ಅಮೆರಿಕದಲ್ಲಿ ಭೀಕರ ಬಿರುಗಾಳಿಗೆ ತತ್ತರಿಸಿದ ಜನಜೀವನ: 9 ಲಕ್ಷಕ್ಕೂ ಅಧಿಕ ಮನೆಗಳ ವಿದ್ಯುತ್ ಸಂಪರ್ಕ ಕಡಿತ
ಈಶಾನ್ಯ ಮತ್ತು ಮಧ್ಯಪಶ್ಚಿಮ ಭಾಗಗಳಲ್ಲಿ ಪ್ರವಾಹ; ಸಾವಿರಾರು ವಿಮಾನಗಳ ಹಾರಾಟಕ್ಕೆ ಅಡ್ಡಿ, ನ್ಯೂಯಾರ್ಕ್ನ ಪ್ರಸಿದ್ಧ ಮೆಸೀಸ್ ಮೆರವಣಿಗೆ ಮುಂದೂಡಿಕೆ
न्यूयॉर्क के  फार रॉकअवे में सीगर्ट बुलेवार्ड के पास बीच 32वीं स्ट्रीट पर टोयोटा कैमरी बाढ़  में फंस गई।  फोटो - इंटरनेट मीडिया


ವಾಷಿಂಗ್ಟನ್ (ಯುಎಸ್) 27 ನವೆಂಬರ್ (ಹಿ.ಸ.):

ಅಮೆರಿಕದಲ್ಲಿ ಥ್ಯಾಂಕ್ಸ್‌ಗಿವಿಂಗ್ ಹಬ್ಬದ ಸಂದರ್ಭದಲ್ಲಿ ಅಪ್ಪಳಿಸಿದ ಭೀಕರ ಬಿರುಗಾಳಿಯಿಂದ ಪೂರ್ವ ಕರಾವಳಿ ಮತ್ತು ಮಧ್ಯಪಶ್ಚಿಮ ಭಾಗಗಳ ಹಲವು ಪ್ರದೇಶಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆ, ಬಿರುಗಾಳಿ ಹಾಗೂ ಪ್ರವಾಹದಿಂದ ವ್ಯಾಪಕ ಹಾನಿಯಾಗಿದ್ದು, 9 ಲಕ್ಷಕ್ಕೂ ಅಧಿಕ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹಬ್ಬದ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಸುತ್ತಿದ್ದ ಸಾವಿರಾರು ಜನರು ತೀವ್ರ ತೊಂದರೆ ಅನುಭವಿಸಿದ್ದಾರೆ. ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ನ ಪ್ರಸಿದ್ಧ ಮೆಸೀಸ್ ಥ್ಯಾಂಕ್ಸ್‌ಗಿವಿಂಗ್ ದಿನದ ಮೆರವಣಿಗೆಯನ್ನೂ ಶನಿವಾರಕ್ಕೆ ಮುಂದೂಡಲಾಗಿದೆ.

ಸಿಬಿಎಸ್ ನ್ಯೂಸ್ ವರದಿ ಪ್ರಕಾರ, ವಿದ್ಯುತ್ ವ್ಯತ್ಯಯದ ಕುರಿತು ಮಾಹಿತಿ ನೀಡುವ ಪವರ್‌ಔಟೇಜ್ ಡಾಟ್ ಯುಎಸ್ ಜಾಲತಾಣದ ಅಂಕಿಅಂಶಗಳ ಪ್ರಕಾರ, ಗುರುವಾರ ಸಂಜೆಯ ವೇಳೆಗೆ ಅಮೆರಿಕದ ಮಧ್ಯಪಶ್ಚಿಮ ಮತ್ತು ಈಶಾನ್ಯ ಭಾಗಗಳಲ್ಲಿ 9 ಲಕ್ಷಕ್ಕೂ ಅಧಿಕ ವಿದ್ಯುತ್ ಗ್ರಾಹಕರ ಮನೆಗಳಲ್ಲಿ ಸಂಪರ್ಕ ಕಡಿತಗೊಂಡಿತ್ತು. ಪೆನ್ಸಿಲ್ವೇನಿಯಾದಲ್ಲಿಯೇ 2 ಲಕ್ಷಕ್ಕೂ ಅಧಿಕ ಗ್ರಾಹಕರು ವಿದ್ಯುತ್ ಇಲ್ಲದೆ ಪರದಾಡಿದರು. ವರ್ಜೀನಿಯಾ ಮತ್ತು ಮಿಸೌರಿ ರಾಜ್ಯಗಳಲ್ಲಿಯೂ ತಲಾ ಒಂದು ಲಕ್ಷಕ್ಕೂ ಅಧಿಕ ಗ್ರಾಹಕರು ವಿದ್ಯುತ್ ವ್ಯತ್ಯಯ ಎದುರಿಸಿದರು.

ವಿಮಾನಗಳ ಸಂಚಾರದ ಮೇಲ್ವಿಚಾರಣೆ ನಡೆಸುವ ಫ್ಲೈಟ್‌ಅವೇರ್ ಜಾಲತಾಣದ ಪ್ರಕಾರ, ಗುರುವಾರ ಸಂಜೆಯ ವೇಳೆಗೆ ಅಮೆರಿಕಕ್ಕೆ ಆಗಮಿಸುವ ಮತ್ತು ಅಲ್ಲಿಂದ ಹೊರಡುವ 2 ಸಾವಿರಕ್ಕೂ ಅಧಿಕ ವಿಮಾನಗಳ ಸಂಚಾರ ವಿಳಂಬವಾಗಿತ್ತು. 420ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಗೊಂಡಿತ್ತು.

ಬಿರುಗಾಳಿಯಿಂದ ಪೂರ್ವ ಕರಾವಳಿಯ ಹಲವು ಪ್ರದೇಶಗಳಲ್ಲಿ ಭಾರೀ ಮಳೆ, ಬಿರುಗಾಳಿ ಹಾಗೂ ಪ್ರವಾಹ ಉಂಟಾಗಿತ್ತು. ನ್ಯೂಜೆರ್ಸಿ ರಾಜ್ಯದ ಗವರ್ನರ್ ಮಿಕ್ಕಿ ಶೆರಿಲ್ ಬುಧವಾರ ರಾತ್ರಿ ಇಡೀ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ನ್ಯೂಯಾರ್ಕ್‌ನ ಕೆಲವು ಪ್ರದೇಶಗಳಲ್ಲಿಯೂ ಗವರ್ನರ್ ಕ್ಯಾಥಿ ಹೊಚುಲ್ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದರು. ಉತ್ತರ ಜಾರ್ಜಿಯಾದಿಂದ ಮಧ್ಯ ಅಟ್ಲಾಂಟಿಕ್ ಪ್ರದೇಶ ಮತ್ತು ದಕ್ಷಿಣ ನ್ಯೂ ಇಂಗ್ಲೆಂಡ್‌ವರೆಗೆ ಬಿರುಗಾಳಿಯ ಮುನ್ಸೂಚನೆ ನೀಡಿ ಹವಾಮಾನ ಇಲಾಖೆ ಎಚ್ಚರಿಕೆ ಹೊರಡಿಸಿತ್ತು.

ನ್ಯೂಯಾರ್ಕ್‌ನಲ್ಲಿ ಪ್ರವಾಹದಿಂದ ಸಂಕಷ್ಟ

ನ್ಯೂಯಾರ್ಕ್ ನಗರದಲ್ಲಿ ಬಿರುಗಾಳಿ ಮತ್ತು ಪ್ರವಾಹ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಗುರುವಾರ ಬೆಳಗ್ಗೆ ನಗರದ ಮೇಯರ್ ಜೋರಾನ್ ಮಮ್ದಾನಿ ಮಾತನಾಡಿ, ಪ್ರವಾಹದ ನೀರಿನಲ್ಲಿ ಸಿಲುಕಿದ್ದ ಎರಡು ಕಾರುಗಳಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ತಿಳಿಸಿದರು. ನೀರು ತುಂಬಿದ ರಸ್ತೆಗಳಲ್ಲಿ ನಡೆದುಕೊಂಡು ಹೋಗುವುದು, ಸೈಕಲ್ ಸವಾರಿ ಮಾಡುವುದು ಅಥವಾ ವಾಹನ ಚಲಾಯಿಸುವ ಅಪಾಯಕ್ಕೆ ಯಾರೂ ಮುಂದಾಗಬಾರದು ಎಂದು ಮನವಿ ಮಾಡಿದರು.

