
ಬೆಂಗಳೂರು, 07 ನವೆಂಬರ್ (ಹಿ.ಸ.):
ಭಾರತದ ಹೆಮ್ಮೆಯ ವಿಜ್ಞಾನಿ, ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್ ಸಿ.ವಿ. ರಾಮನ್ ಅವರ ಜನ್ಮದಿನದ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕೇಂದ್ರ ಸಚಿವರು ಹಾಗೂ ರಾಜಕೀಯ ಗಣ್ಯರು ಗೌರವಪೂರ್ವಕ ನಮನ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡು, ಬೆಳಕಿನ ರಹಸ್ಯವನ್ನು ಜಗತ್ತಿಗೆ ಪರಿಚಯಿಸಿ ಭಾರತೀಯ ವಿಜ್ಞಾನದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಬೆಳಗಿಸಿದ ಮಹಾನ್ ವಿಜ್ಞಾನಿ ಸರ್ ಸಿ.ವಿ. ರಾಮನ್ ಅವರ ವೈಜ್ಞಾನಿಕ ಸಾಧನೆ ಸ್ಮರಣೀಯ ಎಂದು ಹೇಳಿದ್ದಾರೆ.
1954ರಲ್ಲಿ ಭಾರತ ರತ್ನ ಗೌರವಕ್ಕೆ ಪಾತ್ರರಾದ ಅವರ ಸಂಶೋಧನಾ ಮನೋಭಾವ ಮತ್ತು ವೈಜ್ಞಾನಿಕ ಸಾಧನೆಗಳು ಮುಂದಿನ ತಲೆಮಾರಿನ ಯುವ ವಿಜ್ಞಾನಿಗಳಿಗೆ ಸ್ಫೂರ್ತಿಯಾಗಲಿ. ಅವರ ಜೀವನ ಯುವಪೀಳಿಗೆ ಜ್ಞಾನ, ಕುತೂಹಲ ಮತ್ತು ಸಂಶೋಧನೆಯ ಹಾದಿಯಲ್ಲಿ ಮುನ್ನಡೆಯಲು ಪ್ರೇರಣೆ ನೀಡಲಿ ಎಂದು ಹಾರೈಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, ಭಾರತದ ಹೆಮ್ಮೆಯ ವಿಜ್ಞಾನಿ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್ ಸಿ.ವಿ. ರಾಮನ್ ಅವರ ಜನ್ಮದಿನದಂದು ಗೌರವಪೂರ್ವಕ ನಮನ ಸಲ್ಲಿಸಿದ್ದಾರೆ. ಬೆಳಕಿನ ಚದುರುವಿಕೆಗೆ ಸಂಬಂಧಿಸಿದ ಅವರ ಮಹತ್ವದ ಸಂಶೋಧನೆಯಾದ 'ರಾಮನ್ ಪರಿಣಾಮ' ವಿಜ್ಞಾನ ಲೋಕದಲ್ಲಿ ಐತಿಹಾಸಿಕ ಮೈಲಿಗಲ್ಲಾಗಿದೆ. ಭಾರತೀಯ ವಿಜ್ಞಾನ ಕ್ಷೇತ್ರದ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದ ಅವರ ಕೊಡುಗೆ ಸದಾ ಸ್ಮರಣೀಯ ಎಂದು ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಭಾರತೀಯ ವಿಜ್ಞಾನ ಕ್ಷೇತ್ರವನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದ ಮಹಾನ್ ವಿಜ್ಞಾನಿ, ನೊಬೆಲ್ ಪುರಸ್ಕೃತ ಭೌತ ವಿಜ್ಞಾನಿ ಹಾಗೂ ಭಾರತ ರತ್ನ ಸರ್ ಸಿ.ವಿ. ರಾಮನ್ ಅವರಿಗೆ ಜನ್ಮದಿನದ ಗೌರವ ನಮನ ಸಲ್ಲಿಸಿದ್ದಾರೆ. ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಅವರು ತೋರಿದ ಹಾದಿ ಹಾಗೂ ನೀಡಿದ ಕೊಡುಗೆ ವಿಕಸಿತ ಭಾರತದತ್ತ ದೇಶದ ಪಯಣಕ್ಕೆ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 'ರಾಮನ್ ಪರಿಣಾಮ' ಸಂಶೋಧನೆಯ ಮೂಲಕ ಜಗತ್ತೇ ಬೆರಗಾಗುವಂತೆ ಮಾಡಿದ ಸರ್ ಸಿ.ವಿ. ರಾಮನ್ ಅವರ ವೈಜ್ಞಾನಿಕ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಜನ್ಮದಿನದಂದು ಶತಶತ ಪ್ರಣಾಮಗಳನ್ನು ಸಲ್ಲಿಸಿದ್ದು, ಅವರ ಸಾಧನೆ ಎಲ್ಲರಿಗೂ ಸದಾ ಪ್ರೇರಣೆಯಾಗಿರಲಿದೆ ಎಂದು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.