ಚುನಾವಣೆಯಲ್ಲಿ ಸೋತವರಿಗೆ ಸರ್ಕಾರದಲ್ಲಿ ಅಧಿಕಾರ ನೀಡುವುದಕ್ಕೆ ಹೈಕೋರ್ಟ್ ತಡೆ
Karnataka-High-Court-Stays-Backdoor-Appointment-of-Defeated-Candidates-to-Government-Posts
Karnataka-High-Court-Stays-Backdoor-Appointment-of-Defeated-Candidates-to-Government-Posts


ಬೆಂಗಳೂರು, 04 ನವೆಂಬರ್ (ಹಿ.ಸ.):

ಚುನಾವಣೆಯಲ್ಲಿ ಸೋತ ರಾಜಕೀಯ ಅಭ್ಯರ್ಥಿಗಳಿಗೆ ಸರ್ಕಾರಿ ಹುದ್ದೆಗಳನ್ನು ನೀಡುವ ಮೂಲಕ ಹಿಂಬಾಗಿಲಿನಿಂದ ಅಧಿಕಾರ ಕಲ್ಪಿಸುವ ಸರ್ಕಾರದ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಸರ್ಕಾರಿ ಹುದ್ದೆಗಳಿಗೆ ನೇಮಕ ಮಾಡುವಾಗ ರಾಜಕೀಯ ಪರಿಗಣನೆಗಿಂತ ಅರ್ಹತೆ, ಪ್ರಾಮಾಣಿಕತೆ ಮತ್ತು ಆಡಳಿತಾತ್ಮಕ ಸಾಮರ್ಥ್ಯಕ್ಕೆ ಆದ್ಯತೆ ನೀಡಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅನಧಿಕೃತವಾಗಿ ವಶಪಡಿಸಿಕೊಂಡಿರುವ ಜಮೀನುಗಳನ್ನು ಸಕ್ರಮಗೊಳಿಸುವ ಸಂಬಂಧ ರಚಿಸಲಾಗುವ ಹೆಚ್ಚುವರಿ ಸಮಿತಿಯ ಅಧ್ಯಕ್ಷರ ನೇಮಕಾತಿಗೆ ಕಟ್ಟುನಿಟ್ಟಿನ ಅರ್ಹತಾ ಮಾನದಂಡಗಳನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 108-EE(1)(a) ಅಡಿಯಲ್ಲಿ ರಚಿಸಲಾಗುವ ಹೆಚ್ಚುವರಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಕಾನೂನು ಜ್ಞಾನ, ಪ್ರಾಮಾಣಿಕತೆ ಹಾಗೂ ಆಡಳಿತಾತ್ಮಕ ಸಾಮರ್ಥ್ಯ ಹೊಂದಿರುವವರನ್ನೇ ನೇಮಕ ಮಾಡಬೇಕು ಎಂದು ನ್ಯಾಯಪೀಠ ಸೂಚಿಸಿದೆ.

ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಹೆಚ್. ಶಾಂತಿ ಭೂಷಣ್ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 94-A(2-A) ಅಡಿಯಲ್ಲಿ ಹೆಚ್ಚುವರಿ ಸಮಿತಿ ರಚಿಸಿ ರಾಜ್ಯ ಸರ್ಕಾರ 2023ರ ಡಿಸೆಂಬರ್ 4 ಮತ್ತು 26ರಂದು ಹೊರಡಿಸಿದ್ದ ಅಧಿಸೂಚನೆಗಳನ್ನು ನ್ಯಾಯಾಲಯ ರದ್ದುಗೊಳಿಸಿದೆ.

2023ರ ನವೆಂಬರ್ 2ರಂದು ಶಾಸಕ ಗುರುರಾಜ್ ಗಂಟಿಹೊಳೆ ಅವರನ್ನು ಸೆಕ್ಷನ್ 94-A(1) ಅಡಿಯಲ್ಲಿ 12,313 ಬಾಕಿ ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿದ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

ಆದರೆ, ಬಳಿಕ ರಾಜ್ಯ ಸರ್ಕಾರ ಹೆಚ್ಚುವರಿ ಸಮಿತಿ ರಚಿಸಿ 2023ರ ಚುನಾವಣೆಯಲ್ಲಿ ಸೋತಿದ್ದ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ನೇಮಿಸಲು ಮುಂದಾಗಿತ್ತು.

ಇದನ್ನು ಪ್ರಶ್ನಿಸಿ ಶಾಸಕ ಗುರುರಾಜ್ ಗಂಟಿಹೊಳೆ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಇದೀಗ ಸರ್ಕಾರದ ಅಧಿಸೂಚನೆಗಳನ್ನು ರದ್ದುಗೊಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande