ಸಾರಿಗೆ ನಿಗಮಗಳಿಗೆ ₹5,650 ಕೋಟಿ ಬಾಕಿ ಉಳಿಸಿ ಜನರ ಮೇಲೆ ದರ ಏರಿಕೆ ಹೊರೆ: ಆರ್.ಅಶೋಕ ಆಕ್ರೋಶ
ಬೆಂಗಳೂರು, 04 ನವೆಂಬರ್ (ಹಿ.ಸ.): ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ ₹5,650.95 ಕೋಟಿ ಬಾಕಿ ಉಳಿಸಿಕೊಂಡಿದ್ದು, ಈ ಹಣವನ್ನು ಪಾವತಿಸಿದ್ದರೆ ಬಸ್ ಪ್ರಯಾಣ ದರ ಏರಿಸುವ ಅಗತ್ಯವೇ ಇರುತ್ತಿರಲಿಲ್ಲ. ಸರ್ಕಾರ ತನ್ನ ತಪ್ಪನ್ನು ಸರಿಪಡಿಸಿಕೊಳ್ಳುವ ಬದಲು ಜನಸಾಮಾನ್ಯರ ಮೇಲೆ ದರ ಏರಿಕೆಯ ಹೊರೆ ಹಾಕಿದೆ ಎಂದು
ಪ್ರತಿಪಕ್ಷ ನಾಯಕ ಅಶೋಕ ಫೈಲ್ ಪೋಟೋ


ಬೆಂಗಳೂರು, 04 ನವೆಂಬರ್ (ಹಿ.ಸ.):

ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ ₹5,650.95 ಕೋಟಿ ಬಾಕಿ ಉಳಿಸಿಕೊಂಡಿದ್ದು, ಈ ಹಣವನ್ನು ಪಾವತಿಸಿದ್ದರೆ ಬಸ್ ಪ್ರಯಾಣ ದರ ಏರಿಸುವ ಅಗತ್ಯವೇ ಇರುತ್ತಿರಲಿಲ್ಲ. ಸರ್ಕಾರ ತನ್ನ ತಪ್ಪನ್ನು ಸರಿಪಡಿಸಿಕೊಳ್ಳುವ ಬದಲು ಜನಸಾಮಾನ್ಯರ ಮೇಲೆ ದರ ಏರಿಕೆಯ ಹೊರೆ ಹಾಕಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲೇ ದಾಖಲೆ ಎನ್ನುವ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ಬಸ್ ಪ್ರಯಾಣ ದರ ಹೆಚ್ಚಿಸಿದೆ. ಸುಮಾರು ಶೇ.40ರಷ್ಟು ದರ ಏರಿಕೆ ಮಾಡಲಾಗಿದ್ದು, ಇದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ದೀಪಾವಳಿ ಬೆಳಕಿನ ಹಬ್ಬವಾಗಿದ್ದರೂ, ಸರ್ಕಾರದ ದರ ಏರಿಕೆಯಿಂದ ಜನರ ಬದುಕಿನಲ್ಲಿ ಕತ್ತಲು ಆವರಿಸಲಿದೆ ಎಂದು ಟೀಕಿಸಿದರು.

ಮೆಜೆಸ್ಟಿಕ್‌ನಿಂದ ಶಿವಾಜಿನಗರಕ್ಕೆ ಬಿಎಂಟಿಸಿ ಪ್ರಯಾಣ ದರ 12 ರೂ. ಇದ್ದದ್ದು 18 ರೂ.ಗೆ ಏರಿಕೆಯಾಗಿದೆ. ಮೆಜೆಸ್ಟಿಕ್‌ನಿಂದ ಯಶವಂತಪುರಕ್ಕೆ 18 ರೂ. ಇದ್ದದ್ದು 25 ರೂ. ಆಗಿದೆ. ಮೆಜೆಸ್ಟಿಕ್‌ನಿಂದ ಬನಶಂಕರಿ ಹಾಗೂ ಅತ್ತಿಬೆಲೆಗೆ ತೆರಳುವ ಪ್ರಯಾಣ ದರದಲ್ಲಿ ತಲಾ 12 ರೂ. ಹೆಚ್ಚಳವಾಗಿದೆ. ನೆಲಮಂಗಲ ಮತ್ತು ಕಾಡುಗೋಡಿಗೆ 10 ರೂ., ಹೊಸಕೋಟೆಗೆ 12 ರೂ. ಏರಿಕೆ ಮಾಡಲಾಗಿದೆ ಎಂದು ವಿವರಿಸಿದರು.

ವೇಗದೂತ ಬಸ್‌ಗಳಲ್ಲಿ ಬೆಂಗಳೂರು-ಕೋಲಾರ ಪ್ರಯಾಣ ದರ 19 ರೂ. ಹೆಚ್ಚಳವಾಗಿದೆ. ಬೆಂಗಳೂರು-ತುಮಕೂರು ದರ 81 ರೂ.ನಿಂದ 100 ರೂ.ಗೆ, ಬೆಂಗಳೂರು-ಮಂಡ್ಯ ದರ 110 ರೂ.ನಿಂದ 136 ರೂ.ಗೆ ಏರಿಕೆಯಾಗಿದೆ. ಬೆಂಗಳೂರು-ಮೈಸೂರು ಪ್ರಯಾಣ ದರದಲ್ಲಿ 37 ರೂ. ಹಾಗೂ ಬೆಂಗಳೂರು-ಹಾಸನ ದರದಲ್ಲಿ 51 ರೂ. ಹೆಚ್ಚಳ ಮಾಡಲಾಗಿದೆ. ಬೆಂಗಳೂರು-ಚಿಕ್ಕಮಗಳೂರು ಪ್ರಯಾಣ ದರವನ್ನೂ 68 ರೂ. ಹೆಚ್ಚಿಸಲಾಗಿದೆ. ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಭರವಸೆ ನೀಡಿ ಇದೀಗ ಜನರ ಮೇಲೆ ಹೆಚ್ಚುವರಿ ಹೊರೆ ಹಾಕಲಾಗಿದೆ ಎಂದು ದೂರಿದರು.

ಸಾರಿಗೆ ನಿಗಮಗಳಿಗೆ ಸರ್ಕಾರದ ಬಾಕಿ

ರಾಜ್ಯ ಸರ್ಕಾರದಿಂದ ನಾಲ್ಕು ಸಾರಿಗೆ ನಿಗಮಗಳಿಗೆ ಒಟ್ಟು ₹5,650.95 ಕೋಟಿ ಬಾಕಿ ಬರಬೇಕಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ₹2,943 ಕೋಟಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ₹1,306 ಕೋಟಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ₹1,019 ಕೋಟಿ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ₹999 ಕೋಟಿ ಪಾವತಿಸಬೇಕಿದೆ ಎಂದು ಅಶೋಕ ತಿಳಿಸಿದರು.

ಈ ಮೊತ್ತವನ್ನು ಸರ್ಕಾರ ಪಾವತಿಸಿದ್ದರೆ ಪ್ರಯಾಣ ದರ ಹೆಚ್ಚಿಸುವ ಪರಿಸ್ಥಿತಿ ಬರುತ್ತಿರಲಿಲ್ಲ. ಸಾರಿಗೆ ನಿಗಮಗಳು ಸಾಲ ಪಡೆಯಲು ₹2,000 ಕೋಟಿ ಮೊತ್ತದ ಖಾತರಿ ನೀಡಲಾಗಿದೆ. ಸರ್ಕಾರ ಬಾಕಿ ಪಾವತಿಸಿದ್ದರೆ ಸಾಲ ಪಡೆಯುವ ಅಗತ್ಯವೂ ಇರುತ್ತಿರಲಿಲ್ಲ. ನಿಗಮಗಳ ನೌಕರರ ಭವಿಷ್ಯ ನಿಧಿಗೆ ₹2,901.53 ಕೋಟಿ ಹಾಗೂ ಇಂಧನ ಪೂರೈಕೆಗೆ ₹827.37 ಕೋಟಿ ಬಾಕಿ ಉಳಿದಿದೆ ಎಂದು ಆರೋಪಿಸಿದರು.

2026ರ ಮೇ ತಿಂಗಳಲ್ಲಿ ಸಾರಿಗೆ ನಿಗಮಗಳ ಒಟ್ಟು ಹೊಣೆಗಾರಿಕೆ ₹7,130.80 ಕೋಟಿ ಇತ್ತು. ಇದರಲ್ಲಿ ವೇತನ, ಭವಿಷ್ಯ ನಿಧಿ ಹಾಗೂ ನಿವೃತ್ತಿ ಉಪಧನದ ಬಾಕಿಗಳೂ ಸೇರಿವೆ. ಕೋವಿಡ್ ಅವಧಿಯ ನಷ್ಟವನ್ನು ಹೊರತುಪಡಿಸಿದರೆ ಬಿಜೆಪಿ ಆಡಳಿತದ ಅವಧಿಯಲ್ಲಿ ಸಾರಿಗೆ ನಿಗಮಗಳು ಲಾಭದಲ್ಲಿದ್ದವು. ತಾವು ಸಾರಿಗೆ ಸಚಿವರಾಗಿದ್ದಾಗ ಐದು ವರ್ಷಗಳ ಕಾಲ ನಿಗಮಗಳು ಲಾಭದಾಯಕವಾಗಿ ಕಾರ್ಯನಿರ್ವಹಿಸಿದ್ದವು. ಆಗ 1,110 ಎಕರೆ ಜಮೀನು ಖರೀದಿಸಿ ಭೂ ಬ್ಯಾಂಕ್ ನಿರ್ಮಿಸಲಾಗಿತ್ತು. ಅದರ ಈಗಿನ ಮೌಲ್ಯ ₹10,000 ಕೋಟಿ ಆಗಿದೆ. ಸಾರಿಗೆ ವಾಣಿಜ್ಯ ಸಂಕೀರ್ಣಗಳಿಂದ ಬಾಡಿಗೆ ರೂಪದಲ್ಲೇ ವಾರ್ಷಿಕ 40ರಿಂದ 50 ಕೋಟಿ ರೂ. ಆದಾಯ ಬರುತ್ತಿತ್ತು ಎಂದು ಹೇಳಿದರು.

ಬಸ್‌ಗಳ ನಿರ್ವಹಣೆಗೂ ಹಣವಿಲ್ಲ

ಸಾರಿಗೆ ನಿಗಮಗಳ ಬಳಿ ಬಿಡಿಭಾಗಗಳನ್ನು ಖರೀದಿಸಲೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹಳೆಯ ಬಿಡಿಭಾಗಗಳನ್ನೇ ಬಳಸಲಾಗುತ್ತಿದೆ. ಬಸ್ ಚಲಾಯಿಸುವಾಗ ಚಾಲಕನ ಕೈಗೆ ಸ್ಟಿಯರಿಂಗ್ ಕಳಚಿ ಬಂದ ಘಟನೆ ಹಾಗೂ ಪ್ರಯಾಣಿಕರೇ ಬಸ್ ತಳ್ಳಿದ ಘಟನೆಗಳು ನಡೆದಿವೆ. ಕಲಬುರಗಿಯ ಚಿಂಚೋಳಿ ಮಾರ್ಗದಲ್ಲಿ ಮುಂಭಾಗದ ದೀಪಗಳಿಲ್ಲದೆ ಮೊಬೈಲ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಪ್ರಸಂಗವೂ ವರದಿಯಾಗಿದೆ. ಇಂತಹ ಸ್ಥಿತಿಗೆ ಸರ್ಕಾರದ ನಿರ್ವಹಣಾ ವೈಫಲ್ಯವೇ ಕಾರಣ ಎಂದು ಆರೋಪಿಸಿದರು.

ಹಾಲಿನ ದರ ಏರಿಕೆಗೂ ಆಕ್ಷೇಪ

ಹಾಲು ಉತ್ಪಾದಕರ ಪ್ರೋತ್ಸಾಹಧನವನ್ನು 7 ರೂ.ಗೆ ಹೆಚ್ಚಿಸುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ ಅದನ್ನು ಈಡೇರಿಸದೆ ಜನರ ಮೇಲೆ ಬೆಲೆ ಏರಿಕೆಯ ಹೊರೆ ಹಾಕಿದೆ. ನಂದಿನಿ ಹಾಲಿನ ವಿವಿಧ ಮಾದರಿಗಳ ದರದಲ್ಲಿ 12ರಿಂದ 13 ರೂ.ವರೆಗೆ ಹೆಚ್ಚಳ ಮಾಡಲಾಗಿದೆ. ಒಂದು ಕೆ.ಜಿ. ಮೊಸರಿನ ದರ 25 ರೂ. ಹಾಗೂ ಲಸ್ಸಿ ದರ 14 ರೂ.ನಿಂದ 16 ರೂ.ಗೆ ಏರಿಕೆಯಾಗಿದೆ ಎಂದು ಹೇಳಿದರು.

ದೈನಂದಿನ ಆಹಾರ ಪದಾರ್ಥಗಳ ಬೆಲೆ ಹೆಚ್ಚಳದಿಂದ ಒಂದು ಕುಟುಂಬಕ್ಕೆ ತಿಂಗಳಿಗೆ ಸುಮಾರು 390 ರೂ. ಹೆಚ್ಚುವರಿ ಖರ್ಚು ಬೀಳಲಿದೆ. ಜನರಿಗಾಗಿ ಸರ್ಕಾರ ಎಂದು ಹೇಳಿಕೊಂಡವರು ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಟೀಕಿಸಿದರು.

ಶ್ವೇತಪತ್ರ ಬಿಡುಗಡೆಗೆ ಆಗ್ರಹ

ಬ್ರ್ಯಾಂಡ್ ಬೆಂಗಳೂರು, ಸುರಂಗ ರಸ್ತೆ, ಮೇಕೆದಾಟು ಯೋಜನೆ ಹಾಗೂ ಬರ ಪರಿಹಾರದ ಬಗ್ಗೆ ಸರ್ಕಾರ ಹಲವು ಭರವಸೆಗಳನ್ನು ನೀಡಿದರೂ ಅವುಗಳನ್ನು ಈಡೇರಿಸಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಖಜಾನೆಯಲ್ಲಿರುವ ಹಣದ ಕುರಿತು ಸರ್ಕಾರ ಶ್ವೇತಪತ್ರ ಬಿಡುಗಡೆ ಮಾಡಬೇಕು. ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಲು ಸಾಧ್ಯವಿಲ್ಲ. ಹಾಗೆ ಮಾಡಿದ್ದರೆ ಅದು ಅಕ್ರಮವಾಗುತ್ತದೆ ಎಂದು ಅಶೋಕ ಹೇಳಿದರು.

ದರ ಏರಿಕೆ ವಿರುದ್ಧ ವಿಧಾನಮಂಡಲ ಅಧಿವೇಶನದಲ್ಲೂ ಹೋರಾಟ ನಡೆಸಿದ್ದು, ಮುಂದೆಯೂ ಹೋರಾಟ ಮುಂದುವರಿಸಲಾಗುವುದು. ಸಾರ್ವಜನಿಕರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ಬಿಜೆಪಿ ವತಿಯಿಂದ ನವೆಂಬರ್ 5ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳು ಹಾಗೂ ಬೆಂಗಳೂರಿನಲ್ಲಿ ದರ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande