
ಗದಗ, 04 ನವೆಂಬರ್ (ಹಿ.ಸ.)
ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ-ಯುವತಿಯರು ಸ್ವಂತ ಉದ್ಯೋಗ ಆರಂಭಿಸಿ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ ಕೆನರಾ ಬ್ಯಾಂಕ್ ದೇಶಪಾಂಡೆ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಉಚಿತ ಕೌಶಲ್ಯ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಥೆಯಲ್ಲಿ ಡಿಸೆಂಬರ್ ತಿಂಗಳಲ್ಲಿ 18ರಿಂದ 50 ವರ್ಷ ವಯೋಮಾನದ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ-ಯುವತಿಯರಿಗೆ ಜೂಟ್ ಬ್ಯಾಗ್ ತಯಾರಿಕೆ ಹಾಗೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮತ್ತು ದುರಸ್ತಿ ಕುರಿತು ತರಬೇತಿ ಪ್ರಾರಂಭವಾಗಲಿದೆ. ಈ ತರಬೇತಿಗಳು ಊಟ ಮತ್ತು ವಸತಿ ಸೌಲಭ್ಯದೊಂದಿಗೆ ಸಂಪೂರ್ಣ ಉಚಿತವಾಗಿರಲಿವೆ.
ತರಬೇತಿಯ ಸಂದರ್ಭದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆಯ ಗುಣಗಳು, ಹೊಸ ಉದ್ಯಮ ಸ್ಥಾಪನೆ, ಮಾರುಕಟ್ಟೆ ಸಮೀಕ್ಷೆ, ಮಾರಾಟ ತಂತ್ರಗಳು ಹಾಗೂ ಯಶಸ್ವಿ ಉದ್ಯಮಿಗಳ ಅನುಭವ ಹಂಚಿಕೆಯ ಕುರಿತು ಮಾಹಿತಿ ನೀಡಲಾಗುತ್ತದೆ. ಅಲ್ಲದೆ ಕ್ಷೇತ್ರ ಭೇಟಿ, ವ್ಯಕ್ತಿತ್ವ ವಿಕಸನ, ಯೋಗ ತರಬೇತಿ, ಬ್ಯಾಂಕ್ ಸಾಲದ ಮೂಲಕ ಸ್ವಂತ ಉದ್ಯಮ ಆರಂಭಿಸುವ ವಿಧಾನ, ವಿವಿಧ ಸರ್ಕಾರಿ ಯೋಜನೆಗಳು ಹಾಗೂ ಯೋಜನಾ ವರದಿ ತಯಾರಿಕೆಯ ಬಗ್ಗೆಯೂ ಮಾರ್ಗದರ್ಶನ ನೀಡಲಾಗುತ್ತದೆ.
ತರಬೇತಿ ಪಡೆಯಲು ಆಸಕ್ತರು ನವೆಂಬರ್ 30ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಮೊದಲು ನೋಂದಾಯಿಸಿಕೊಂಡವರಿಗೆ ಹಾಗೂ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ, ಈ ವಿಳಾಸಕ್ಕೆ ಸಂಪರ್ಕಿಸಬಹುದು. ಅಥವಾ 8217236973, 9483485489, 9482188780 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು ವೆಬ್ಸೈಟ್ ಮೂಲಕವೂ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಸಂಸ್ಥೆಯ ನಿರ್ದೇಶಕ ಕಿರಣಕುಮಾರ ಬಗಾಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP