ಗ್ರಾಮೀಣ ಯೋಗ ಪ್ರತಿಭೆಗಳು ಜಾಗತಿಕ ಮಟ್ಟದಲ್ಲಿ ಮಿಂಚುವಂತಾಗಲಿ: ಸುಮಂಗಲಾ ಹದ್ಲಿ
ಗದಗ, 04 ನವೆಂಬರ್ (ಹಿ.ಸ.) ಯೋಗವು ಕೇವಲ ದೈಹಿಕ ಕಸರತ್ತಲ್ಲ, ಅದು ಭಾರತೀಯ ಸಂಸ್ಕೃತಿಯ ಆತ್ಮವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಯುವಪೀಳಿಗೆಗೆ ಮಾನಸಿಕ ಸ್ಥಿರತೆ, ಶಿಸ್ತು ಹಾಗೂ ಉತ್ತಮ ಆರೋಗ್ಯ ನೀಡುವ ಯೋಗಕಲೆ ಗ್ರಾಮೀಣ ಭಾಗದಲ್ಲಿಯೂ ವ್ಯಾಪಕವಾಗಿ ಬೆಳೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು
ಫೋಟೋ


ಗದಗ, 04 ನವೆಂಬರ್ (ಹಿ.ಸ.)

ಯೋಗವು ಕೇವಲ ದೈಹಿಕ ಕಸರತ್ತಲ್ಲ, ಅದು ಭಾರತೀಯ ಸಂಸ್ಕೃತಿಯ ಆತ್ಮವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಯುವಪೀಳಿಗೆಗೆ ಮಾನಸಿಕ ಸ್ಥಿರತೆ, ಶಿಸ್ತು ಹಾಗೂ ಉತ್ತಮ ಆರೋಗ್ಯ ನೀಡುವ ಯೋಗಕಲೆ ಗ್ರಾಮೀಣ ಭಾಗದಲ್ಲಿಯೂ ವ್ಯಾಪಕವಾಗಿ ಬೆಳೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಯೋಗ ಜ್ಯೋತಿ ಪ್ರಶಸ್ತಿ ಪುರಸ್ಕೃತೆ ಹಾಗೂ ನಿತ್ಯಂ ಯೋಗ ಕೇಂದ್ರದ ಸಂಚಾಲಕಿ ಸುಮಂಗಲಾ ಹದ್ಲಿ ಹೇಳಿದರು.

ಗದಗ ನಗರದ ಕನಕ ಭವನದಲ್ಲಿ ಶರಣರ ಜ್ಞಾನ ಯೋಗಾಶ್ರಮ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 2026ನೇ ಸಾಲಿನ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಿತ್ಯಂ ಯೋಗ ಕೇಂದ್ರದ ಯೋಗಪಟುಗಳು ಉತ್ತಮ ಸಾಧನೆ ಮಾಡಿ ಅಖಂಡ ರಾಜ್ಯಮಟ್ಟದ ತಂಡ ಪ್ರಶಸ್ತಿ ಗಳಿಸಿದ ಹಿನ್ನೆಲೆಯಲ್ಲಿ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಮಕ್ಕಳಲ್ಲಿ ಏಕಾಗ್ರತೆ, ಶಿಸ್ತು ಹಾಗೂ ಆತ್ಮವಿಶ್ವಾಸ ಬೆಳೆಸಲು ಯೋಗ ಸಹಕಾರಿಯಾಗಿದೆ. ನಮ್ಮ ಕೇಂದ್ರದ ಯೋಗಪಟುಗಳು ಕೇವಲ ಪ್ರಶಸ್ತಿ ಗಳಿಸುವ ಉದ್ದೇಶದಿಂದ ಯೋಗಾಭ್ಯಾಸ ಮಾಡದೆ, ಅದನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಿದ್ದಾರೆ. ಇದೇ ಅವರ ಸಾಧನೆಗೆ ಪ್ರಮುಖ ಕಾರಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಬಾರಿಯ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಿತ್ಯಂ ಯೋಗ ಕೇಂದ್ರದಿಂದ ಒಟ್ಟು 54 ಯೋಗಪಟುಗಳು ಭಾಗವಹಿಸಿದ್ದರು. ಒಂದು ವರ್ಷದ ಬಾಲಕರಿಂದ ಹಿಡಿದು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರವರೆಗೆ ವಿವಿಧ ವಯೋಮಾನದ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ವೈಯಕ್ತಿಕ ಪದಕಗಳ ಜೊತೆಗೆ ಅಖಂಡ ರಾಜ್ಯಮಟ್ಟದ ತಂಡ ಪ್ರಶಸ್ತಿಯನ್ನು ಕೇಂದ್ರದ ಮುಡಿಗೇರಿಸಿದ್ದಾರೆ.

ಸ್ಪರ್ಧೆಯಲ್ಲಿ ಪ್ರಶಾಂತ ಗಾಣಿಗೇರ ಪ್ರಥಮ ಸ್ಥಾನ ಪಡೆದರೆ, ಮಲ್ಲಿಕಾರ್ಜುನ ಅಳಗವಾಡಿ, ಶೋಭಾ ವರ್ಣೇಕರ ಹಾಗೂ ಶಾರದಾ ಕಾತರಕಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಚೈತ್ರ ಸೋಮನಗೌಡ ತೃತೀಯ ಸ್ಥಾನ ಗಳಿಸಿದ್ದು, ನಾಲ್ಕು ಮತ್ತು ಐದನೇ ಸ್ಥಾನ ಪಡೆದ ಯೋಗಪಟುಗಳ ಸಾಧನೆಯೂ ಶ್ಲಾಘನೀಯವಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಕೇಂದ್ರದ ಯೋಗ ಪ್ರತಿಭೆಗಳಿಗೆ ಇನ್ನಷ್ಟು ಉತ್ತಮ ತರಬೇತಿ ನೀಡಿ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಯೋಗ ವೇದಿಕೆಗಳಲ್ಲಿ ಕರ್ನಾಟಕ ಮತ್ತು ಗದಗ ಜಿಲ್ಲೆಯನ್ನು ಪ್ರತಿನಿಧಿಸುವಂತೆ ರೂಪಿಸುವುದು ನಮ್ಮ ಗುರಿಯಾಗಿದೆ. ಮಕ್ಕಳ ಈ ಸಾಧನೆಯ ಹಿಂದೆ ಪೋಷಕರ ಪ್ರೋತ್ಸಾಹ ಮತ್ತು ಸಹಕಾರ ಮಹತ್ವದ ಪಾತ್ರ ವಹಿಸಿದೆ ಎಂದು ತಿಳಿಸಿದರು.

ರಾಜ್ಯಮಟ್ಟದ ಸ್ಪರ್ಧೆಗೆ ಅವಕಾಶ ಕಲ್ಪಿಸಿದ ಶರಣರ ಜ್ಞಾನ ಯೋಗಾಶ್ರಮದ ಪದಾಧಿಕಾರಿಗಳಿಗೆ, ಪೂಜ್ಯ ಲಕ್ಷ್ಮಿ ಅಮ್ಮನವರಿಗೆ ಹಾಗೂ ಜಿಲ್ಲೆಯ ಸಮಸ್ತ ಯೋಗ ಬಂಧುಗಳಿಗೆ ಕೃತಜ್ಞತೆ ಸಲ್ಲಿಸಿದರು.

ನಿತ್ಯಂ ಯೋಗ ಕೇಂದ್ರದ ವಿಜೇತ ಯೋಗಪಟುಗಳನ್ನು ಮುಂದಿನ ದಿನಗಳಲ್ಲಿ ವಿಶೇಷ ಅಭಿನಂದನಾ ಸಮಾರಂಭ ಆಯೋಜಿಸಿ ಗೌರವಿಸಲಾಗುವುದು ಎಂದು ಸುಮಂಗಲಾ ಹದ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande