
ಗದಗ, 04 ನವೆಂಬರ್ (ಹಿ.ಸ.) ರೈತರು, ಸಾರ್ವಜನಿಕರು ಹಾಗೂ ಬೆಳೆಗಳ ಸುರಕ್ಷತೆಯ ದೃಷ್ಟಿಯಿಂದ ಸಂಭವನೀಯ ವಿದ್ಯುತ್ ಅವಘಡಗಳನ್ನು ತಡೆಗಟ್ಟಲು ಹೆಸ್ಕಾಂ ವತಿಯಿಂದ ಗದಗ ಜಿಲ್ಲೆಯಾದ್ಯಂತ ವಿದ್ಯುತ್ ಜಾಲದ ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳನ್ನು ಚುರುಕುಗೊಳಿಸಲಾಗಿದೆ.
ಜಿಲ್ಲೆಯ ವಿವಿಧೆಡೆ ವಾಲಿರುವ ವಿದ್ಯುತ್ ಕಂಬಗಳನ್ನು ನೇರಗೊಳಿಸುವುದು, ಮುರಿದ ಕಂಬಗಳ ದುರಸ್ತಿ, ಅರ್ಥಿಂಗ್ ವ್ಯವಸ್ಥೆ ಸುಧಾರಣೆ, ವಿದ್ಯುತ್ ತಂತಿಗಳನ್ನು ಬಿಗಿಗೊಳಿಸುವುದು ಹಾಗೂ ವಿದ್ಯುತ್ ಮಾರ್ಗಗಳಿಗೆ ಅಡ್ಡಿಯಾಗಿರುವ ಗಿಡಗಂಟಿ ಮತ್ತು ಮರದ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ.
ಲಕ್ಷ್ಮೇಶ್ವರದ ಕಾಳಮ್ಮ ಟಿಸಿ ಬಳಿ ಅರ್ಥಿಂಗ್ ವ್ಯವಸ್ಥೆ ದುರಸ್ತಿ ಹಾಗೂ ಬಾಗಿದ ವಿದ್ಯುತ್ ಕಂಬವನ್ನು ನೇರಗೊಳಿಸಲಾಗಿದೆ. ಪಟ್ಟಣದ ಫೀಡರ್ ನಿರ್ವಹಣೆ, ಎಫ್-3 ಮಾರ್ಗದಲ್ಲಿ ಗಿಡಗಂಟಿಗಳ ತೆರವು, ಕಲ್ಲೂರು ಗ್ರಾಮದಲ್ಲಿ ಎಲ್ಟಿ ವಿದ್ಯುತ್ ತಂತಿಗಳ ದುರಸ್ತಿ ಹಾಗೂ ಎಫ್-9 ಬಸಾಪುರ ಎನ್ಜೆವೈ ಮಾರ್ಗದ ಮುಳಗುಂದ ಗ್ರಾಮದಲ್ಲಿ ವಿದ್ಯುತ್ ಮಾರ್ಗಕ್ಕೆ ಅಡ್ಡಿಯಾಗಿದ್ದ ಗಿಡಗಂಟಿಗಳನ್ನು ತೆರವುಗೊಳಿಸಲಾಗಿದೆ.
ನರಗುಂದ ಪಟ್ಟಣದ ಹುಬ್ಬಳ್ಳಿ–ಸೊಲ್ಲಾಪುರ ರಸ್ತೆಯ ಸಮೀಪ ವಾಲಿದ್ದ ವಿದ್ಯುತ್ ಕಂಬಗಳನ್ನು ನೇರಗೊಳಿಸಲಾಗಿದೆ. ಹೊಳೆಆಲೂರು ವಿಭಾಗದ ಗಾಡಗೊಳಿ ಎನ್ಜೆವೈ ವ್ಯಾಪ್ತಿಯಲ್ಲಿಯೂ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯ ನಡೆಸಲಾಗಿದೆ. ಗದಗ ಗ್ರಾಮೀಣ ಉಪವಿಭಾಗದ ಹೊಂಬಾಳ ಫೀಡರ್ನ ಎಫ್-3 ವ್ಯಾಪ್ತಿಯ ಬೆಳಹೋಡ ಗ್ರಾಮದಲ್ಲಿ ಎಲ್ಟಿ ವಿದ್ಯುತ್ ಮಾರ್ಗದ ತಂತಿಗಳನ್ನು ಬಿಗಿಗೊಳಿಸಲಾಗಿದೆ.
ಇನ್ನು ಗದಗ ವಿಭಾಗದ ರಾಮಗೇರಿ ಎನ್ಜೆವೈ ಮಾರ್ಗದಲ್ಲಿ ಸುಮಾರು 15 ಕಿ.ಮೀ. ಉದ್ದದ ವಿದ್ಯುತ್ ಮಾರ್ಗದ ಸುತ್ತಮುತ್ತ ಬೆಳೆದಿದ್ದ ಮರದ ಕೊಂಬೆಗಳನ್ನು ತೆರವುಗೊಳಿಸಲಾಗಿದೆ. ಜಿಲ್ಲೆಯ ಇತರೆ ಭಾಗಗಳಲ್ಲಿಯೂ ವಿದ್ಯುತ್ ನಿರ್ವಹಣಾ ಕಾರ್ಯಗಳು ಪ್ರಗತಿಯಲ್ಲಿವೆ.
ವಿಶೇಷವಾಗಿ ರೈತರ ಜಮೀನುಗಳಲ್ಲಿ ನೆಲಕ್ಕೆ ವಾಲಿರುವ ಹಾಗೂ ಮುರಿದ ವಿದ್ಯುತ್ ಕಂಬಗಳನ್ನು ದುರಸ್ತಿ ಅಥವಾ ಬದಲಾವಣೆ ಮಾಡುವುದು, ಅರ್ಥಿಂಗ್ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ವಿದ್ಯುತ್ ತಂತಿಗಳನ್ನು ಸರಿಪಡಿಸುವ ಮೂಲಕ ಬೆಳೆಗಳಿಗೆ ಬೆಂಕಿ ತಗಲುವಂತಹ ಸಂಭವನೀಯ ಅವಘಡಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.
ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ನಿರ್ದೇಶನದಂತೆ ಗದಗ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್, ರೋಣ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸೇರಿದಂತೆ ಜಿಲ್ಲೆಯ ವಿವಿಧ ವಿಭಾಗ ಹಾಗೂ ಉಪವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಸುರಕ್ಷಿತ ಹಾಗೂ ನಿರಂತರ ವಿದ್ಯುತ್ ಪೂರೈಕೆಯೊಂದಿಗೆ ಸಾರ್ವಜನಿಕರ ಜೀವ, ಆಸ್ತಿಪಾಸ್ತಿ ಮತ್ತು ರೈತರ ಬೆಳೆಗಳ ರಕ್ಷಣೆಗೆ ಹೆಸ್ಕಾಂ ವಿಶೇಷ ಆದ್ಯತೆ ನೀಡಿದೆ. ವಿದ್ಯುತ್ ಸುರಕ್ಷತೆಯೇ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ ಎಂದು ಗದಗ ವೃತ್ತದ ಅಧೀಕ್ಷಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP