
ಬೆಂಗಳೂರು, 05 ನವೆಂಬರ್ (ಹಿ.ಸ.):
ಒಂದು ಸರ್ಕಾರ ಹೇಗಿರಬಾರದು ಎನ್ನುವುದಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರವೇ ಉದಾಹರಣೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಟೀಕಿಸಿದ್ದಾರೆ.
ಈ ಹಿಂದೆ ಹಾಲಿನ ದರ ಹೆಚ್ಚಳವಾದಾಗ ಗರಿಷ್ಠ 2ರಿಂದ 4 ರೂಪಾಯಿಗಳವರೆಗೆ ಏರಿಕೆ ಮಾಡಲಾಗುತ್ತಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಏಕಾಏಕಿ ಕನಿಷ್ಠ 8 ರೂಪಾಯಿ ಹೆಚ್ಚಳ ಮಾಡಿದೆ. ಇತಿಹಾಸದಲ್ಲಿ ಹಿಂದೆಂದೂ ಯಾವುದೇ ಸರ್ಕಾರ ಇಷ್ಟೊಂದು ಪ್ರಮಾಣದಲ್ಲಿ ಹಾಲಿನ ದರ ಹೆಚ್ಚಿಸಿದ ಉದಾಹರಣೆ ಇಲ್ಲ ಎಂದು ಅವರು ಆರೋಪಿಸಿದ್ದಾರೆ.
ಮನೆಗೆ ಹಾಲು ತರುವುದು ಕೂಡ ಹೊರೆಯಾಗುತ್ತಿದೆ ಎಂದು ಜನರು ಯೋಚಿಸುವಷ್ಟರಲ್ಲೇ ಸರ್ಕಾರ ಬಸ್ ಪ್ರಯಾಣ ದರವನ್ನೂ ವಿಪರೀತವಾಗಿ ಹೆಚ್ಚಿಸಿದೆ. ಇದು ಸರ್ಕಾರವೇ ಮಧ್ಯಮ ವರ್ಗದ ಜನರನ್ನು ಸುಲಿಗೆ ಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಹುಶಃ ರಾಜ್ಯದ ಜನರು ಬೀದಿಗಿಳಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಛೀಮಾರಿ ಹಾಕುವುದನ್ನೇ ಕಾಂಗ್ರೆಸ್ ಸರ್ಕಾರ ಕಾಯುತ್ತಿರುವಂತಿದೆ. ಕಾಂಗ್ರೆಸ್ ಸರ್ಕಾರ ಜನವಿರೋಧಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಿ.ಟಿ.ರವಿ ತಮ್ಮ ಎಕ್ಸ್ ಖಾತೆಯಲ್ಲಿ ಟೀಕಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.