ರಾಜ್ಯಾದ್ಯಂತ ಸೈಕಲ್ ಸವಾರಿ ಮೂಲಕ ಕಬ್ಬು ಬೆಳೆಗಾರರ ಹೋರಾಟಕ್ಕೆ ಯುವಕನ ಬೆಂಬಲ
ಕಲಬುರಗಿಯಲ್ಲಿ ಕಬ್ಬಿಗೆ ಟನ್ಗೆ 5,500 ರೂ. ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರೈತರ ಹೋರಾಟ ಐದನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಗೆ ಬೆಂಬಲ ಸೂಚಿಸಲು ಬೆಳಗಾವಿಯಿಂದ 370 ಕಿ.ಮೀ. ಸೈಕಲ್ ಸವಾರಿ ಮೂಲಕ ಬಂದ ಯುವಕ ಭೀಮ ಗಮನ ಸೆಳೆದಿದ್ದಾರೆ.
kalaburagi-sugarcane-farmers-protest-youth-cycles-370-km-from-belagavi


ಕಲಬುರಗಿ, 04 ನವೆಂಬರ್ (ಹಿ.ಸ.):

ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಕಲಬುರಗಿ ನಗರದ ರಾಮಮಂದಿರ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ.

ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟಕ್ಕೆ ವಿವಿಧೆಡೆಯಿಂದ ಬೆಂಬಲ ವ್ಯಕ್ತವಾಗುತ್ತಿದ್ದು, ಬೆಳಗಾವಿ ಜಿಲ್ಲೆಯಿಂದ ಯುವಕನೊಬ್ಬ ಸೈಕಲ್ ಸವಾರಿ ಮೂಲಕ ಹಲವು ಜಿಲ್ಲೆಗಳಿಗೆ ಜಾಗೃತಿ ಮೂಡಿಸಿ ಕಲಬುರಗಿಗೆ ಆಗಮಿಸಿ ರೈತರ ಹೋರಾಟಕ್ಕೆ ಕೈಜೋಡಿಸಿರುವುದು ಗಮನ ಸೆಳೆದಿದೆ.

ಬೆಳಗಾವಿ ಜಿಲ್ಲೆಯಿಂದ ಸುಮಾರು 370 ಕಿಲೋಮೀಟರ್ ದೂರವನ್ನು ಸೈಕಲ್ನಲ್ಲಿಯೇ ಕ್ರಮಿಸಿ ಕಲಬುರಗಿಗೆ ಬಂದಿರುವ ಭೀಮ ಎಂಬ ಯುವಕ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅವರು, ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳಿಗೆ ಯುವ ಸಮುದಾಯವೂ ಧ್ವನಿಯಾಗಬೇಕು ಎಂದು ಮನವಿ ಮಾಡಿದ್ದಾರೆ.

ಕಬ್ಬಿಗೆ ಪ್ರತಿ ಟನ್ಗೆ 5,500 ರೂಪಾಯಿ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿರುವ ರೈತರು, ತಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸುವ ಎಚ್ಚರಿಕೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು–ಕಲಬುರಗಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ.

ರೈತರ ಹೋರಾಟಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡಬೇಕು. ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದು ಸೈಕಲ್ ಮೂಲಕ ಆಗಮಿಸಿದ ಭೀಮ ಮನವಿ ಮಾಡಿದ್ದಾರೆ.

ಐದನೇ ದಿನವೂ ಮುಂದುವರಿದಿರುವ ಪ್ರತಿಭಟನೆಯಿಂದಾಗಿ ಕಲಬುರಗಿಯಲ್ಲಿ ರೈತರ ಹೋರಾಟದ ಕಾವು ಹೆಚ್ಚಾಗಿದ್ದು, ಕಬ್ಬಿಗೆ 5,500 ರೂಪಾಯಿ ಬೆಂಬಲ ಬೆಲೆ ನೀಡುವಂತೆ ರೈತರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande