
ಬಾಗಲಕೋಟೆ , 26 ನವೆಂಬರ್ (ಹಿ.ಸ.)
ಕಬ್ಬು ಸಾಗಣೆ ಟ್ರ್ಯಾಕ್ಟರ್ಗಳನ್ನು ಚಾಲನೆ ಮಾಡುವಾಗ ಅತಿಯಾದ ಶಬ್ದದಲ್ಲಿ ಹಾಡುಗಳನ್ನು ಹಾಕಿಕೊಂಡು ಸಂಚರಿಸುವ ಚಾಲಕರ ವಿರುದ್ಧ ಲೋಕಾಪುರ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಟ್ರ್ಯಾಕ್ಟರ್ಗಳಲ್ಲಿ ಅಳವಡಿಸಿಕೊಂಡು ಜೋರಾಗಿ ಹಾಡುಗಳನ್ನು ಹಾಕಿಕೊಂಡು ಸಂಚರಿಸುತ್ತಿದ್ದ ವಾಹನಗಳನ್ನು ಗುರುತಿಸಿದ ಲೋಕಾಪುರ ಪಿಎಸ್ಐ ಅವರು, ಟೇಪ್ ರೆಕಾರ್ಡರ್ಗಳನ್ನು ಟೈರ್ ಕೆಳಗಿಟ್ಟು ಧ್ವಂಸಗೊಳಿಸುವ ಮೂಲಕ ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ. ಇಂತಹ ತಪ್ಪುಗಳನ್ನು ಪುನರಾವರ್ತಿಸದಂತೆ ಚಾಲಕರಿಗೆ ಸೂಚನೆ ನೀಡಿದ್ದಾರೆ.
ಕಬ್ಬು ಸಾಗಣೆ ಸಂದರ್ಭದಲ್ಲಿ ಟ್ರ್ಯಾಕ್ಟರ್ಗಳಲ್ಲಿ ಅತಿಯಾದ ಶಬ್ದದಲ್ಲಿ ಹಾಡುಗಳನ್ನು ಹಾಕಿಕೊಂಡು ಸಂಚರಿಸುವುದರಿಂದ ಇತರ ವಾಹನ ಸವಾರರಿಗೆ ತೊಂದರೆಯಾಗುವುದಲ್ಲದೆ, ಚಾಲಕರ ಗಮನ ಬೇರೆಡೆ ಸೆಳೆಯುವ ಸಾಧ್ಯತೆಯಿದೆ. ಇದರಿಂದ ರಸ್ತೆ ಅಪಘಾತಗಳಿಗೂ ಆಹ್ವಾನ ನೀಡಿದಂತಾಗುತ್ತದೆ.
ಈ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಚಾಲನೆ ವೇಳೆ ಟೇಪ್ ರೆಕಾರ್ಡರ್ಗಳನ್ನು ಬಳಸಬಾರದು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಂಚರಿಸಬೇಕು ಎಂದು ಪೊಲೀಸ್ ಇಲಾಖೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ. ಆದರೂ ಕೆಲ ಚಾಲಕರು ಎಚ್ಚರಿಕೆಯನ್ನು ನಿರ್ಲಕ್ಷಿಸಿ ಜೋರಾಗಿ ಹಾಡುಗಳನ್ನು ಹಾಕಿಕೊಂಡು ಸಂಚರಿಸುತ್ತಿರುವುದರಿಂದ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ರಸ್ತೆ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಕಬ್ಬು ಸಾಗಣೆ ಮಾಡುವ ಟ್ರ್ಯಾಕ್ಟರ್ ಚಾಲಕರು ಸಂಚಾರ ನಿಯಮಗಳನ್ನು ಪಾಲಿಸುವುದರೊಂದಿಗೆ ಇತರ ವಾಹನ ಸವಾರರ ಸುರಕ್ಷತೆಗೂ ಆದ್ಯತೆ ನೀಡಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande