪಿಸಿರುವ ಅವರು, ಇದಕ್ಕೆ ಹೊಣೆ ಹೊರುವವರು ಯಾರು ಎಂದು ಪ್ರಶ್ನಿಸಿದ್ದಾರೆ.

2.88 ಲಕ್ಷ ಮೃತ ಫಲಾನುಭವಿಗಳ ಹೆಸರಿನಲ್ಲಿ ಗೃಹಲಕ್ಷ್ಮಿ ಹಣ ವರ್ಗಾವಣೆಯಾಗಿರುವ ಗಂಭೀರ ಲೋಪ ಬೆಳಕಿಗೆ ಬಂದಿದೆ. ಮೃತರ ಖಾತೆಗಳಿಗೆ ₹115 ಕೋಟಿ ಹಣ ಜಮೆಯಾಗಿರುವುದನ್ನು ಸರ್ಕಾರವೇ ಒಪ್ಪಿಕೊಂಡಿದೆ. ಈ ಹಣವನ್ನು ವಸೂಲಿ ಮಾಡಲಾಗಿದೆಯೇ ಮತ್ತು ಲೋಪಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಅಶೋಕ ಪ್ರಶ್ನಿಸಿದ್ದಾರೆ.

ಬ್ಯಾಂಕ್ ಖಾತೆ ಸಂಖ್ಯೆಯನ್ನೇ ನಮೂದಿಸದೆ 23,262 ಪಾವತಿಗಳ ಮೂಲಕ ₹46.52 ಕೋಟಿ ವರ್ಗಾವಣೆಯಾಗಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ಅಲ್ಲದೆ, ಒಂದೇ ಬ್ಯಾಂಕ್ ಖಾತೆಗೆ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳನ್ನು ಜೋಡಿಸಿರುವ ಲೋಪ ಹೇಗೆ ಸಂಭವಿಸಿತು ಎಂಬುದಕ್ಕೆ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಎರಡು ಕಂತುಗಳ ಸುಮಾರು ₹5,000 ಕೋಟಿ ಹಣವನ್ನು ಮಹಿಳೆಯರಿಗೆ ಪಾವತಿಸದೆ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಆರೋಪಿಸಿರುವ ಅವರು, ವಿಧಾನಮಂಡಲದಲ್ಲಿ ಪ್ರಶ್ನಿಸಿದಾಗಲೂ ಸರ್ಕಾರ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ಟೀಕಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಹೆಸರಿನಲ್ಲಿ ನಡೆದಿರುವ ಅಕ್ರಮಗಳ ಕುರಿತು ಆರು ಪ್ರಮುಖ ಪ್ರಶ್ನೆಗಳನ್ನು ಮುಂದಿಟ್ಟಿರುವ ಅಶೋಕ, ಮಹಾಲೇಖಪಾಲರು ಎತ್ತಿರುವ ಆಕ್ಷೇಪಣೆಗಳಿಗೆ ಸರ್ಕಾರದ ಉತ್ತರವೇನು, ಮೃತರ ಹೆಸರಿನಲ್ಲಿ ಹಣ ವರ್ಗಾವಣೆಗೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳು ಯಾರು, ಖಾತೆ ಸಂಖ್ಯೆಯಿಲ್ಲದೆ ವರ್ಗಾವಣೆಯಾದ ಹಣ ಯಾರಿಗೆ ಸೇರಿದೆ ಮತ್ತು ಫಲಾನುಭವಿಗಳ ಬ್ಯಾಂಕ್ ಖಾತೆ ಜೋಡಣೆಯಲ್ಲಿನ ಲೋಪಕ್ಕೆ ಹೊಣೆಗಾರರು ಯಾರು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣವನ್ನು ಅರ್ಹ ಮಹಿಳೆಯರ ಖಾತೆಗಳಿಗೆ ತಕ್ಷಣ ಜಮೆ ಮಾಡಬೇಕು. ಮಹಾಲೇಖಪಾಲರು ಎತ್ತಿರುವ ₹225 ಕೋಟಿಗೂ ಅಧಿಕ ಅಕ್ರಮಗಳು ಹಾಗೂ ಮೃತರ ಖಾತೆಗಳಿಗೆ ವರ್ಗಾವಣೆಯಾಗಿರುವ ಹಣದ ಕುರಿತು ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ನಡೆದಿರುವ ಅಕ್ರಮಗಳಿಗೆ ಕಾರಣರಾದ ಅಧಿಕಾರಿಗಳು ಮತ್ತು ಮಧ್ಯವರ್ತಿಗಳನ್ನು ಪತ್ತೆಹಚ್ಚಿ, ತಪ್ಪಿತಸ್ಥರ ವಿರುದ್ಧ ಕಠಿಣ ಅಪರಾಧ ಕ್ರಮ ಕೈಗೊಂಡು ಹಣ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಮಹಿಳೆಯರ ಹಕ್ಕು ಎಂದು ಬಿಂಬಿಸಿ ಮತ ಕೇಳಿದ್ದ ಕಾಂಗ್ರೆಸ್, ಈಗ ಮಹಿಳೆಯರ ಹಣದ ಪ್ರಶ್ನೆ ಬಂದಾಗ ಬೇರೆ ನಿಲುವು ತಳೆಯುತ್ತಿದೆ ಎಂದು ಟೀಕಿಸಿದ್ದಾರೆ. ಗೃಹಲಕ್ಷ್ಮಿ ಸಮಾವೇಶಗಳ ಮೂಲಕ ರಾಜಕೀಯ ಪ್ರಚಾರ ನಡೆಸುವ ಬದಲು ಮೊದಲು ಬಾಕಿ ಹಣದ ಲೆಕ್ಕ ನೀಡಿ, ಮಹಿಳೆಯರ ಖಾತೆಗಳಿಗೆ ಹಣ ಜಮೆ ಮಾಡಬೇಕು ಎಂದು ಆರ್. ಅಶೋಕ ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande