ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ:ಇಂದು ಮಧ್ಯರಾತ್ರಿಂದಲೇ ಜಾರಿ
ಬೆಂಗಳೂರು, 04 ನವೆಂಬರ್ (ಹಿ.ಸ.): ಹಾಲಿನ ದರ ಏರಿಕೆಯ ಬೆನ್ನಲ್ಲೇ ರಾಜ್ಯದ ಸಾರಿಗೆ ಬಸ್ ಪ್ರಯಾಣ ದರ ಏರಿಕೆಯಾಗಿದೆ. ಇಂದಿನಿಂದಲೇ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಪರಿಷ್ಕರಿಸಲಾಗುತ್ತಿದ್ದು, ಕನಿಷ್ಠ 4 ರೂ.ಗಳಿಂದ ಗರಿಷ್ಠ 18 ರೂ.ವರೆಗೆ ಹೆಚ್ಚಳ ಮಾಡಲಾಗಿದೆ ಎಂದು ಸಾರಿಗೆ ಸಚಿ
ಸಾಂಕೇತಿಕ


ಬೆಂಗಳೂರು, 04 ನವೆಂಬರ್ (ಹಿ.ಸ.):

ಹಾಲಿನ ದರ ಏರಿಕೆಯ ಬೆನ್ನಲ್ಲೇ ರಾಜ್ಯದ ಸಾರಿಗೆ ಬಸ್ ಪ್ರಯಾಣ ದರ ಏರಿಕೆಯಾಗಿದೆ. ಇಂದಿನಿಂದಲೇ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಪರಿಷ್ಕರಿಸಲಾಗುತ್ತಿದ್ದು, ಕನಿಷ್ಠ 4 ರೂ.ಗಳಿಂದ ಗರಿಷ್ಠ 18 ರೂ.ವರೆಗೆ ಹೆಚ್ಚಳ ಮಾಡಲಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡೀಸೆಲ್ ಬೆಲೆ ಏರಿಕೆ, ಸಾರಿಗೆ ನೌಕರರ ವೇತನ ಹೆಚ್ಚಳ ಹಾಗೂ ನಿಗಮಗಳ ಮೇಲಿನ ಸಾಲ ಮತ್ತು ಹೊಣೆಗಾರಿಕೆಗಳ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ ಎಂದು ಸಮರ್ಥಿಸಿಕೊಂಡರು.

ಕಳೆದ 10 ವರ್ಷಗಳಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಒಂದು ಬಾರಿ ಹಾಗೂ ಉಳಿದ ಮೂರು ಸಾರಿಗೆ ನಿಗಮಗಳಲ್ಲಿ ತಲಾ ಎರಡು ಬಾರಿ ಮಾತ್ರ ಪ್ರಯಾಣ ದರ ಹೆಚ್ಚಿಸಲಾಗಿದೆ. ನಿಗಮಗಳು ನಷ್ಟದಲ್ಲಿರುವುದರಿಂದ ನಷ್ಟದ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಿದರು.

ಪ್ರಸ್ತುತ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ 25,125 ಬಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, 1.3 ಲಕ್ಷ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಒಟ್ಟು 24,179 ಮಾರ್ಗಗಳಲ್ಲಿ ಬಸ್ ಸಂಚಾರ ನಡೆಯುತ್ತಿದೆ. ಪ್ರತಿದಿನ ಸುಮಾರು 1.24 ಕೋಟಿ ಪ್ರಯಾಣಿಕರು ಸಾರಿಗೆ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಪ್ರತಿದಿನ 74 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳಿಗೆ ನಷ್ಟವಾಗುತ್ತಿದೆ ಎಂಬುದು ತಪ್ಪು ಕಲ್ಪನೆ. ಉಚಿತ ಪ್ರಯಾಣದ ಪ್ರತಿ ಟಿಕೆಟ್‌ಗೆ ಸರ್ಕಾರವೇ ಅನುದಾನ ಒದಗಿಸುತ್ತಿದೆ. ಆದ್ದರಿಂದ ನಿಗಮಗಳ ನಷ್ಟಕ್ಕೆ ಶಕ್ತಿ ಯೋಜನೆ ಕಾರಣವಲ್ಲ ಎಂದು ಸ್ಪಷ್ಟಪಡಿಸಿದರು.

ಡೀಸೆಲ್ ಬೆಲೆ ಮತ್ತು ನೌಕರರ ವೇತನ ಹೆಚ್ಚಳದ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರ ಪರಿಷ್ಕರಿಸುವ ಅಧಿಕಾರ ಸಾರಿಗೆ ನಿಗಮಗಳಿಗೆ ಇದೆ. ಈ ಸಂಬಂಧ 2023ರಲ್ಲಿ ಎಂ.ಆರ್. ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ವರದಿ ನೀಡಿದ್ದರೂ ನಿಗಮಗಳು ಅದನ್ನು ಜಾರಿಗೊಳಿಸಿರಲಿಲ್ಲ. ಬಳಿಕ ಅತುಲ್ ಕುಮಾರ್ ತಿವಾರಿ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚಿಸಲಾಗಿದ್ದು, ನಾಲ್ಕು ಸಾರಿಗೆ ನಿಗಮಗಳ ಪ್ರಸ್ತುತ ಸ್ಥಿತಿಗತಿಗಳ ಕುರಿತು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಅದಕ್ಕೆ ಅನುಗುಣವಾಗಿ ಪ್ರಯಾಣ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದರು.

ಪ್ರಸ್ತುತ ಡೀಸೆಲ್ ಬೆಲೆ ಲೀಟರ್‌ಗೆ 98 ರೂ.ಗಳಷ್ಟಿದೆ. ಕಳೆದ ಒಂದೂವರೆ ವರ್ಷದಲ್ಲಿ ಡೀಸೆಲ್ ಬೆಲೆಯಲ್ಲಿ 10.47 ರೂ. ಹೆಚ್ಚಳವಾಗಿದೆ. ನಿಗಮಗಳ ಒಟ್ಟು ವೆಚ್ಚದಲ್ಲಿ ಶೇ.80ರಷ್ಟು ಹಣ ಡೀಸೆಲ್ ಮತ್ತು ಸಿಬ್ಬಂದಿ ವೆಚ್ಚಕ್ಕೆ ಖರ್ಚಾಗುತ್ತಿದೆ. ಇಂಧನ ಖರೀದಿಗೆ ಸಂಬಂಧಿಸಿದಂತೆ 1,011 ಕೋಟಿ ರೂ. ಬಾಕಿ ಉಳಿದಿದೆ ಎಂದು ತಿಳಿಸಿದರು.

2016ರಿಂದ 2025ರವರೆಗೆ ಸಾರಿಗೆ ನೌಕರರ ವೇತನದಲ್ಲಿ ಹೆಚ್ಚಳವಾಗಿದ್ದು, 2026ರಲ್ಲಿ ವೇತನ ವೆಚ್ಚ 3,694 ಕೋಟಿ ರೂ.ಗಳಿಗೆ ತಲುಪಿದೆ. ನಾಲ್ಕು ಸಾರಿಗೆ ನಿಗಮಗಳಲ್ಲಿ ಬಾಕಿ ಮತ್ತು ಇತರ ಹೊಣೆಗಾರಿಕೆಗಳು 7,719 ಕೋಟಿ ರೂ.ಗಳಷ್ಟಿವೆ. ಅಲ್ಲದೆ, 2,192 ಕೋಟಿ ರೂ. ಸಾಲವಿದ್ದು, ಒಟ್ಟು ಸಾಲ ಮತ್ತು ಹೊಣೆಗಾರಿಕೆಗಳ ಮೊತ್ತ 9,912 ಕೋಟಿ ರೂ.ಗಳಾಗಿದೆ ಎಂದು ವಿವರಿಸಿದರು.

ಶಕ್ತಿ ಯೋಜನೆಯಡಿ ಸರ್ಕಾರದಿಂದ ಬರಬೇಕಿರುವ ಅನುದಾನದಲ್ಲಿ 5 ಸಾವಿರ ಕೋಟಿ ರೂ. ಬಾಕಿ ಉಳಿದಿದೆ. ಸಾರಿಗೆ ನಿಗಮಗಳಿಗೆ ಪ್ರತಿ ವರ್ಷ ಸುಮಾರು 16 ಸಾವಿರ ಕೋಟಿ ರೂ. ವೆಚ್ಚವಾಗುತ್ತಿದ್ದು, ಈ ಪೈಕಿ 2 ಸಾವಿರ ಕೋಟಿ ರೂ. ನಷ್ಟ ಉಂಟಾಗುತ್ತಿದೆ ಎಂದು ಸಚಿವ ಬೈರತಿ ಸುರೇಶ್ ಮಾಹಿತಿ ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande