ಚುನಾವಣೆಯಲ್ಲಿ ಹಿನ್ನಡೆ ಬೆನ್ನಲ್ಲೇ ಇರಾನ್ ಯುದ್ಧದ ಬಗ್ಗೆ ಟ್ರಂಪ್ ಗೆ ಇಕ್ಕಟ್ಟು
ವಾಷಿಂಗ್ಟನ್, 05 ನವೆಂಬರ್ (ಹಿ.ಸ.): ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಭರ್ಜರಿ ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ರಾಜಕೀಯ ಸವಾಲು ಎದುರಾಗಿದೆ. ಇರಾನ್ ವಿರುದ್ಧದ ಯುದ್ಧವೇ ರಿಪಬ್ಲಿಕನ್ ಪಕ್ಷದ ಚುನಾವಣಾ ಹಿನ್ನಡೆಗೆ ಪ್ರಮುಖ ಕಾರಣ ಎಂ
मध्यावधि चुनाव में करारी हार से राष्ट्रपति डोनाल्ड ट्रंप के चेहरे की भाव भंगिमा बदल गई। फोटो -  इंटरनेट मीडिया


ವಾಷಿಂಗ್ಟನ್, 05 ನವೆಂಬರ್ (ಹಿ.ಸ.):

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಭರ್ಜರಿ ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ರಾಜಕೀಯ ಸವಾಲು ಎದುರಾಗಿದೆ. ಇರಾನ್ ವಿರುದ್ಧದ ಯುದ್ಧವೇ ರಿಪಬ್ಲಿಕನ್ ಪಕ್ಷದ ಚುನಾವಣಾ ಹಿನ್ನಡೆಗೆ ಪ್ರಮುಖ ಕಾರಣ ಎಂಬ ಅಭಿಪ್ರಾಯ ಪಕ್ಷದೊಳಗೆ ವ್ಯಕ್ತವಾಗಿದ್ದು, ಯುದ್ಧವನ್ನು ಮುಂದುವರಿಸಬೇಕೇ ಅಥವಾ ಮಾತುಕತೆ ಮೂಲಕ ಅಂತ್ಯಗೊಳಿಸಬೇಕೇ ಎಂಬ ಗೊಂದಲ ಟ್ರಂಪ್ ಅವರನ್ನು ಕಾಡುತ್ತಿದೆ.

ಚುನಾವಣಾ ಸೋಲಿನ ಬಳಿಕ ಇರಾನ್ ವಿಚಾರದಲ್ಲಿ ಟ್ರಂಪ್ ಮುಂದೆ ಮೂರು ಸೀಮಿತ ಆಯ್ಕೆಗಳಿವೆ ಎಂದು ಅಮೆರಿಕದ ರಾಜಕೀಯ ಮತ್ತು ಯುದ್ಧ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಆಕ್ಸಿಯೋಸ್ ಕುತೂಹಲಕಾರಿ ವರದಿ ಪ್ರಕಟಿಸಿದೆ.

ಯುದ್ಧ ಮುಂದುವರಿಸುವುದು ಮೊದಲ ಆಯ್ಕೆ

ಇರಾನ್ ವಿರುದ್ಧ ಮತ್ತೆ ಸೇನಾ ದಾಳಿ ಆರಂಭಿಸುವುದು ಟ್ರಂಪ್ ಮುಂದಿರುವ ಮೊದಲ ಆಯ್ಕೆಯಾಗಿದೆ. ಆದರೆ ಅಮೆರಿಕದ ಜನರು ಮತ್ತೊಂದು ಯುದ್ಧವನ್ನು ಬಯಸುತ್ತಿಲ್ಲ. ಈಗಾಗಲೇ ಸಂಘರ್ಷದಿಂದ ಇಂಧನ ಬೆಲೆಗಳು ಏರಿಕೆಯಾಗಿದ್ದು, ಮತ್ತೆ ದಾಳಿ ನಡೆಸಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ. ಅಲ್ಲದೆ, ಇದರಿಂದ ನಿರೀಕ್ಷಿತ ಸೇನಾ ಫಲಿತಾಂಶ ದೊರೆಯುವ ಭರವಸೆಯೂ ಇಲ್ಲ.

ಮಾತುಕತೆ ಮೂಲಕ ಪರಿಹಾರ

ಇರಾನ್ ಜತೆ ಮಾತುಕತೆ ನಡೆಸಿ ಸಂಘರ್ಷಕ್ಕೆ ಅಂತ್ಯ ಹಾಡುವುದು ಎರಡನೇ ಆಯ್ಕೆಯಾಗಿದೆ. ಆದರೆ ಚುನಾವಣಾ ಹಿನ್ನಡೆಯಿಂದ ರಾಜಕೀಯವಾಗಿ ದುರ್ಬಲರಾಗಿರುವ ಟ್ರಂಪ್ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಇರಾನ್ ಅಧಿಕಾರಿಗಳು ಹಿಂದೇಟು ಹಾಕಬಹುದು. ಅಮೆರಿಕದ ಬೇಡಿಕೆಗಳಿಗೆ ಒಪ್ಪಿಕೊಳ್ಳುವ ಬದಲು ಇರಾನ್ ತನ್ನ ಬೇಡಿಕೆಗಳನ್ನು ಹೆಚ್ಚಿಸಿದರೆ ಟ್ರಂಪ್ಗೆ ರಾಜಿ ಮಾಡಿಕೊಳ್ಳುವುದು ಕಷ್ಟವಾಗಬಹುದು.

ಆರ್ಥಿಕ ನಿರ್ಬಂಧ ಮುಂದುವರಿಸುವುದು

ಈಗಿರುವ ಯಥಾಸ್ಥಿತಿಯನ್ನು ಕಾಯ್ದುಕೊಂಡು ಇರಾನ್ ಮೇಲೆ ನೌಕಾ ದಿಗ್ಬಂಧನ ಹಾಗೂ ಕಠಿಣ ಆರ್ಥಿಕ ನಿರ್ಬಂಧಗಳನ್ನು ಮುಂದುವರಿಸುವುದು ಮೂರನೇ ಆಯ್ಕೆಯಾಗಿದೆ. ಆ ಮೂಲಕ ಇರಾನ್ ಆಡಳಿತದ ಮೇಲೆ ಒತ್ತಡ ಹೆಚ್ಚಿಸಿ, ಒಪ್ಪಂದಕ್ಕೆ ಬರುವಂತೆ ಮಾಡುವುದು ಅಮೆರಿಕದ ಉದ್ದೇಶವಾಗಿದೆ. ಆದರೆ ಈ ತಂತ್ರದಿಂದ ಯಾವುದೇ ಪ್ರಗತಿ ಕಾಣಲು ಹಲವು ತಿಂಗಳುಗಳು ಬೇಕಾಗಬಹುದು.

ಯುದ್ಧದ ಹೊಣೆ ಹೊತ್ತ ಉಪಾಧ್ಯಕ್ಷ ವ್ಯಾನ್ಸ್

ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಹಿನ್ನಡೆಗೆ ಇರಾನ್ ಸಂಘರ್ಷವೇ ನೇರ ಕಾರಣ ಎಂದು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಬುಧವಾರ ಹೇಳಿದ್ದಾರೆ. ಇಸ್ರೇಲ್ ಜತೆಗಿನ ಅಮೆರಿಕದ ಸಂಬಂಧಗಳು ರಿಪಬ್ಲಿಕನ್ ಪಕ್ಷಕ್ಕೆ ದೊಡ್ಡ ರಾಜಕೀಯ ಸಮಸ್ಯೆ ಸೃಷ್ಟಿಸಿವೆ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ವ್ಯಾನ್ಸ್ ಅವರ ವಿಶ್ಲೇಷಣೆಯಲ್ಲಿ ಹಲವು ಅಂಶಗಳು ಸರಿಯಾಗಿವೆ ಎಂದು ಟ್ರಂಪ್ ಒಪ್ಪಿಕೊಂಡಿದ್ದಾರೆ. ಯುದ್ಧದಿಂದ ಇಂಧನ ಬೆಲೆಗಳು ಏರಿಕೆಯಾಗಿವೆ ಎಂಬುದನ್ನೂ ಅವರು ಒಪ್ಪಿದ್ದಾರೆ. ಆದರೆ ಇರಾನ್ ಪರಮಾಣು ಅಸ್ತ್ರ ಹೊಂದುವುದನ್ನು ತಡೆಯಲು ಯುದ್ಧ ಅನಿವಾರ್ಯವಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.

ಯುದ್ಧವನ್ನು ಯಾವಾಗ ಅಂತ್ಯಗೊಳಿಸುತ್ತೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ, ತಾವು ಬಯಸಿದಾಗ ಯುದ್ಧ ನಿಲ್ಲಿಸಬಹುದು. ಆದರೆ ಇರಾನ್ ಪರಮಾಣು ಅಸ್ತ್ರ ಹೊಂದದಂತೆ ನೋಡಿಕೊಳ್ಳಬೇಕು ಎಂದು ಟ್ರಂಪ್ ಉತ್ತರಿಸಿದ್ದಾರೆ.

ನೆತನ್ಯಾಹು ನಿಲುವಿನ ಬಗ್ಗೆ ವ್ಯಾನ್ಸ್ ಅಸಮಾಧಾನ

ಇತ್ತೀಚಿನ ತಿಂಗಳುಗಳಲ್ಲಿ ಉಪಾಧ್ಯಕ್ಷ ವ್ಯಾನ್ಸ್ ಅವರು ಇರಾನ್ ಜತೆ ಒಪ್ಪಂದ ಮಾಡಿಕೊಂಡು ಯುದ್ಧ ಅಂತ್ಯಗೊಳಿಸುವಂತೆ ಟ್ರಂಪ್ ಅವರಿಗೆ ಸಲಹೆ ನೀಡುತ್ತಿದ್ದ ಗುಂಪಿನ ನೇತೃತ್ವ ವಹಿಸಿದ್ದರು ಎಂದು ವರದಿ ತಿಳಿಸಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಇರಾನ್ ನೀತಿಯನ್ನು ವ್ಯಾನ್ಸ್ ಖಾಸಗಿಯಾಗಿ ಟೀಕಿಸಿದ್ದರು ಎನ್ನಲಾಗಿದೆ. ಈ ಯುದ್ಧ ಜನಪ್ರಿಯವಾಗಿಲ್ಲ ಮತ್ತು ಇದರಿಂದ ರಿಪಬ್ಲಿಕನ್ ಪಕ್ಷ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಬಹುದು ಎಂದು ಅವರು ಎಚ್ಚರಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಟ್ರಂಪ್ ಅವರ ಹಿರಿಯ ಅಧಿಕಾರಿಗಳ ಪೈಕಿ ಹಲವರು ವ್ಯಾನ್ಸ್ ಅವರ ಅಭಿಪ್ರಾಯವನ್ನು ಬೆಂಬಲಿಸಿದ್ದರು. ಆದರೆ ಟ್ರಂಪ್ ಮಾತ್ರ ಯುದ್ಧವನ್ನು ಮತ್ತೆ ಆರಂಭಿಸುವ ಒಲವು ಹೊಂದಿದ್ದರು. ಮಧ್ಯಂತರ ಚುನಾವಣೆಗೆ ಮುನ್ನವೇ ಇರಾನ್ ಮೇಲೆ ದಾಳಿ ನಡೆಸುವ ಬಗ್ಗೆಯೂ ಅವರು ಚಿಂತನೆ ನಡೆಸಿದ್ದರು. ಆದರೆ ಬಳಿಕ ಅದನ್ನು ಮುಂದೂಡಿದ್ದರು. ಇತ್ತೀಚೆಗೆ ಇಸ್ರೇಲ್ ಚುನಾವಣೆಯಲ್ಲಿ ನೆತನ್ಯಾಹು ಅವರನ್ನು ಬೆಂಬಲಿಸಿದ್ದು, ತಮ್ಮ ಸಲಹೆಗಾರರ ಅಭಿಪ್ರಾಯಕ್ಕೆ ವಿರುದ್ಧವಾದ ನಿಲುವು ತಳೆದಿದ್ದರು ಎಂದು ವರದಿ ಹೇಳಿದೆ.

ಇರಾನ್ ಮೇಲೆ ದಾಳಿಗೆ ಅಮೆರಿಕ ಸಿದ್ಧತೆ

ಇರಾನ್ನಲ್ಲಿ ದೊಡ್ಡ ಪ್ರಮಾಣದ ಸೇನಾ ಕಾರ್ಯಾಚರಣೆಗಳನ್ನು ಪುನರಾರಂಭಿಸಲು ಅಮೆರಿಕದ ಸೇನೆ ಸಿದ್ಧತೆ ನಡೆಸುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಈ ಉದ್ದೇಶಕ್ಕಾಗಿ ಮಧ್ಯಪ್ರಾಚ್ಯ ಪ್ರದೇಶಕ್ಕೆ ಹೆಚ್ಚಿನ ಸೇನಾ ಸಂಪನ್ಮೂಲಗಳನ್ನು ರವಾನಿಸಲಾಗುತ್ತಿದೆ.

ಇನ್ನೊಂದೆಡೆ, ಯುದ್ಧ ಮತ್ತೆ ಆರಂಭವಾಗುವುದನ್ನು ತಡೆಯಲು ಕತಾರ್ ಮಧ್ಯಸ್ಥಿಕೆದಾರರು ಪ್ರಯತ್ನಿಸುತ್ತಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವೆ ಮುಂದಿನ ದಿನಗಳಲ್ಲಿ ನೇರ ಮಾತುಕತೆ ಪುನರಾರಂಭಿಸಲು ಕರಡು ಒಪ್ಪಂದ ಸಿದ್ಧಪಡಿಸುವ ಪ್ರಯತ್ನವೂ ನಡೆಯುತ್ತಿದೆ ಎಂದು ಪ್ರಾದೇಶಿಕ ಮೂಲಗಳು ತಿಳಿಸಿವೆ.

ಚುನಾವಣೆಯಲ್ಲಿ ಸೋತರೆ ಮುಂದೇನು ಮಾಡುತ್ತೀರಿ ಎಂದು ಮಧ್ಯಸ್ಥಿಕೆದಾರರು ಶ್ವೇತಭವನದ ಅಧಿಕಾರಿಗಳನ್ನು ಕೇಳಿದ್ದರು. ಆದರೆ ಚುನಾವಣಾ ಫಲಿತಾಂಶದ ನಂತರದ ಪರಿಸ್ಥಿತಿ ಹೇಗಿರಲಿದೆ ಎಂಬ ಬಗ್ಗೆ ಟ್ರಂಪ್ ಅವರ ಸಲಹೆಗಾರರಿಗೂ ಸ್ಪಷ್ಟತೆ ಇರಲಿಲ್ಲ ಎಂದು ವರದಿ ಉಲ್ಲೇಖಿಸಿದೆ.

ಚುನಾವಣಾ ಫಲಿತಾಂಶವನ್ನು ಸಂಭ್ರಮಿಸಿದ ಇರಾನ್

ಅಮೆರಿಕದ ಚುನಾವಣಾ ಫಲಿತಾಂಶವನ್ನು ಇರಾನ್ ಅಧಿಕಾರಿಗಳು ತಮ್ಮ ರಾಜಕೀಯ ಗೆಲುವು ಎಂದು ಬಣ್ಣಿಸಿದ್ದಾರೆ. ಇರಾನ್ನ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಮೊಹ್ಸೆನ್ ರೆಜೈ, ಯುದ್ಧಭೂಮಿ ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕಕ್ಕೆ ವ್ಯೂಹಾತ್ಮಕ ಸೋಲುಂಟು ಮಾಡಿದ್ದೇವೆ. ವಾಷಿಂಗ್ಟನ್ನಲ್ಲಿಯೂ ರಾಜಕೀಯ ಸೋಲು ಎದುರಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಆದರೆ ಇರಾನ್ ತನ್ನ ರಾಜಕೀಯ ದೌರ್ಬಲ್ಯವನ್ನು ಅಮೆರಿಕದ ಸೇನಾ ದೌರ್ಬಲ್ಯವೆಂದು ತಪ್ಪಾಗಿ ಅರ್ಥೈಸಬಾರದು ಎಂದು ಅಂತಾರಾಷ್ಟ್ರೀಯ ಬಿಕ್ಕಟ್ಟುಗಳ ಅಧ್ಯಯನ ಸಮೂಹದ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಉಪ ಕಾರ್ಯಕ್ರಮ ನಿರ್ದೇಶಕ ಅಲಿ ವೇಝ್ ಎಚ್ಚರಿಸಿದ್ದಾರೆ. ಅಮೆರಿಕ ಒಪ್ಪಂದಕ್ಕೆ ಸಿದ್ಧವಿರುವಾಗ ಇರಾನ್ ಆ ಅವಕಾಶ ಬಳಸಿಕೊಳ್ಳುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಡೆಮಾಕ್ರಟಿಕ್ ಪಕ್ಷಕ್ಕೆ ಸಂಸತ್ತಿನಲ್ಲಿ ಮುನ್ನಡೆ

ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಭಾರಿ ಮುನ್ನಡೆ ಸಾಧಿಸಿದ್ದು, ಮುಂದಿನ ವರ್ಷದಿಂದ ಪ್ರತಿನಿಧಿಗಳ ಸಭೆ ಮತ್ತು ಸೆನೆಟ್ ಎರಡರ ಮೇಲೂ ಹಿಡಿತ ಸಾಧಿಸುವ ಸಾಧ್ಯತೆ ಇದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.

ಪ್ರತಿನಿಧಿಗಳ ಸಭೆಯಲ್ಲಿ ಡೆಮಾಕ್ರಟಿಕ್ ಪಕ್ಷ 251ರಿಂದ 268 ಸ್ಥಾನಗಳನ್ನು ಹೊಂದುವ ಅಂದಾಜಿದೆ. ಸೆನೆಟ್ನಲ್ಲಿ ಕನಿಷ್ಠ 54 ಸ್ಥಾನಗಳನ್ನು ಗಳಿಸಿದೆ ಎಂದು ವರದಿ ತಿಳಿಸಿದೆ. ಟೆಕ್ಸಾಸ್ ಮತ್ತು ಕಾನ್ಸಾಸ್ ರಾಜ್ಯಗಳಲ್ಲಿ ಹಲವು ದಶಕಗಳ ಬಳಿಕ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳು ಸೆನೆಟ್ಗೆ ಆಯ್ಕೆಯಾಗಿದ್ದಾರೆ. ಓಹಿಯೊ, ಅಯೋವಾ, ಉತ್ತರ ಕೆರೊಲಿನಾ, ದಕ್ಷಿಣ ಕೆರೊಲಿನಾ ಮತ್ತು ಮೈನೆ ರಾಜ್ಯಗಳಲ್ಲಿಯೂ ರಿಪಬ್ಲಿಕನ್ ಪಕ್ಷದ ಸ್ಥಾನಗಳನ್ನು ಡೆಮಾಕ್ರಟಿಕ್ ಪಕ್ಷ ತನ್ನದಾಗಿಸಿಕೊಂಡಿದೆ.

ಮಿಸಿಸಿಪ್ಪಿ ಮತ್ತು ಅಲಾಸ್ಕಾದಲ್ಲಿ ಮತ ಎಣಿಕೆ ಮುಂದುವರಿದಿದ್ದು, ಅಲ್ಲಿ ಸ್ಪರ್ಧೆ ತೀವ್ರವಾಗಿದೆ. ಈ ನಡುವೆ ಪ್ರತಿನಿಧಿಗಳ ಸಭೆಯ ಸ್ಪೀಕರ್ ಮೈಕ್ ಜಾನ್ಸನ್ ಮತ್ತೊಂದು ಅವಧಿಗೆ ಪಕ್ಷದ ನಾಯಕತ್ವ ವಹಿಸಿಕೊಳ್ಳುವ ಆಸಕ್ತಿ ಇಲ್ಲ ಎಂದು ತಮ್ಮ ಸಿಬ್ಬಂದಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರನ್ನು ಹುದ್ದೆಯಲ್ಲಿ ಮುಂದುವರಿಸಬೇಕೇ ಎಂಬ ಬಗ್ಗೆಯೂ ಟ್ರಂಪ್ ತಮ್ಮ ಸಲಹೆಗಾರರೊಂದಿಗೆ ಚರ್ಚಿಸುತ್ತಿದ್ದಾರೆ ಎಂದು ವರದಿಯಾಗಿದೆ. 2028ರ ಅಧ್ಯಕ್ಷೀಯ ಚುನಾವಣೆಗೆ ಮುನ್ನ ರಿಪಬ್ಲಿಕನ್ ಪಕ್ಷದೊಳಗೆ ಇರಾನ್ ಯುದ್ಧದ ವಿಚಾರವಾಗಿ ಭಿನ್ನಾಭಿಪ್ರಾಯಗಳು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.

ಟೆಕ್ಸಾಸ್ನಲ್ಲಿ ರಿಪಬ್ಲಿಕನ್ಗೆ ಒಂದು ಗೆಲುವು

ಟೆಕ್ಸಾಸ್ನ 32ನೇ ಚುನಾವಣಾ ಕ್ಷೇತ್ರದಲ್ಲಿ ರಿಪಬ್ಲಿಕನ್ ಪಕ್ಷದ ಜೆಸ್ ಯಾರ್ಬರೋ ಗೆಲುವು ಸಾಧಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಡಾನ್ ಬ್ಯಾರಿಯೋಸ್ ಅವರನ್ನು ಸೋಲಿಸಿದ್ದಾರೆ. ರಾಜ್ಯದಲ್ಲಿ ಕ್ಷೇತ್ರ ಮರುವಿಂಗಡಣೆ ಬಳಿಕ ರಿಪಬ್ಲಿಕನ್ ಪಕ್ಷಕ್ಕೆ ದೊರೆತ ಏಕೈಕ ಗೆಲುವು ಇದಾಗಿದೆ ಎಂದು ವರದಿ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande