
ಮದ್ದೂರು, 03 ನವೆಂಬರ್ (ಹಿ.ಸ.):
ಸ್ನೇಹಿತರ ನಡುವಿನ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ಯುವಕನನ್ನೇ ಡ್ರ್ಯಾಗನ್ನಿಂದ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಕೆಮ್ಮಣ್ಣು ನಾಲೆ ಪ್ರದೇಶದ ಸಿದ್ಧಾರ್ಥ ನಗರದಲ್ಲಿ ನಡೆದಿದೆ.
ಮದ್ದೂರು ಪಟ್ಟಣದ ನಂದನ್ (25) ಕೊಲೆಯಾದ ಯುವಕ. ಹಣದ ವಿಚಾರವಾಗಿ ರಘು ಹಾಗೂ ಪ್ರಕಾಶ್ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ.
ಈ ವೇಳೆ ಇಬ್ಬರ ನಡುವಿನ ಜಗಳ ಬಿಡಿಸಲು ನಂದನ್ ಮುಂದಾಗಿದ್ದಾನೆ. ಆದರೆ, ಜಗಳ ಬಿಡಿಸಲು ಬಂದಿದ್ದ ನಂದನ್ ಮೇಲೆಯೇ ಆರೋಪಿಗಳು ಡ್ರ್ಯಾಗನ್ನಿಂದ ಹಲ್ಲೆ ನಡೆಸಿ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ನೇಹಿತರ ನಡುವಿನ ಗಲಾಟೆ ಬಿಡಿಸಲು ಹೋಗಿದ್ದ ಆತನೇ ಕೊಲೆಯಾಗಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಇನ್ನು ಮೃತ ನಂದನ್ ಅವರ ಚಿಕ್ಕಮ್ಮ ಆರೋಪಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಯಾರೇ ಸ್ನೇಹಿತರು ಕರೆದರೂ ಅವರೊಂದಿಗೆ ಹೋಗಬೇಡಿ. ಸ್ನೇಹ ಎಂದು ಹೇಳಿಕೊಂಡು ನಮ್ಮ ಮಗನನ್ನು ಕೊಲೆ ಮಾಡಿದ್ದಾರೆ. ನಮಗೆ ನಮ್ಮ ಮಗನ ಸಾವಿಗೆ ನ್ಯಾಯ ಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕಣ್ಣೀರಿಟ್ಟಿದ್ದಾರೆ.
ಸ್ನೇಹಿತರ ನಡುವಿನ ಜಗಳ ಬಿಡಿಸಲು ಹೋಗಿದ್ದ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ಮದ್ದೂರು ಪಟ್ಟಣದಲ್ಲಿ ಆತಂಕ ಮೂಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R