ಎಲ್ಲರೂ ಸುರಕ್ಷಿತವಾಗಿರುವುದು ಮುಖ್ಯ. ಯಾವುದೇ ಗುರಿಗಿಂತ ನಿಮ್ಮ ಜೀವದ ಸುರಕ್ಷತೆ ಅಮೂಲ್ಯ ಎಂದು ಅವರು ಹೇಳಿದರು.

ನಗರದ ತುರ್ತು ನಿರ್ವಹಣಾ ಸಂಸ್ಥೆಯ ಪ್ರಕಾರ, ಥ್ಯಾಂಕ್ಸ್‌ಗಿವಿಂಗ್ ದಿನ ನ್ಯೂಯಾರ್ಕ್‌ನಲ್ಲಿ ಸುಮಾರು ಒಂದೂವರೆ ಇಂಚಿನಿಂದ ಎರಡು ಇಂಚಿನಷ್ಟು ಮಳೆಯಾಗಿತ್ತು. ಕೆಲವು ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಮೂರು ಇಂಚು ತಲುಪಿತ್ತು. ಸಮುದ್ರದಲ್ಲಿ ಉಬ್ಬರವಿಳಿತದ ಮಟ್ಟ ಹೆಚ್ಚಾದ ಪರಿಣಾಮ ಸ್ಟೇಟನ್ ಐಲ್ಯಾಂಡ್ ಮತ್ತು ಲಾಂಗ್ ಐಲ್ಯಾಂಡ್ ಸೇರಿದಂತೆ ಹಲವು ಕರಾವಳಿ ಪ್ರದೇಶಗಳು ಜಲಾವೃತಗೊಂಡಿದ್ದವು.

ಸೆಂಟ್ರಲ್ ಪಾರ್ಕ್‌ನಲ್ಲಿ ಗಂಟೆಗೆ 30 ಮೈಲಿಗೂ ಅಧಿಕ ವೇಗದಲ್ಲಿ ಗಾಳಿ ಬೀಸಿದ್ದರೆ, ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಗಾಳಿಯ ವೇಗ ಗಂಟೆಗೆ 56 ಮೈಲಿಗೆ ತಲುಪಿತ್ತು. ಬಿರುಗಾಳಿಯ ತೀವ್ರತೆಯನ್ನು ಗಮನಿಸಿ ಮೆಸೀಸ್ ಸಂಸ್ಥೆ ತನ್ನ ವಾರ್ಷಿಕ ಥ್ಯಾಂಕ್ಸ್‌ಗಿವಿಂಗ್ ಮೆರವಣಿಗೆಯನ್ನು ಶನಿವಾರಕ್ಕೆ ಮುಂದೂಡಿತು. ಮ್ಯಾನ್‌ಹ್ಯಾಟನ್‌ನ ಎತ್ತರದ ಕಟ್ಟಡಗಳ ನಡುವೆ ಬಲವಾದ ಗಾಳಿ ಬೀಸುತ್ತಿದ್ದರಿಂದ ಬೃಹತ್ ಆಕಾಶಬುಟ್ಟಿಗಳನ್ನು ನಿಯಂತ್ರಿಸುವುದು ಅಪಾಯಕಾರಿ ಎಂಬ ಆತಂಕ ಆಯೋಜಕರಲ್ಲಿತ್ತು.

ಮೆರವಣಿಗೆ ಮುಂದೂಡಿಕೆಯಿಂದ ಪ್ರಯಾಣಿಕರ ಯೋಜನೆ ಬದಲು

ಮೆರವಣಿಗೆಯಲ್ಲಿ ಭಾಗವಹಿಸಲು ಟೆಕ್ಸಾಸ್‌ನ ಪಿಯರ್‌ಲ್ಯಾಂಡ್‌ನಿಂದ ನ್ಯೂಯಾರ್ಕ್‌ಗೆ ಆಗಮಿಸಿದ್ದ ಪ್ರೌಢಶಾಲೆಯ ಮೆರವಣಿಗೆ ವಾದ್ಯವೃಂದಕ್ಕೂ ಪ್ರಯಾಣದ ಯೋಜನೆ ಬದಲಿಸಬೇಕಾಯಿತು. ವಾದ್ಯವೃಂದದ ಸುಮಾರು 500 ಸದಸ್ಯರು ನ್ಯೂಯಾರ್ಕ್‌ನಲ್ಲಿ ಹೆಚ್ಚುವರಿಯಾಗಿ ಎರಡು ರಾತ್ರಿ ಉಳಿಯಲು 3.5 ಲಕ್ಷ ಡಾಲರ್ ಸಂಗ್ರಹಿಸಲಾಗಿದೆ ಎಂದು ತಿಳಿಸಲಾಗಿದೆ.

ಪಿಯರ್‌ಲ್ಯಾಂಡ್ ಪ್ರೌಢಶಾಲೆಯ ಪ್ರೈಡ್ ಆಫ್ ಪಿಯರ್‌ಲ್ಯಾಂಡ್ ವಾದ್ಯವೃಂದದ ನಿರ್ದೇಶಕ ರಯಾನ್ ಡೆಮ್ಕೊವಿಚ್, ಈ ಬೆಳವಣಿಗೆ ತಮ್ಮ ಪಾಲಿಗೆ ದೊಡ್ಡ ಸವಾಲಾಗಿದೆ ಎಂದು ಹೇಳಿದ್ದಾರೆ.

ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಇತರರಿಗೂ ಪ್ರಯಾಣದ ಯೋಜನೆ ಬದಲಿಸಬೇಕಾಯಿತು. ಫ್ಲೋರಿಡಾದ ಮೇಕಪ್ ಕಲಾವಿದೆ ಅಮಾಂಡಾ ಆಂಡರ್ಸನ್ ಅವರು ಮೆರವಣಿಗೆಯಲ್ಲಿ ಭಾಗವಹಿಸುವ ಕಲಾವಿದರಿಗೆ ಅಲಂಕಾರ ಮಾಡಬೇಕಿತ್ತು. ಮೆರವಣಿಗೆ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ನಲ್ಲಿ ಮತ್ತೊಂದು ದಿನ ಉಳಿಯಲು ತಮ್ಮ ಹಿಂದಿರುಗುವ ವಿಮಾನದ ಟಿಕೆಟ್ ಮರು ಕಾಯ್ದಿರಿಸಿದರು.

ಮೆರವಣಿಗೆ ಮುಂದೂಡಿಕೆಯಾದ ಸುದ್ದಿ ತಿಳಿದಾಗ ತಾವು ಮೆಸೀಸ್ ಮಳಿಗೆಯಲ್ಲಿದ್ದೆ. ಅಲ್ಲಿ ಮೂವರು ಯುವತಿಯರು ಅಳುತ್ತಿರುವುದನ್ನು ಕಂಡೆ. ಅನೇಕರು ಬೇಸರದಿಂದ ಕುಳಿತಿದ್ದರು ಎಂದು ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಕರಾವಳಿ ಪ್ರದೇಶಗಳಲ್ಲಿ ಪ್ರವಾಹ: ವಾಹನ ಸವಾರರ ರಕ್ಷಣೆ

ಗುರುವಾರ ಬೆಳಗ್ಗೆ ಸಮುದ್ರದ ಉಬ್ಬರವಿಳಿತ ಹೆಚ್ಚಾದ ಹಿನ್ನೆಲೆಯಲ್ಲಿ ಉತ್ತರ ಕ್ಯಾರೊಲಿನಾದಿಂದ ನ್ಯೂಜೆರ್ಸಿವರೆಗಿನ ಹಲವು ಕರಾವಳಿ ಪಟ್ಟಣಗಳು ಮತ್ತು ನಗರಗಳಲ್ಲಿ ಪ್ರವಾಹ ಉಂಟಾಯಿತು. ರಸ್ತೆಗಳು ಜಲಾವೃತಗೊಂಡಿದ್ದರಿಂದ ನೀರಿನಲ್ಲಿ ಸಿಲುಕಿದ್ದ ವಾಹನಗಳಲ್ಲಿನ ಜನರನ್ನು ರಕ್ಷಣಾ ತಂಡಗಳು ಹೊರತಂದವು.

ನ್ಯೂಜೆರ್ಸಿಯ ಕರಾವಳಿ ಪಟ್ಟಣ ಎವಲಾನ್‌ನಲ್ಲಿ ದಾಖಲೆಯ ಮಟ್ಟದ ಪ್ರವಾಹ ಸಂಭವಿಸಿತ್ತು. ಪಟ್ಟಣದ ಆಡಳಿತಾಧಿಕಾರಿ ಸ್ಕಾಟ್ ಜೆ. ವಾಹ್ಲ್ ಮಾತನಾಡಿ, 2012ರಲ್ಲಿ ಸಂಭವಿಸಿದ್ದ ಭೀಕರ ಸ್ಯಾಂಡಿ ಚಂಡಮಾರುತದಷ್ಟು ಪರಿಸ್ಥಿತಿ ಗಂಭೀರವಾಗಿಲ್ಲದಿದ್ದರೂ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ ಎಂದು ತಿಳಿಸಿದರು.

ಪ್ರವಾಹದ ನೀರು ತನ್ನೊಂದಿಗೆ ಕಸ ಮತ್ತು ಅವಶೇಷಗಳನ್ನು ತಂದು ಕರಾವಳಿ ಸಮೀಪದ ರಸ್ತೆಗಳಲ್ಲಿ ಹರಡಿಸಿತ್ತು. ಕೆಲವರು ಸುರಕ್ಷತೆಗಾಗಿ ಅಳವಡಿಸಿದ್ದ ತಡೆಗೋಡೆಗಳನ್ನು ದಾಟಿ ನೀರು ತುಂಬಿದ ರಸ್ತೆಗಳಲ್ಲಿ ವಾಹನ ಚಲಾಯಿಸಿದ್ದರು. ಬಳಿಕ ರಕ್ಷಣಾ ಸಿಬ್ಬಂದಿ ಅವರನ್ನು ಸುರಕ್ಷಿತವಾಗಿ ಹೊರತಂದರು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿರುವ ವರದಿಯಾಗಿಲ್ಲ.

ನ್ಯೂಜೆರ್ಸಿಯ ಮತ್ತೊಂದು ಕರಾವಳಿ ನಗರ ಓಷನ್ ಸಿಟಿಯಲ್ಲಿಯೂ ಭಾರೀ ಮಳೆ ಮತ್ತು ಬಿರುಗಾಳಿಯಿಂದ ರಸ್ತೆಗಳು ಜಲಾವೃತಗೊಂಡಿದ್ದವು. ಸ್ಥಳೀಯ ನಿವಾಸಿ 54 ವರ್ಷದ ಲ್ಯಾನ್ಸ್ ಮಿಲ್ಲರ್ ಅವರ ಪ್ರಕಾರ, ತಮ್ಮ ಪ್ರದೇಶದಲ್ಲಿ ಸುಮಾರು ಒಂದು ಅಡಿಯಷ್ಟು ನೀರು ತುಂಬಿತ್ತು. ಇಂತಹ ಸಂದರ್ಭದಲ್ಲಿ ಸಮೀಪದ ದಿನಸಿ ಅಂಗಡಿಗೆ ಕಾರಿನಲ್ಲಿ ಹೋಗುವುದೂ ಅಪಾಯಕಾರಿಯಾಗಿತ್ತು. ವಾಹನ ಕೆಟ್ಟುಹೋಗುವ ಸಾಧ್ಯತೆಯೂ ಇತ್ತು ಎಂದು ಅವರು ತಿಳಿಸಿದ್ದಾರೆ.

ಹಬ್ಬಕ್ಕಾಗಿ ಅಗತ್ಯ ಆಹಾರ ಪದಾರ್ಥಗಳನ್ನು ಮೊದಲೇ ಸಿದ್ಧಪಡಿಸಿಕೊಂಡಿದ್ದರಿಂದ ಪತ್ನಿ ಮತ್ತು ಮಗಳೊಂದಿಗೆ ಮನೆಯಲ್ಲಿಯೇ ಹಬ್ಬ ಆಚರಿಸಲು ನಿರ್ಧರಿಸಿದ್ದರು. ಆದರೆ ಕೆಲವು ನೆರೆಹೊರೆಯವರ ಮನೆಗಳಿಗೆ ನೀರು ನುಗ್ಗಿದ್ದರಿಂದ ಅವರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು ಎಂದು ತಿಳಿಸಿದ್ದಾರೆ.

ಅಟ್ಲಾಂಟಿಕ್ ಸಿಟಿ ಸುತ್ತಮುತ್ತಲೂ ಜಲಾವೃತ

ನ್ಯೂಜೆರ್ಸಿಯ ಅಟ್ಲಾಂಟಿಕ್ ಸಿಟಿ ಸಮೀಪದ ಮಾರ್ಗೇಟ್ ಸಿಟಿಯ ಅಗ್ನಿಶಾಮಕ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ದೃಶ್ಯಗಳಲ್ಲಿ, ಭಾರೀ ಮಳೆ ಆರಂಭವಾಗುವ ಮೊದಲೇ ನಗರದ ರಸ್ತೆಗಳ ಮೇಲೆ ನೀರು ಹರಿಯುತ್ತಿರುವುದು ಕಂಡುಬಂದಿದೆ.

ಸಮುದ್ರದ ನೀರು ವೇಗವಾಗಿ ನಗರದತ್ತ ನುಗ್ಗುತ್ತಿತ್ತು. ಉಬ್ಬರವಿಳಿತದ ಗರಿಷ್ಠ ಮಟ್ಟ ತಲುಪಲು ಇನ್ನೂ ಒಂದು ಗಂಟೆ ಬಾಕಿಯಿದ್ದಾಗಲೇ ಮನೆಗಳ ಮೆಟ್ಟಿಲುಗಳವರೆಗೆ ನೀರು ತಲುಪಿತ್ತು ಎಂದು ಅಗ್ನಿಶಾಮಕ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಮುನ್ನೆಚ್ಚರಿಕೆಯಾಗಿ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳ ಪ್ರವೇಶದ್ವಾರಗಳಲ್ಲಿ ಮರಳು ತುಂಬಿದ ಚೀಲಗಳನ್ನು ಇರಿಸಲಾಗಿತ್ತು.

ಅಟ್ಲಾಂಟಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಒಂದಾದ ಯುಎಸ್ ಮಾರ್ಗ-30ರ ಒಂದು ಭಾಗವನ್ನು ತೀವ್ರ ಜಲಾವೃತದ ಕಾರಣ ಎರಡೂ ದಿಕ್ಕುಗಳಲ್ಲಿ ಬಂದ್ ಮಾಡಲಾಗಿತ್ತು. ಪರಿಸ್ಥಿತಿ ಸುಧಾರಿಸುವವರೆಗೆ ಜನರು ರಸ್ತೆಗೆ ಇಳಿಯಬಾರದು ಹಾಗೂ ನೀರು ತುಂಬಿದ ಮಾರ್ಗಗಳಲ್ಲಿ ಸಂಚರಿಸಲು ಅಥವಾ ಸುರಕ್ಷತಾ ತಡೆಗಳನ್ನು ದಾಟಲು ಪ್ರಯತ್ನಿಸಬಾರದು ಎಂದು ಪೊಲೀಸರು ಮನವಿ ಮಾಡಿದರು.

ಆಸ್ಪತ್ರೆಯಲ್ಲೂ ವಿದ್ಯುತ್ ವ್ಯತ್ಯಯ

ಪೆನ್ಸಿಲ್ವೇನಿಯಾದ ವೆಸ್ಟ್ ಚೆಸ್ಟರ್‌ನಲ್ಲಿರುವ ಚೆಸ್ಟರ್ ಕೌಂಟಿ ಆಸ್ಪತ್ರೆಯಲ್ಲಿ ಗುರುವಾರ ಮಧ್ಯಾಹ್ನ ಭಾಗಶಃ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಆದರೆ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಅಗತ್ಯ ಎದುರಾಗುವ ಮೊದಲೇ ವಿದ್ಯುತ್ ಸಂಪರ್ಕ ಮರುಸ್ಥಾಪಿಸಲಾಯಿತು.

ಫಿಲಡೆಲ್ಫಿಯಾದ ಉತ್ತರ ಭಾಗದಲ್ಲಿರುವ ಸ್ಪ್ರಿಂಗ್‌ಫೀಲ್ಡ್ ಟೌನ್‌ಶಿಪ್‌ನಲ್ಲಿ ಮರವೊಂದು ಪ್ರೊಪೇನ್ ಅನಿಲದ ಟ್ಯಾಂಕ್ ಮೇಲೆ ಬಿದ್ದಿತ್ತು. ಮುನ್ನೆಚ್ಚರಿಕೆಯ ಕ್ರಮವಾಗಿ ಸುತ್ತಮುತ್ತಲಿನ ನಿವಾಸಿಗಳಿಗೆ ಕೆಲಕಾಲ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿತ್ತು. ಬಳಿಕ ಈ ಸೂಚನೆಯನ್ನು ಹಿಂಪಡೆಯಲಾಯಿತು.

ವರ್ಜೀನಿಯಾದಲ್ಲಿ ಸೇತುವೆ ಬಂದ್, ಮೇರಿಲ್ಯಾಂಡ್‌ನಲ್ಲಿ ಕುಡಿಯುವ ನೀರಿನ ಆತಂಕ

ಬಿರುಗಾಳಿ ಮತ್ತು ಬಲವಾದ ಗಾಳಿಯಿಂದ ಹಲವು ರಾಜ್ಯಗಳಲ್ಲಿ ಪ್ರಮುಖ ರಸ್ತೆಗಳು ಹಾಗೂ ಸೇತುವೆಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ವರ್ಜೀನಿಯಾದಲ್ಲಿ ಚೆಸಪೀಕ್ ಕೊಲ್ಲಿಯ ಮೇಲಿರುವ ಸುಮಾರು 18 ಮೈಲಿ ಉದ್ದದ ಚೆಸಪೀಕ್ ಬೇ ಬ್ರಿಡ್ಜ್-ಟನಲ್ ಅನ್ನು ಗುರುವಾರ ಬೆಳಗ್ಗೆ ಬಲವಾದ ಗಾಳಿಯ ಕಾರಣ ಹಲವು ಗಂಟೆಗಳ ಕಾಲ ಮುಚ್ಚಲಾಗಿತ್ತು.

ಉತ್ತರ ಕ್ಯಾರೊಲಿನಾದ ಔಟರ್ ಬ್ಯಾಂಕ್ಸ್ ಪ್ರದೇಶದಲ್ಲಿ ಹ್ಯಾಟೆರಸ್ ದ್ವೀಪವನ್ನು ಮುಖ್ಯ ಭೂಭಾಗಕ್ಕೆ ಸಂಪರ್ಕಿಸುವ ಏಕೈಕ ಹೆದ್ದಾರಿಯಾದ ಎನ್‌ಸಿ-12ರ ಸಂಚಾರವನ್ನೂ ಸ್ಥಗಿತಗೊಳಿಸಲಾಗಿತ್ತು. ಸಮುದ್ರದ ನೀರು ಮರಳಿನ ದಿಬ್ಬಗಳನ್ನು ದಾಟಿ ರಸ್ತೆಗೆ ಹರಿದುಬಂದಿದ್ದರಿಂದ ಎರಡು ಪಥಗಳ ಈ ರಸ್ತೆಯಲ್ಲಿ ವಾಹನ ಸಂಚಾರ ಸಾಧ್ಯವಾಗಿರಲಿಲ್ಲ.

ಮೇರಿಲ್ಯಾಂಡ್‌ನಲ್ಲಿ ವಿದ್ಯುತ್ ವ್ಯತ್ಯಯದಿಂದ ಕುಡಿಯುವ ನೀರಿನ ಪೂರೈಕೆಗೂ ಅಡ್ಡಿಯಾಗುವ ಆತಂಕ ಎದುರಾಗಿತ್ತು. ವಾಷಿಂಗ್ಟನ್ ಉಪನಗರ ನೈರ್ಮಲ್ಯ ಆಯೋಗವು ಮಾಂಟ್‌ಗೊಮೆರಿ ಮತ್ತು ಪ್ರಿನ್ಸ್ ಜಾರ್ಜ್ ಕೌಂಟಿಗಳ ಸುಮಾರು 19 ಲಕ್ಷ ಗ್ರಾಹಕರಿಗೆ ನೀರಿನ ಬಳಕೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡಿತ್ತು.

ಬಿರುಗಾಳಿಯಿಂದ ಪದೇಪದೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದ್ದ ಕಾರಣ ಆಯೋಗದ ಎರಡು ನೀರು ಶುದ್ಧೀಕರಣ ಘಟಕಗಳ ಕಾರ್ಯಾಚರಣೆ ಸ್ಥಗಿತಗೊಳ್ಳುವ ಅಪಾಯ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಅಗತ್ಯಕ್ಕೆ ತಕ್ಕಷ್ಟು ಮಾತ್ರ ನೀರು ಬಳಸುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿತ್ತು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande