ಆಂಧ್ರಪ್ರದೇಶದ ಒಂಗೋಲ್ ಬಳಿ ಅಪ್ಪಳಿಸಿದ ಮುರಾಸು ಚಂಡಮಾರುತ : ೨೧ ವಿಮಾನಗಳ ಹಾರಾಟ ರದ್ದು
ಒಂಗೋಲ್(ಆಂಧ್ರ),03 ನವೆಂಬರ್ (ಹಿ.ಸ.): ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ತೀವ್ರ ಚಂಡಮಾರುತ ‘ಮುರಾಸು’ ಮಂಗಳವಾರ ಮಧ್ಯರಾತ್ರಿ ಬಳಿಕ ಸುಮಾರು ೧ ಗಂಟೆಗೆ ಆಂಧ್ರಪ್ರದೇಶದ ಒಂಗೋಲ್ ಸಮೀಪ ಕರಾವಳಿಗೆ ಅಪ್ಪಳಿಸುವ ಪ್ರಕ್ರಿಯೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಗಂಟೆಗೆ ೧೧೦ರಿಂದ ೧೨೦ ಕಿ.ಮೀ. ವೇಗದಲ್ಲಿ ಬಿರ
आंध्र प्रदेश के ओंगोल शहर में मंगलवार को गंभीर चक्रवाती तूफान 'मुरासु' का जोरदार असर हुआ। तेज हवा चली। फोटो - इंटरनेट मीडिया


सांकेतिक।


ಒಂಗೋಲ್(ಆಂಧ್ರ),03 ನವೆಂಬರ್ (ಹಿ.ಸ.):

ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ತೀವ್ರ ಚಂಡಮಾರುತ ‘ಮುರಾಸು’ ಮಂಗಳವಾರ ಮಧ್ಯರಾತ್ರಿ ಬಳಿಕ ಸುಮಾರು ೧ ಗಂಟೆಗೆ ಆಂಧ್ರಪ್ರದೇಶದ ಒಂಗೋಲ್ ಸಮೀಪ ಕರಾವಳಿಗೆ ಅಪ್ಪಳಿಸುವ ಪ್ರಕ್ರಿಯೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಗಂಟೆಗೆ ೧೧೦ರಿಂದ ೧೨೦ ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಿದೆ. ಚಂಡಮಾರುತದ ಪರಿಣಾಮ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ೨೧ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ.

ಭಾರತೀಯ ಹವಾಮಾನ ಇಲಾಖೆ ಅಧಿಕೃತ ಪ್ರಕಟಣೆಯ ಪ್ರಕಾರ, ಮಂಗಳವಾರ ಬೆಳಗಿನ ಜಾವ ೩ ಗಂಟೆಯ ವೇಳೆಗೆ ಚಂಡಮಾರುತದ ಉತ್ತರ ಭಾಗ ಭೂಭಾಗವನ್ನು ಪ್ರವೇಶಿಸಿದೆ. ಚಂಡಮಾರುತದ ಕೇಂದ್ರದಲ್ಲಿರುವ ದಟ್ಟ ಮೋಡಗಳೂ ಕರಾವಳಿಯತ್ತ ಸಾಗುತ್ತಿವೆ. ಸಾಮಾನ್ಯ ಉಬ್ಬರವಿಳಿತದ ಮಟ್ಟಕ್ಕಿಂತ ೧ರಿಂದ ೧.೫ ಮೀಟರ್ ಎತ್ತರದ ಸಮುದ್ರದ ಅಲೆಗಳು ಏಳುವ ಸಾಧ್ಯತೆಯಿದೆ. ಇದರಿಂದ ದಕ್ಷಿಣ ಆಂಧ್ರಪ್ರದೇಶದ ಕರಾವಳಿಯ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಆತಂಕವಿದೆ.

ಬಾಪಟ್ಲ, ಕೃಷ್ಣಾ ಮತ್ತು ಪ್ರಕಾಶಂ ಜಿಲ್ಲೆಗಳ ಕರಾವಳಿಯಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆಯಿದೆ. ಮುಂದಿನ ೧೨ ಗಂಟೆಗಳಲ್ಲಿ ದಕ್ಷಿಣ ಆಂಧ್ರಪ್ರದೇಶದ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಒಂಗೋಲ್‌ನ ಕೋಥಪಟ್ನಂ ಕಡಲತೀರದ ಪ್ರದೇಶದಲ್ಲಿ ಈಗಾಗಲೇ ಧಾರಾಕಾರ ಮಳೆಯಾಗುತ್ತಿದ್ದು, ಬಿರುಗಾಳಿಯ ಅಬ್ಬರ ಮುಂದುವರಿದಿದೆ.

ಚಂಡಮಾರುತದ ಪರಿಣಾಮ ವಿಜಯವಾಡ, ತಿರುಪತಿ ಮತ್ತು ವಿಶಾಖಪಟ್ಟಣ ವಿಮಾನ ನಿಲ್ದಾಣಗಳಿಂದ ಕನಿಷ್ಠ ೨೧ ದೇಶೀಯ ವಿಮಾನಗಳ ಹಾರಾಟ ರದ್ದಾಗಿದೆ. ನವೆಂಬರ್ ೨ರಂದು ಚೆನ್ನೈ ವಿಮಾನ ನಿಲ್ದಾಣದಿಂದ ಹೊರಡುವ ಮತ್ತು ಅಲ್ಲಿಗೆ ಆಗಮಿಸುವ ೧೧ ವಿಮಾನಗಳು ಹಾಗೂ ಗನ್ನವರಂ ವಿಮಾನ ನಿಲ್ದಾಣದಿಂದ ಇಂಡಿಗೊ ಸಂಸ್ಥೆಯ ೧೦ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ.

ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ

ಚಂಡಮಾರುತ ಕರಾವಳಿಗೆ ಅಪ್ಪಳಿಸುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಸಂವಾದ ನಡೆಸಿ ಪರಿಸ್ಥಿತಿಯ ಮಾಹಿತಿ ಪಡೆದರು. ಅಧಿಕಾರಿಗಳು ನಿರಂತರ ಕಟ್ಟೆಚ್ಚರ ವಹಿಸಬೇಕು ಮತ್ತು ಚಂಡಮಾರುತದಿಂದ ಯಾವುದೇ ಜೀವಹಾನಿಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ನೆಲ್ಲೂರು, ಪ್ರಕಾಶಂ ಮತ್ತು ಕೋಥಪಟ್ನಂ ಕರಾವಳಿ ಪ್ರದೇಶಗಳಲ್ಲಿ ಮಳೆ ಹಾಗೂ ಗಾಳಿಯ ತೀವ್ರತೆಯ ಕುರಿತು ಮಾಹಿತಿ ಪಡೆದ ಅವರು, ಸ್ವರ್ಣ ಗ್ರಾಮ ಮತ್ತು ಸ್ವರ್ಣ ವಾರ್ಡ್ ಕಚೇರಿಗಳ ಸಿಬ್ಬಂದಿ ಚಂಡಮಾರುತದ ಮುನ್ನೆಚ್ಚರಿಕೆ ಮಾಹಿತಿಯನ್ನು ಜನರಿಗೆ ತಲುಪಿಸುವಂತೆ ನಿರ್ದೇಶನ ನೀಡಿದರು.

ಚಂಡಮಾರುತ ಪೀಡಿತ ಪ್ರದೇಶಗಳ ಜನರು ವಿದ್ಯುತ್ ವ್ಯತ್ಯಯ, ಮರಗಳು ಉರುಳುವುದು, ಗೋಡೆ ಕುಸಿತ, ಜಲಾವೃತ ಸೇರಿದಂತೆ ಯಾವುದೇ ತುರ್ತು ಸಮಸ್ಯೆಗಳ ಕುರಿತು 9552300009 ಸಂಖ್ಯೆಗೆ ವಾಟ್ಸ್‌ಆ್ಯಪ್ ಮೂಲಕ ಮಾಹಿತಿ ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಖ್ಯೆಗೆ ‘ಹಾಯ್’ ಎಂದು ಸಂದೇಶ ಕಳುಹಿಸಿ, ಸೇವೆಗಳ ಆಯ್ಕೆಯಲ್ಲಿ ‘ಮುರಾಸು ಚಂಡಮಾರುತ ಸಮಸ್ಯೆಗಳು’ ವಿಭಾಗವನ್ನು ಆಯ್ಕೆ ಮಾಡಬೇಕು. ಬಳಿಕ ಸಮಸ್ಯೆ ವರದಿ ಆಯ್ಕೆ ಮಾಡಿಕೊಂಡು ಹೆಸರು, ಜಿಲ್ಲೆ ಮತ್ತು ಮಂಡಲದ ವಿವರಗಳನ್ನು ದಾಖಲಿಸಬೇಕು ಎಂದು ಸೂಚಿಸಲಾಗಿದೆ.

ನೆರವಿಗೆ ಧಾವಿಸಿದ ತಮಿಳುನಾಡು, ಕರ್ನಾಟಕ

ಚಂಡಮಾರುತದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ನೆರವಿಗೆ ಮುಂದಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮೂರು ತಂಡಗಳ ೯೦ ಸಿಬ್ಬಂದಿ ಹಾಗೂ ವಿದ್ಯುತ್ ಇಲಾಖೆಯ ೨೫ ತಂಡಗಳ ೫೦೦ ಸಿಬ್ಬಂದಿಯನ್ನು ನೆರವಿಗಾಗಿ ಕಳುಹಿಸಿದೆ. ಕರ್ನಾಟಕ ಸರ್ಕಾರವೂ ೫೦೦ ನುರಿತ ವಿದ್ಯುತ್ ಸಿಬ್ಬಂದಿ ಹಾಗೂ ಅಗತ್ಯ ಉಪಕರಣಗಳನ್ನು ಕಳುಹಿಸುವುದಾಗಿ ಘೋಷಿಸಿದೆ.

ವಿದ್ಯುತ್ ಸರಬರಾಜು ವ್ಯವಸ್ಥೆಗೆ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ವಿದ್ಯುತ್ ಕಂಪನಿಗಳನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆ.

ಒಡಿಶಾದಲ್ಲೂ ಭಾರೀ ಮಳೆ ಮುನ್ಸೂಚನೆ

ಚಂಡಮಾರುತದ ಪರಿಣಾಮ ಒಡಿಶಾದ ದಕ್ಷಿಣ ಭಾಗದ ಗಂಜಾಂ, ಗಜಪತಿ, ರಾಯಗಡ, ಕೊರಾಪುಟ್ ಮತ್ತು ಮಲ್ಕಾನಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಕೆಲವು ದಕ್ಷಿಣ ಜಿಲ್ಲೆಗಳಲ್ಲಿ ನವೆಂಬರ್ ೩ರವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಪಾಯದ ಪ್ರದೇಶಗಳಲ್ಲಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯವನ್ನೂ ಸರ್ಕಾರ ಚುರುಕುಗೊಳಿಸಿದೆ.

ತಮಿಳುನಾಡಿನ ಚೆನ್ನೈ, ಚೆಂಗಲ್ಪಟ್ಟು ಮತ್ತು ತಿರುವಳ್ಳೂರು ಜಿಲ್ಲೆಗಳ ಹಲವು ಭಾಗಗಳಲ್ಲಿ ಭಾನುವಾರ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದೆ. ಚೆನ್ನೈ ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದ್ದು, ಚೆಂಗಲ್ಪಟ್ಟು, ಕಾಂಚೀಪುರಂ, ರಾಣಿಪೇಟೆ, ವೇಲೂರು ಮತ್ತು ನೀಲಗಿರಿ ಜಿಲ್ಲೆಗಳಲ್ಲೂ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.

ಬಂಗಾಳ ಕೊಲ್ಲಿಯಲ್ಲಿ ಭಾನುವಾರ ಉಂಟಾಗಿದ್ದ ತೀವ್ರ ವಾಯುಭಾರ ಕುಸಿತ ಚಂಡಮಾರುತವಾಗಿ ಬದಲಾಗಿತ್ತು. ‘ಮುರಾಸು’ ಎಂದರೆ ಯುದ್ಧದ ನಗಾರಿ ಎಂಬ ಅರ್ಥವಿದೆ. ನವೆಂಬರ್ ೩ರ ಬೆಳಗ್ಗೆ ಆಂಧ್ರಪ್ರದೇಶದ ನೆಲ್ಲೂರು ಮತ್ತು ನರಸಾಪುರ ನಡುವಿನ ಒಂಗೋಲ್ ಸಮೀಪ ಕರಾವಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈ ಹಿಂದೆ ಮುನ್ಸೂಚನೆ ನೀಡಿತ್ತು. ಅದಕ್ಕೆ ಅನುಗುಣವಾಗಿ ಕರಾವಳಿ ರಾಜ್ಯಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳ ಸಿದ್ಧತೆ ಕೈಗೊಳ್ಳಲಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande