
ನವದೆಹಲಿ, 04 ನವೆಂಬರ್ (ಹಿ.ಸ.):
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿಗಳ ಹೆಸರಿನಲ್ಲಿ ಜನರಿಗೆ ಆಮಿಷವೊಡ್ಡಿ, ಮತ್ತೊಂದೆಡೆ ಬೆಲೆ ಏರಿಕೆಯ ಮೂಲಕ ಜನರಿಂದ ಹತ್ತು ಪಟ್ಟು ಹಣ ವಸೂಲಿ ಮಾಡುತ್ತಿದೆ. ಆರ್ಥಿಕವಾಗಿ ಸಂಪದ್ಭರಿತವಾಗಿದ್ದ ರಾಜ್ಯವನ್ನು ಅಧಃಪತನದತ್ತ ಕೊಂಡೊಯ್ದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಅಧಿಕಾರಕ್ಕೆ ಬರುವ ಮುನ್ನ ಉಚಿತ ಪ್ರಯಾಣದ ಭರವಸೆ ನೀಡಿ ಪ್ರಚಾರ ಗಿಟ್ಟಿಸಿಕೊಂಡ ಕಾಂಗ್ರೆಸ್ ಸರ್ಕಾರ, ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳನ್ನು ಆರ್ಥಿಕ ದಿವಾಳಿತನದ ಅಂಚಿಗೆ ತಳ್ಳಿದೆ ಎಂದು ಅವರು ಟೀಕಿಸಿದ್ದಾರೆ.
ಸಾರಿಗೆ ಸಂಸ್ಥೆಗಳಲ್ಲಿ ಬಸ್‌ಗಳಿಗೆ ಡೀಸೆಲ್ ಹಾಕಿಸಲೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರುವ ಸರ್ಕಾರ, ಸಾರಿಗೆ ನಿಗಮಗಳನ್ನು ನಷ್ಟದ ಸುಳಿಗೆ ಸಿಲುಕಿಸಿದೆ. ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಿದ್ದ ಸಾರಿಗೆ ಸಂಸ್ಥೆಗಳು ಕಾಂಗ್ರೆಸ್ ಆಡಳಿತಕ್ಕೆ ಬಂದ ಮೂರೂವರೆ ವರ್ಷಗಳಲ್ಲೇ ನಷ್ಟ ಅನುಭವಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಆರ್ಥಿಕತೆಯನ್ನು ಹಾಳುಗೆಡವಿರುವ ಕಾಂಗ್ರೆಸ್ ಸರ್ಕಾರ ತನ್ನ ಅವೈಜ್ಞಾನಿಕ ನೀತಿ ಹಾಗೂ ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಅಗತ್ಯ ವಸ್ತುಗಳು ಮತ್ತು ಸೇವೆಗಳ ಬೆಲೆ ಹೆಚ್ಚಿಸುತ್ತಿದೆ. ನಂದಿನಿ ಹಾಲು, ಮೊಸರು, ತುಪ್ಪದ ದರ ಏರಿಸಿದ ಬೆನ್ನಲ್ಲೇ ಇದೀಗ ಬಸ್ ಪ್ರಯಾಣ ದರವನ್ನೂ ಭಾರೀ ಪ್ರಮಾಣದಲ್ಲಿ ಹೆಚ್ಚಿಸಿ ಬಡವರು, ವಿದ್ಯಾರ್ಥಿಗಳು ಹಾಗೂ ಕಡಿಮೆ ಸಂಬಳ ಪಡೆಯುವ ಉದ್ಯೋಗಿಗಳಿಗೆ ಮತ್ತಷ್ಟು ಹೊರೆ ಹೊರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿ ಶೂನ್ಯ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ರಾಜ್ಯದ ಬೊಕ್ಕಸವನ್ನು ಬೆಳೆಸುವ ಬದಲು ಖಜಾನೆಯನ್ನು ಬರಿದು ಮಾಡಲಾಗಿದೆ. ಆರ್ಥಿಕವಾಗಿ ಸದೃಢವಾಗಿದ್ದ ರಾಜ್ಯವನ್ನು ಅಧಃಪತನದತ್ತ ಕೊಂಡೊಯ್ದು ದುರಾಡಳಿತ ನಡೆಸಲಾಗುತ್ತಿದೆ ಎಂದು ಜೋಶಿ ದೂರಿದ್ದಾರೆ.
ಒಂದೆಡೆ ಉಚಿತ ಗ್ಯಾರಂಟಿಗಳ ಹೆಸರಿನಲ್ಲಿ ಜನರನ್ನು ಆಕರ್ಷಿಸುತ್ತಾ, ಮತ್ತೊಂದೆಡೆ ಜನರ ದೈನಂದಿನ ಬದುಕಿಗೆ ಅಗತ್ಯವಾದ ವಸ್ತುಗಳು ಮತ್ತು ಸೇವೆಗಳ ಬೆಲೆ ಹೆಚ್ಚಿಸುವ ಮೂಲಕ ಅವರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಇದು ಯಾವ ರೀತಿಯ ಗ್ಯಾರಂಟಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.