
ಗದಗ, 04 ನವೆಂಬರ್ (ಹಿ.ಸ.)
ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ಹಾಗೂ ಪರಂಪರೆಯ ಕಂಪು ನಾಡಿನಾದ್ಯಂತ ಪಸರಿಸಬೇಕು. ಕನ್ನಡಾಭಿಮಾನ ಕೇವಲ ರಾಜ್ಯೋತ್ಸವಕ್ಕೆ ಸೀಮಿತವಾಗದೆ ಪ್ರತಿಯೊಬ್ಬ ಕನ್ನಡಿಗರ ನಿತ್ಯದ ಉಸಿರಾಗಬೇಕು ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ ಹೇಳಿದರು.
ನಗರದ ಸ್ವತಂತ್ರ ವಿತರಣಾ ಕೇಂದ್ರದಲ್ಲಿಂದು ಗದಗ ಮನರಂಜನಾ ಕೂಟದ ಆಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಅಂಗವಾಗಿ ಸಂಗೀತ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡ ನಾಡಿನ ಏಕೀಕರಣಕ್ಕಾಗಿ ಶ್ರಮಿಸಿದ ಆಲೂರು ವೆಂಕಟರಾವ್, ಬಿ.ಎಂ.ಶ್ರೀ, ಕುವೆಂಪು ಸೇರಿದಂತೆ ಅನೇಕ ಮಹನೀಯರ ತ್ಯಾಗ ಮತ್ತು ಪರಿಶ್ರಮವನ್ನು ಪ್ರತಿಯೊಬ್ಬ ಕನ್ನಡಿಗರು ಸ್ಮರಿಸಬೇಕು. ರಾಜ್ಯೋತ್ಸವ ಕೇವಲ ಸಂಭ್ರಮಾಚರಣೆಗೆ ಸೀಮಿತವಾಗದೆ ಕನ್ನಡ ನಾಡಿನ ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಕಲೆ ಹಾಗೂ ಪರಂಪರೆಯನ್ನು ನೆನಪಿಸುವ ಅರ್ಥಪೂರ್ಣ ಆಚರಣೆಯಾಗಬೇಕು ಎಂದರು.
ಕರ್ನಾಟಕ ಏಕೀಕರಣಕ್ಕೂ ಮುನ್ನ ಕನ್ನಡ ಭಾಷಿಕ ಪ್ರದೇಶಗಳು ಐದು ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದವು. ಕನ್ನಡಿಗರ ಹೋರಾಟ, ತ್ಯಾಗ ಮತ್ತು ಪರಿಶ್ರಮದ ಫಲವಾಗಿ ಅಖಂಡ ಕರ್ನಾಟಕ ನಿರ್ಮಾಣವಾಗಿದೆ. ಈ ಐತಿಹಾಸಿಕ ಹಿನ್ನೆಲೆಯನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಸಾಹಿತ್ಯ, ಸಂಸ್ಕೃತಿ, ಕಲೆ, ವಿಜ್ಞಾನ, ಶಿಕ್ಷಣ ಹಾಗೂ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕನ್ನಡಿಗರು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಸಾಧಕರನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕನ್ನಡದ ಹಿರಿಮೆ ಮತ್ತು ನಾಡಿನ ಮಹನೀಯರ ಆದರ್ಶಗಳನ್ನು ಸಾರುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ ಅವರು 'ಕರುನಾಡ ತಾಯಿ ಸದಾ ಚಿನ್ಮಯಿ, ಈ ಪುಣ್ಯಭೂಮಿ ನಮ್ಮ ದೇವಾಲಯ' ಎಂಬ ಜನಪ್ರಿಯ ಗೀತೆಯನ್ನು ಸುಮಧುರವಾಗಿ ಹಾಡಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು. ಅವರ ಗಾಯನಕ್ಕೆ ನೆರೆದಿದ್ದವರು ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗದಗ ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕ ವಿನೋಧಕುಮಾರ ಮೇದಾರ, ಐಪಿಪಿಬಿ ವ್ಯವಸ್ಥಾಪಕ ಮಂಜುನಾಥ, ರೋಣ ಅಂಚೆ ನಿರೀಕ್ಷಕ ವೆಂಕಟೇಶರಡ್ಡಿ ಕೊಳ್ಳಿ, ಪ್ರಧಾನ ಅಂಚೆ ಪಾಲಕ ಏಕನಾಥ ಮೆಣಸಿನಕಾಯಿ ಹಾಗೂ ಸ್ವತಂತ್ರ ವಿತರಣಾ ಕೇಂದ್ರದ ಮೇಲ್ವಿಚಾರಕ ಡಿ.ಜಿ. ಮ್ಯಾಗೇರಿ ಮಾತನಾಡಿದರು.
ಶರಣಪ್ಪ ನಾಯ್ಕರ, ಸೌಮ್ಯ ಹುಯಿಲಗೋಳ, ವಿನೂತ ಕಪ್ಪತನವರ, ಕವಿತಾ ರಡ್ಡೇರ, ವಿರೇಶ ಅಂಗಡಿ, ಮೇಘನಾ ಕುಲಕರ್ಣಿ, ವಾಣಿ ಯಳಗಂಟಿ, ಭೀಮಣ್ಣ ದೊಡ್ಡಮನಿ, ರವಿ ಜಾಧವ ಹಾಗೂ ವೀರಣಗೌಡ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಇದೇ ವೇಳೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ವತಿಯಿಂದ ವ್ಯಾಪಾರಿ ಗ್ರಾಹಕರಿಗೆ ಡಿಜಿಟಲ್ ಪಾವತಿ ಸೌಲಭ್ಯ ಕಲ್ಪಿಸುವ ಡಕ್ ಪೇ ಸೌಂಡ್ ಬಾಕ್ಸ್ ವಿತರಿಸಲಾಯಿತು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ವತಂತ್ರ ವಿತರಣಾ ಕೇಂದ್ರವನ್ನು ಬಾಳೆ ಮತ್ತು ಮಾವಿನ ತಳಿರು, ಬಲೂನು, ಹೂವಿನ ಅಲಂಕಾರ ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳ ರಂಗೋಲಿಯಿಂದ ಸಿಂಗರಿಸಲಾಗಿತ್ತು. ಅಂಚೆ ಇಲಾಖೆಯಲ್ಲಿ ನಾಡಹಬ್ಬದ ಸಂಭ್ರಮ ಮನೆಮಾಡಿತ್ತು.
---------------
ಹಿಂದೂಸ್ತಾನ್ ಸಮಾಚಾರ್ / lalita MP