
ನವದೆಹಲಿ/ಕಠ್ಮಂಡು, 03 ನವೆಂಬರ್(ಹಿ.ಸ.):
ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ನವೆಂಬರ್ ೪ ಮತ್ತು ೫ರಂದು ನೇಪಾಳಕ್ಕೆ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಉಭಯ ದೇಶಗಳ ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಜಾಗತಿಕ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಅಲ್ಲದೆ, ನೇಪಾಳದ ಪ್ರಮುಖ ನಾಯಕರನ್ನು ಭೇಟಿಯಾಗಲಿದ್ದಾರೆ.
ಭಾರತದ ವಿದೇಶಾಂಗ ಸಚಿವಾಲಯದ ಪ್ರಕಾರ, ಭಾರತ ಮತ್ತು ನೇಪಾಳದ ನಡುವೆ ಬಲವಾದ ಹಾಗೂ ಸ್ನೇಹಪೂರ್ಣ ಸಂಬಂಧವಿದ್ದು, ವಿವಿಧ ಕ್ಷೇತ್ರಗಳ ಸಹಕಾರದಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ. ವಿದೇಶಾಂಗ ಕಾರ್ಯದರ್ಶಿಯವರ ಈ ಭೇಟಿಯು ಉಭಯ ದೇಶಗಳ ನಡುವಿನ ನಿರಂತರ ಉನ್ನತಮಟ್ಟದ ಮಾತುಕತೆಗಳ ಪರಂಪರೆಯನ್ನು ಮುಂದುವರಿಸುವುದರ ಜತೆಗೆ, ಸಮಗ್ರ ದ್ವಿಪಕ್ಷೀಯ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲಿದೆ.
ನೇಪಾಳದ ವಿದೇಶಾಂಗ ಸಚಿವಾಲಯದ ಮಾಹಿತಿ ಪ್ರಕಾರ, ವಿಕ್ರಮ್ ಮಿಸ್ರಿ ಅವರು ನೇಪಾಳದ ವಿದೇಶಾಂಗ ಕಾರ್ಯದರ್ಶಿ ಅಮೃತ್ ರೈ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಭಾರತ-ನೇಪಾಳ ಸಂಬಂಧಗಳ ವಿವಿಧ ಆಯಾಮಗಳು ಹಾಗೂ ಪರಸ್ಪರ ಹಿತಾಸಕ್ತಿಯ ವಿಚಾರಗಳ ಕುರಿತು ಅಭಿಪ್ರಾಯ ವಿನಿಮಯ ನಡೆಯಲಿದೆ.
ಉಭಯ ದೇಶಗಳ ನಡುವಿನ ದೀರ್ಘಕಾಲದ ನಿಕಟ ಮತ್ತು ಸ್ನೇಹಪೂರ್ಣ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಮಾರ್ಗೋಪಾಯಗಳ ಬಗ್ಗೆಯೂ ಚರ್ಚೆ ನಡೆಯುವ ನಿರೀಕ್ಷೆಯಿದೆ.
ನೇಪಾಳದ ಪ್ರಧಾನಿ ಬಾಲೇಂದ್ರ ಶಾ, ವಿದೇಶಾಂಗ ಸಚಿವ ಶಿಶಿರ್ ಖನಾಲ್ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ವಿಕ್ರಮ್ ಮಿಸ್ರಿ ಸೌಜನ್ಯಯುತವಾಗಿ ಭೇಟಿ ಮಾಡಲಿದ್ದಾರೆ. ನವೆಂಬರ್ ೫ರಂದು ಅವರು ನವದೆಹಲಿಗೆ ಮರಳಲಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.