ಹವ್ಯಕ ಭಾಷಾ ಸಾಹಿತ್ಯ ಬೆಳೆಸಲು ಸಂಕ್ರಾಂತಿ ಹವ್ಯಕ ಸಾಹಿತ್ಯ ಉತ್ಸವ:ಬರಹಗಳಿಗೆ ಆಹ್ವಾನ
ಬೆಂಗಳೂರು, 04 ನವೆಂಬರ್ (ಹಿ.ಸ.): ಹವ್ಯಕ ಭಾಷೆಯ ಸಾಹಿತ್ಯವನ್ನು ಬೆಳೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ‘ಹವ್ಯಕ ವಿಶ್ವ’ ಡಿಜಿಟಲ್ ವೇದಿಕೆಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ‘ಸಂಕ್ರಾಂತಿ ಹವ್ಯಕ ಸಾಹಿತ್ಯ ಉತ್ಸವ-2027’ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹವ್ಯಕ ಭಾಷಾ ಸಾಹಿತ್ಯಾಸಕ್ತರಿಂದ
ಸಾಂಕೇತಿಕ


ಬೆಂಗಳೂರು, 04 ನವೆಂಬರ್ (ಹಿ.ಸ.):

ಹವ್ಯಕ ಭಾಷೆಯ ಸಾಹಿತ್ಯವನ್ನು ಬೆಳೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ‘ಹವ್ಯಕ ವಿಶ್ವ’ ಡಿಜಿಟಲ್ ವೇದಿಕೆಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ‘ಸಂಕ್ರಾಂತಿ ಹವ್ಯಕ ಸಾಹಿತ್ಯ ಉತ್ಸವ-2027’ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹವ್ಯಕ ಭಾಷಾ ಸಾಹಿತ್ಯಾಸಕ್ತರಿಂದ ವಿವಿಧ ವಿಭಾಗಗಳಲ್ಲಿ ಬರಹಗಳನ್ನು ಆಹ್ವಾನಿಸಲಾಗಿದೆ.

ಕಥೆ, ಕವನ, ಪ್ರಬಂಧ ಹಾಗೂ ಲಘುಬರಹ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಕಥೆ ಮತ್ತು ಲಘುಬರಹ ವಿಭಾಗಗಳಲ್ಲಿ ಸ್ಪರ್ಧಿಗಳು ತಮಗೆ ಇಷ್ಟವಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಕವನ ವಿಭಾಗಕ್ಕೆ ‘ಹಳ್ಳಿ ಮನೆಯೋ/ಬದುಕೋ, ಪೇಟೆ ಮನೆಯೋ/ಬದುಕೋ’ ಎಂಬ ವಿಷಯ ನೀಡಲಾಗಿದೆ. ‘ಹವ್ಯಕ ಸಂಸ್ಕೃತಿಯ ಸಂರಕ್ಷಣೆಯಲ್ಲಿ ಯುವ ಪೀಳಿಗೆಯ ಜವಾಬ್ದಾರಿ’ ಎಂಬುದು ಪ್ರಬಂಧ ಸ್ಪರ್ಧೆಯ ವಿಷಯವಾಗಿದೆ.

ಆಯ್ಕೆಯಾದ ಅತ್ಯುತ್ತಮ ಬರಹಗಳಿಗೆ ಪ್ರಥಮ ಬಹುಮಾನವಾಗಿ 3,000 ರೂ. ನಗದು, ಫಲಕ ಹಾಗೂ ಪ್ರಮಾಣಪತ್ರ ಮತ್ತು ದ್ವಿತೀಯ ಬಹುಮಾನವಾಗಿ 1,500 ರೂ. ನಗದು, ಫಲಕ ಹಾಗೂ ಪ್ರಮಾಣಪತ್ರ ನೀಡಲಾಗುವುದು.

ಬರಹಗಳನ್ನು ಸಲ್ಲಿಸಲು 2026ರ ಡಿಸೆಂಬರ್ 1 ಕೊನೆಯ ದಿನವಾಗಿದ್ದು, 2027ರ ಜನವರಿ 14ರ ಸಂಕ್ರಾಂತಿ ದಿನದಂದು ಫಲಿತಾಂಶ ಪ್ರಕಟಿಸಲಾಗುವುದು. ಬರಹಗಳು ಯೂನಿಕೋಡ್ ಅಥವಾ ನುಡಿ ಅಕ್ಷರ ವಿನ್ಯಾಸದಲ್ಲಿರಬೇಕು. ಮೈಕ್ರೋಸಾಫ್ಟ್ ವರ್ಡ್, ಪಿಡಿಎಫ್ ರೂಪದಲ್ಲಿ ಅಥವಾ ಕಾಗದದಲ್ಲಿ ಬರೆದು ಸ್ಕ್ಯಾನ್ ಮಾಡಿದ ಪ್ರತಿಯನ್ನೂ ಕಳುಹಿಸಬಹುದು.

ಸ್ಪರ್ಧೆಗೆ ಸಲ್ಲಿಸುವ ಎಲ್ಲ ಬರಹಗಳು ಕಡ್ಡಾಯವಾಗಿ ಹವ್ಯಕ ಭಾಷೆಯಲ್ಲಿರಬೇಕು ಹಾಗೂ ಈ ಹಿಂದೆ ಎಲ್ಲಿಯೂ ಪ್ರಕಟವಾಗಿರಬಾರದು. ಆಸಕ್ತರು editor@havyakavishwa.com ಅಥವಾ havyakavishwa@gmail.com ಇ-ಮೇಲ್ ವಿಳಾಸಗಳಿಗೆ ಬರಹಗಳನ್ನು ಕಳುಹಿಸಬಹುದು. ವಾಟ್ಸ್‌ಆ್ಯಪ್ ಮೂಲಕವೂ 6360604365 ಸಂಖ್ಯೆಗೆ ಕಳುಹಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ havyakavishwa.com ಸಂಪರ್ಕಿಸಬಹುದು ಎಂದು ಹವ್ಯಕ ವಿಶ್ವ ಬಳಗದ ಕೃಷ್ಣ ಕಿಶೋರ್ ಯೇನಂಕೂಡ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande