
ಬೆಂಗಳೂರು, 04 ನವೆಂಬರ್ (ಹಿ.ಸ.):
ರಾಜ್ಯದ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅವುಗಳ ಅಭಿವೃದ್ಧಿಗೆ ನೆರವಾಗಬೇಕು. ಆರಂಭಿಕ ಹಂತದಲ್ಲಿ 1,000 ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳೊಂದಿಗೆ ಜೋಡಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ (ಸಿಎಸ್ಆರ್) ಪ್ರತಿನಿಧಿಗಳ ಸಭೆಯಲ್ಲಿ 'ನಮ್ಮ ಶಾಲೆ ನಮ್ಮ ಜವಾಬ್ದಾರಿ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಖಾಸಗಿ ಶಾಲೆಗಳ ಮಕ್ಕಳಿಗೆ ದೊರೆಯುವಂತಹ ಗುಣಮಟ್ಟದ ಶಿಕ್ಷಣ ಒದಗಿಸಬೇಕು. ಈ ಮೂಲಕ ಗ್ರಾಮೀಣ ಮಕ್ಕಳ ಭವಿಷ್ಯ ರೂಪಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳು ಸಹಕರಿಸಬೇಕು. ಒಟ್ಟಾರೆ 2,000 ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳೊಂದಿಗೆ ಜೋಡಿಸುವ ಚಿಂತನೆಯಿದೆ. ರಾಜ್ಯದ 6,000 ಪಂಚಾಯಿತಿಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಮೊದಲ ಹಂತದಲ್ಲಿ 1,000 ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಮುಂದಿನ ನಾಲ್ಕೈದು ವರ್ಷಗಳಲ್ಲಿ ಈ ಪ್ರಯತ್ನದ ಉತ್ತಮ ಫಲಿತಾಂಶ ದೊರೆಯುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಖಾಸಗಿ ಶಾಲೆಗಳು ಯಾವ ಸರ್ಕಾರಿ ಶಾಲೆಯನ್ನು ದತ್ತು ಪಡೆಯಬೇಕು ಎಂಬುದನ್ನು ಸರ್ಕಾರ ನಿರ್ಧರಿಸುವುದಿಲ್ಲ. ತಮ್ಮ ಅನುಕೂಲ ಮತ್ತು ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. 5ರಿಂದ 10 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಸಾಧ್ಯವಾಗದಿದ್ದರೂ ಪರವಾಗಿಲ್ಲ. ತಮ್ಮ ಶಾಲೆಗಳಲ್ಲಿರುವ ನುರಿತ ಶಿಕ್ಷಕರನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಬಹುದು. 10 ಶಿಕ್ಷಕರನ್ನು ನಿಯೋಜಿಸಿ ಅವರ ವೇತನವನ್ನು ಖಾಸಗಿ ಸಂಸ್ಥೆಗಳೇ ಭರಿಸಬಹುದು. ಶಾಲಾ ಬಸ್ಗಳು, ಪ್ರಯೋಗಾಲಯದ ಉಪಕರಣಗಳು ಮತ್ತು ಗಣಕಯಂತ್ರಗಳನ್ನು ಒದಗಿಸುವ ಮೂಲಕವೂ ನೆರವಾಗಬಹುದು. ಇದೊಂದು ರೀತಿಯ ಜ್ಞಾನ ವಿನಿಮಯ ಪ್ರಕ್ರಿಯೆಯಾಗಿದೆ ಎಂದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಿಎಸ್ಆರ್ ನಿಧಿ ಬಳಕೆ
ರಾಜ್ಯದಲ್ಲಿ ವಾರ್ಷಿಕ ಸುಮಾರು 8,800 ಕೋಟಿ ರೂ. ಸಿಎಸ್ಆರ್ ನಿಧಿ ಲಭ್ಯವಿದೆ. ರಾಜ್ಯದ ಕಂಪನಿಗಳ ಆಡಳಿತ ಮಂಡಳಿಗಳೊಂದಿಗೆ ಚರ್ಚಿಸಿ, ಈ ನಿಧಿಯನ್ನು ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗೆ ಬಳಸುವುದನ್ನು ಮೊದಲ ಆದ್ಯತೆಯನ್ನಾಗಿ ಮಾಡಬೇಕೆಂದು ಮನವಿ ಮಾಡಲಾಗಿದೆ. ಕಂಪನಿಗಳು ಈಗಾಗಲೇ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿವೆ. ಇದೀಗ ಖಾಸಗಿ ಶಾಲೆಗಳ ಸರದಿ ಎಂದು ಹೇಳಿದರು.
ಸಿಎಸ್ಆರ್ ನಿಧಿ ಬಳಕೆ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಚರ್ಚಿಸಲಾಗಿದೆ. ಕೆಲವು ಕಂಪನಿಗಳು ಮುಂಬೈನಲ್ಲಿ ಕಚೇರಿ ಹೊಂದಿದ್ದು, ಕರ್ನಾಟಕದಲ್ಲಿ ಕಂಪನಿಗಳನ್ನು ನೋಂದಾಯಿಸಿ ಇಲ್ಲಿ ಗಳಿಸಿದ ಹಣವನ್ನು ಬೇರೆಡೆ ವಿನಿಯೋಗಿಸುತ್ತಿವೆ. ಹೀಗೆ ಹಣವನ್ನು ಹೊರಗೆ ವರ್ಗಾಯಿಸುವ ಮತ್ತು ಶೇ.50ರಷ್ಟು ಹಣವನ್ನು ವಾಪಸ್ ಪಡೆಯುವ ಪ್ರಕ್ರಿಯೆಗೆ ಕಡಿವಾಣ ಹಾಕುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಶಾಲೆಗಳಿಗೆ ಖಾಸಗಿ ಸಂಸ್ಥೆಗಳ ಹೆಸರಿಡಲು ಅವಕಾಶ
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 30 ಸರ್ಕಾರಿ ಶಾಲೆಗಳ ಅಭಿವೃದ್ಧಿ ಕಾರ್ಯಗಳು ಕಂಪನಿಗಳ ಸಿಎಸ್ಆರ್ ನಿಧಿಯಡಿ ಆರಂಭವಾಗಿವೆ. ಈ ಪೈಕಿ ಶೇ.10ರಷ್ಟು ಶಾಲೆಗಳ ಕಾಮಗಾರಿ ಪೂರ್ಣಗೊಂಡಿದ್ದು, ಎಂಟು ಶಾಲೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. 12 ಶಾಲೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ರಾಮನಗರ ಜಿಲ್ಲೆಯಲ್ಲಿ ಟೊಯೊಟಾ ಕಂಪನಿ 23 ಶಾಲೆಗಳ ನಿರ್ಮಾಣಕ್ಕೆ ನೆರವು ನೀಡುತ್ತಿದ್ದು, ಪ್ರತಿ ಶಾಲೆಗೆ 10ರಿಂದ 15 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಸರ್ಕಾರವೇ ಯೋಜನೆ ರೂಪಿಸಿಕೊಟ್ಟಿದೆ. ಆದರೆ, ಯಾವುದೇ ಕಾರಣಕ್ಕೂ ಸಿಎಸ್ಆರ್ ಹಣವನ್ನು ಸರ್ಕಾರ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೆರವಾದರೆ ತಮ್ಮ ಸಂಸ್ಥೆಯ ಹೆಸರನ್ನು ಸರ್ಕಾರಿ ಶಾಲೆಯ ಹೆಸರಿನೊಂದಿಗೆ ಸೇರಿಸಿಕೊಳ್ಳಲು ಅವಕಾಶವಿದೆ. ತಮಿಳುನಾಡು ಗಡಿಯಲ್ಲಿರುವ ಹೆಗ್ಗನೂರು ಸರ್ಕಾರಿ ಶಾಲೆಗೆ 'ಹೆಗ್ಗನೂರು ಸರ್ಕಾರಿ ಟೊಯೊಟಾ ಶಾಲೆ' ಎಂದು ಹೆಸರಿಡಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಕೆಪಿಎಸ್ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು
ಸರ್ಕಾರ ಖಾಸಗಿ ಶಾಲೆಗಳ ಬಗ್ಗೆ ಸಕಾರಾತ್ಮಕ ಧೋರಣೆ ಹೊಂದಿದೆ. ಖಾಸಗಿ ಶಾಲೆಗಳನ್ನು ಸ್ಥಾಪಿಸಿ ನಡೆಸುವುದು ಎಷ್ಟು ಕಷ್ಟ ಎಂಬುದು ತಮಗೆ ತಿಳಿದಿದೆ. ಕೆಲವು ಖಾಸಗಿ ಶಾಲೆಗಳು 50 ಸಾವಿರದಿಂದ 2 ಲಕ್ಷ ರೂ.ವರೆಗೆ ಶುಲ್ಕ ಪಡೆಯುತ್ತಿವೆ. ಅಂತಹ ಸಂಸ್ಥೆಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಆರ್ಥಿಕ ಸಾಮರ್ಥ್ಯ ಹೊಂದಿವೆ ಎಂಬುದು ತಮ್ಮ ಗಮನದಲ್ಲಿದೆ ಎಂದರು.
ಖಾಸಗಿ ಶಾಲೆಗಳು ರಾಜ್ಯಕ್ಕೆ ಉತ್ತಮ ಶಿಕ್ಷಣದ ಮೂಲಕ ಕೀರ್ತಿ ತಂದಿವೆ. ಅಲ್ಲಿನ ಗುಣಮಟ್ಟ ಮತ್ತು ಸಾಮರ್ಥ್ಯದ ಸ್ವಲ್ಪ ಭಾಗವನ್ನು ಸರ್ಕಾರಿ ಶಾಲೆಗಳಿಗೂ ವಿಸ್ತರಿಸಿದರೆ, ಶಿಕ್ಷಣಕ್ಕಾಗಿ ಗ್ರಾಮೀಣ ಪ್ರದೇಶದ ಮಕ್ಕಳು ನಗರಗಳಿಗೆ ವಲಸೆ ಬರುವುದನ್ನು ತಡೆಯಬಹುದು. ಪ್ರತಿಯೊಬ್ಬರೂ ತಾವು ಬೆಳೆದ ಊರಿನ ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅವುಗಳ ಪ್ರಗತಿಗೆ ಕೈಜೋಡಿಸುವುದು ಖಾಸಗಿ ಶಿಕ್ಷಣ ಸಂಸ್ಥೆಗಳ ಕರ್ತವ್ಯವಾಗಿದೆ ಎಂದು ಹೇಳಿದರು.
ವಿಶ್ವಬ್ಯಾಂಕ್ನಿಂದ 2,000 ಕೋಟಿ ರೂ. ಸಾಲ ಪಡೆದು ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಸರ್ಕಾರಿ ಶಾಲೆಗಳ ಶಿಕ್ಷಕರಿಗೆ 70 ಸಾವಿರದಿಂದ 1.5 ಲಕ್ಷ ರೂ.ವರೆಗೆ ವೇತನ ನೀಡಲಾಗುತ್ತಿದ್ದರೂ ಶಿಕ್ಷಣದ ಗುಣಮಟ್ಟ ಇನ್ನಷ್ಟು ಸುಧಾರಿಸಬೇಕಿದೆ. ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಅವರ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ಶಿಕ್ಷಣ ಸಂಸ್ಥೆಗಳಲ್ಲಿ ನಾವೆಲ್ಲರೂ ಕೇವಲ ಟ್ರಸ್ಟಿಗಳಿದ್ದಂತೆ. ಇಂದು ನಾವು ಇರುತ್ತೇವೆ, ನಾಳೆ ಬೇರೆಯವರು ಬರುತ್ತಾರೆ. ಆದರೆ, ನಾವು ಮಾಡುವ ಕೆಲಸ ಮಾತ್ರ ಶಾಶ್ವತವಾಗಿ ಉಳಿಯುತ್ತದೆ. ಆದ್ದರಿಂದ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಸರ್ಕಾರಿ ಶಾಲೆಗಳೊಂದಿಗೆ ಪಾಲುದಾರರಾಗಬೇಕು. ಒಂದು ಖಾಸಗಿ ಶಾಲೆಯು ಮೂರು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಅವಕಾಶವಿದೆ. ವಿದೇಶಗಳಲ್ಲಿರುವವರೂ ತಮ್ಮ ಊರಿನ ಶಾಲೆಗಳ ಅಭಿವೃದ್ಧಿಗೆ ಮುಂದೆ ಬರುತ್ತಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗಬೇಕು
ಬೆಂಗಳೂರಿನಲ್ಲಿ ರಸ್ತೆ ವಿಸ್ತರಣೆಯ ಪ್ರಮಾಣ ಶೇ.8ರಷ್ಟಿದ್ದರೆ, ಮೈಸೂರಿನಲ್ಲಿ ಶೇ.18ರಿಂದ 20ರಷ್ಟಿದೆ. ಬೆಂಗಳೂರಿನ ಜನಸಂಖ್ಯೆ 1.40 ಕೋಟಿಯಾಗಿದ್ದು, ಸುಮಾರು 1.20 ಕೋಟಿ ವಾಹನಗಳಿವೆ. ಮಕ್ಕಳು ಶಾಲೆ ತಲುಪಲು ಒಂದು ಗಂಟೆ ಸಮಯ ತೆಗೆದುಕೊಳ್ಳುವ ಪರಿಸ್ಥಿತಿಯಿದೆ. ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಜನರು ಬೆಂಗಳೂರಿಗೆ ಬರುತ್ತಿರುವುದರಿಂದ ನಗರದ ಮೇಲೆ ಒತ್ತಡ ಹೆಚ್ಚಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬ ತಂದೆಯೂ ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಯಾವುದೇ ತ್ಯಾಗಕ್ಕೂ ಸಿದ್ಧನಾಗಿರುತ್ತಾನೆ. ಗ್ರಾಮೀಣ ಪ್ರದೇಶದಲ್ಲಿಯೇ ಗುಣಮಟ್ಟದ ಶಿಕ್ಷಣ ದೊರೆತರೆ ಮಕ್ಕಳು ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬರುವ ಅಗತ್ಯ ಕಡಿಮೆಯಾಗುತ್ತದೆ. ಇದರಿಂದ ನಗರದ ಮೇಲಿನ ಒತ್ತಡವೂ ತಗ್ಗಲಿದೆ ಎಂದರು.
ಶಿಕ್ಷಕ ಸಮಾಜದ ಪ್ರಮುಖ ಸ್ತಂಭ
ಪ್ರಜಾಪ್ರಭುತ್ವಕ್ಕೆ ನಾಲ್ಕು ಸ್ತಂಭಗಳಿರುವಂತೆ ಸಮಾಜಕ್ಕೂ ಕೃಷಿಕ, ಕಾರ್ಮಿಕ, ಸೈನಿಕ ಮತ್ತು ಶಿಕ್ಷಕರು ಪ್ರಮುಖ ಸ್ತಂಭಗಳಾಗಿದ್ದಾರೆ. ಶಿಕ್ಷಕರು ಸಮಾಜದ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ರಾಜ್ಯ ಮತ್ತು ದೇಶದ ಸೇವೆಗೆ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳು ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಇದೇ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹಿಂದೆ ಮಾತನಾಡಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿ, ಹಿಂದೆ ವಿಶ್ವದ ನಾಯಕರು ದೆಹಲಿಗೆ ಬಂದು ದೇಶದ ವಿವಿಧ ಭಾಗಗಳಿಗೆ ತೆರಳುತ್ತಿದ್ದರು. ಆದರೆ ಈಗ ವಿಶ್ವದ ನಾಯಕರು ಬೆಂಗಳೂರಿಗೆ ಬಂದು ನಂತರ ದೆಹಲಿಗೆ ತೆರಳುವ ಕಾಲ ಆರಂಭವಾಗಿದೆ ಎಂದು ಹೇಳಿದ್ದನ್ನು ಉಲ್ಲೇಖಿಸಿದರು. ದೇಶದಲ್ಲಿರುವ 140 ಅಂತಾರಾಷ್ಟ್ರೀಯ ಗುಣಮಟ್ಟದ ಶಾಲೆಗಳ ಪೈಕಿ 38 ಶಾಲೆಗಳು ಕರ್ನಾಟಕದಲ್ಲಿವೆ ಎಂದು ತಿಳಿಸಿದರು.
ಇತ್ತೀಚೆಗೆ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ ಮಕ್ಕಳ ಸಾಂಸ್ಕೃತಿಕ ಪ್ರದರ್ಶನ ಕಂಡು ಸಂತೋಷವಾಯಿತು. ನಮ್ಮ ಮಕ್ಕಳು ಯಾರಿಗೂ ಕಡಿಮೆಯಿಲ್ಲ. ಅವರ ಪ್ರತಿಭೆ, ಸಾಮರ್ಥ್ಯ ಮತ್ತು ಶಿಸ್ತು ಮೆಚ್ಚುವಂತಿದೆ. ಅಂತಹ ಮಕ್ಕಳನ್ನು ದಸರಾ ಕಾರ್ಯಕ್ರಮಕ್ಕೂ ಕರೆದುಕೊಂಡು ಹೋಗಬೇಕು ಎಂದು ಸೂಚಿಸಿದ್ದೇನೆ. ಇಂದಿನ ಮಕ್ಕಳ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಳ್ಳಬೇಕು. ರಾಜ್ಯದ ಅಭಿವೃದ್ಧಿ ಮತ್ತು ಗ್ರಾಮೀಣ ಪ್ರದೇಶಗಳ ಪ್ರಗತಿಯಲ್ಲಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಪಾಲುದಾರರಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.