ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಕುರಿತು ಸ್ಪಷ್ಟನೆ ನೀಡಲು ನಿಖಿಲ್ ಕುಮಾರಸ್ವಾಮಿ ಆಗ್ರಹ
ಹಣಕಾಸಿನ ಕೊರತೆಯಿಂದ ಎರಡು ತಿಂಗಳ ಕಂತು ಬಿಡುಗಡೆ ಮಾಡಿಲ್ಲ ಎಂದು ನ್ಯಾಯಾಲಯಕ್ಕೆ ಸರ್ಕಾರವೇ ಮಾಹಿತಿ ನೀಡಿದೆ: ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ
Nikhil-Kumaraswamy-Questions-Karnataka-Government-Over-Rs-5200-Crore-Gruha-Lakshmi-Funds


ಬೆಂಗಳೂರು, 04 ನವೆಂಬರ್ (ಹಿ.ಸ.):

ರಾಜ್ಯದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ಹಣಕಾಸು ನಿರ್ವಹಣೆ ಹಾಗೂ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡದಿರುವ ವಿಚಾರವಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.

2024-25ನೇ ಹಣಕಾಸು ವರ್ಷದಲ್ಲಿ ಎರಡು ತಿಂಗಳ ಗೃಹಲಕ್ಷ್ಮಿ ಕಂತುಗಳ ಹಣ ಬಿಡುಗಡೆಯಾಗಿಲ್ಲ. ಸುಮಾರು 5,000 ಕೋಟಿ ರೂಪಾಯಿ ಹಣದ ಲೆಕ್ಕದ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2,000 ರೂಪಾಯಿ ನೀಡುವುದಾಗಿ ಭರವಸೆ ನೀಡಿತ್ತು.

ಈ ಯೋಜನೆಯಡಿ ಸುಮಾರು 1.27 ಕೋಟಿ ಮಹಿಳೆಯರು ಫಲಾನುಭವಿಗಳಾಗಿದ್ದಾರೆ. ಆದರೆ, 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಂತುಗಳು ಬಿಡುಗಡೆಯಾಗಿಲ್ಲ.

ಪ್ರತಿ ತಿಂಗಳು ಸುಮಾರು 2,600 ಕೋಟಿ ರೂಪಾಯಿ ಅಗತ್ಯವಿದ್ದು, ಎರಡು ತಿಂಗಳಿಗೆ ಸುಮಾರು 5,200 ಕೋಟಿ ರೂಪಾಯಿ ಆಗುತ್ತದೆ. ಈ ಹಣ ಎಲ್ಲಿಗೆ ಹೋಯಿತು ಎಂಬುದಕ್ಕೆ ಸರ್ಕಾರ ಉತ್ತರ ನೀಡಬೇಕು ಎಂದು ಪ್ರಶ್ನಿಸಿದರು.

ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆ ಉಲ್ಲೇಖ

ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಕೆಲವು ಮಹಿಳಾ ಫಲಾನುಭವಿಗಳು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಹಣಕಾಸು ಇಲಾಖೆಯ ಪರವಾಗಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಆಕ್ಷೇಪಣಾ ಹೇಳಿಕೆಯಲ್ಲಿ ಹಣಕಾಸಿನ ಕೊರತೆಯ ಕಾರಣವನ್ನು ಉಲ್ಲೇಖಿಸಲಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ದಾಖಲೆಯಲ್ಲಿನ ಅಂಶಗಳನ್ನು ಉಲ್ಲೇಖಿಸಿದ ಅವರು, 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಸಲ್ಲಿಸಲಾಗಿತ್ತು.

ಆದರೆ, ಹಣಕಾಸಿನ ಕೊರತೆಯ ಕಾರಣದಿಂದ ಇಲಾಖೆಯು ಅನುದಾನ ಬಿಡುಗಡೆ ಮಾಡಿಲ್ಲ. ಹೀಗಾಗಿ ಈ ಎರಡು ತಿಂಗಳ ಆರ್ಥಿಕ ನೆರವನ್ನು ಫಲಾನುಭವಿಗಳಿಗೆ ಪಾವತಿಸಲು ಸಾಧ್ಯವಾಗಿಲ್ಲ ಎಂದು ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ತಿಳಿಸಲಾಗಿದೆ ಎಂದರು.

ಇದು ಪ್ರತಿಪಕ್ಷ ಮಾಡುತ್ತಿರುವ ಆರೋಪವಲ್ಲ. ಸರ್ಕಾರದ ಹಣಕಾಸು ಇಲಾಖೆಯೇ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಧಿಕೃತ ದಾಖಲೆಯಲ್ಲಿರುವ ವಿಚಾರ. ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂಬುದನ್ನು ಈ ದಾಖಲೆ ತೋರಿಸುತ್ತದೆ.

ಎರಡು ತಿಂಗಳ ಹಣ ಪಾವತಿಯಾಗದಿರುವ ಬಗ್ಗೆ ನಾವು ನಿರಂತರವಾಗಿ ಪ್ರಶ್ನಿಸುತ್ತಿದ್ದೇವೆ. ಆದರೆ, 5,200 ಕೋಟಿ ರೂಪಾಯಿಗಳ ಪೈಕಿ ಹಣದ ಬಳಕೆ ಮತ್ತು ಬಾಕಿ ಮೊತ್ತದ ಕುರಿತು ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎಂದು ಹೇಳಿದರು.

'ಬೆನಿವೊಲೆಂಟ್ ಸ್ಕೀಮ್' ಪದ ಬಳಕೆಗೆ ಆಕ್ಷೇಪ

ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು 'ಬೆನಿವೊಲೆಂಟ್ ಸ್ಕೀಮ್' (ಪರೋಪಕಾರಿ ಯೋಜನೆ) ಎಂದು ಉಲ್ಲೇಖಿಸಿರುವುದಕ್ಕೂ ನಿಖಿಲ್ ಆಕ್ಷೇಪ ವ್ಯಕ್ತಪಡಿಸಿದರು.

ಯೋಜನೆಯನ್ನು ಪರೋಪಕಾರಿ ಯೋಜನೆ ಎಂದು ಕರೆಯುವುದರ ಅರ್ಥವೇನು? ಮಹಿಳೆಯರಿಗೆ ನೀಡುವ ಹಣವನ್ನು ಸರ್ಕಾರದ ದಾನ ಅಥವಾ ದಯೆ ಎಂದು ಪರಿಗಣಿಸಬೇಕೇ? ಮಹಿಳೆಯರು ತಮ್ಮ ಹಕ್ಕಿನ ಹಣಕ್ಕಾಗಿ ಪ್ರಶ್ನಿಸಬಾರದು ಎಂಬ ಧೋರಣೆ ಸರಿಯಲ್ಲ. ಫಲಾನುಭವಿಗಳ ಗೌರವ ಮತ್ತು ನಿರೀಕ್ಷೆಗಳನ್ನು ಸರ್ಕಾರ ಪರಿಗಣಿಸಬೇಕು ಎಂದು ಹೇಳಿದರು.

ಸರ್ಕಾರ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರ ನೀಡದೇ ಇರಬಹುದು. ಆದರೆ ನ್ಯಾಯಾಂಗದ ಪ್ರಶ್ನೆಗಳಿಗೆ ಉತ್ತರಿಸಲೇಬೇಕಾಗುತ್ತದೆ. ನ್ಯಾಯಾಲಯದ ಮುಂದೆ ಈ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಸ್ಪಷ್ಟ ಲೆಕ್ಕ ನೀಡಬೇಕಿದೆ ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande